ರೈತರ ಸಮಸ್ಯೆಗಳು ವಿಧಾನಸೌಧಕ್ಕೆ ತಲುಪಬೇಕಿದೆ : ಭಾಸ್ಕರ್ ಕೋಟ್ಯಾನ್

Update: 2016-06-26 11:47 GMT

ಮೂಡುಬಿದಿರೆ,ಜೂ.26: ಕೃಷಿ ಅಗತ್ಯವಾಗಿ ಬೇಕು ಆದರೆ ಈಗಿನ ಪರಿಸ್ಥಿತಿಯಲ್ಲಿ ಕೃಷಿಯನ್ನು ಜಾಗೃತೆ ವಹಿಸಿ ಮಾಡಬೇಕಾಗಿದೆ. ರೈತರ ಏಳಿಗೆಗಾಗಿ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತಂದರೂ ಅದರ ಪ್ರಯೋಜನ ರೈತರಿಗೆ ಸಿಗುತ್ತಿಲ್ಲ. ರೈತರು ಬೆಳೆಯುವ ಬೆಳೆಗಳಿಗೆ ಮಾರುಕಟ್ಟೆಯ ಕೊರತೆ, ಕೂಲಿಯಾಳುಗಳ ಸಮಸ್ಯೆ, ಧಾರಣೆ ಕುಸಿತದಿಂದ ರೈತರು ಅತಂತ್ರಸ್ಥಿತಿಯಲ್ಲಿದ್ದಾರೆ ಈ ನಿಟ್ಟಿನಲ್ಲಿ ರೈತರ ಸಮಸ್ಯೆಗಳ ಕುರಿತು ವಿಧಾನಸೌಧದಲ್ಲಿ ಶಾಸಕರು ಮಾತನಾಡಬೇಕಾಗಿದೆ ಎಂದು ಎಸ್‌ಸಿಡಿಸಿಸಿ ಬ್ಯಾಂಕ್ ನಿರ್ದೇಶಕ ಭಾಸ್ಕರ ಎಸ್ ಕೋಟ್ಯಾನ್ ಹೇಳಿದರು. ಅವರು ಕೃಷಿ ವಿಚಾರ ವಿನಿಮಯ ಕೇಂದ್ರ ಮೂಡುಬಿದಿರೆ ಹಾಗೂ ಬೆಳುವಾಯಿ ಸಹಕಾರಿ ವ್ಯವಸಾಯಿಕ ಬ್ಯಾಂಕ್ ವತಿಯಿಂದ ಶನಿವಾರ ಬ್ಯಾಂಕ್ ಸಭಾಭವನದಲ್ಲಿ ನಡೆದ ವೈಜ್ಞಾನಿಕ ಪದ್ಧತಿಯ ಭತ್ತ ಮತ್ತು ಲಾಭದಾಯಕ ಪಪ್ಪಾಯಿ ಕೃಷಿ ಕುರಿತ ಸಂವಾದ - ಪ್ರಾತ್ಯಕ್ಷಿತೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಆರೋಗ್ಯದ ದೃಷ್ಠಿಯಿಂದ ಪಪ್ಪಾಯಿ ಬೇಕು. ತೋಟಗಾರಿಕಾ ಇಲಾಖೆಯು ನೀಡುವ ಕೃಷಿ ಸಂಬಂಧಿ ವಸ್ತುಗಳು ಹಾಗೂ ಬೀಜಗಳು ಕಳಪೆಯಾಗಿರುವುದರಿಂದ ರೈತರಿಗೆ ಯಾವುದೇ ಪ್ರಯೋಜನವಿಲ್ಲದಂತಾಗಿದೆ. ಕೃಷಿಕರಿಗೆ ಸಾಲ ನೀಡಬೇಕೆಂದು ಸರಕಾರವು ಹೇಳುತ್ತಿದೆ ಆದರೆ ಬ್ಯಾಂಕ್‌ಗಳಲ್ಲಿ, ಸೊಸೈಟಿಗಳಲ್ಲಿ ಹಣ ಇಲ್ಲದಿದ್ದರೆ ಸಾಲ ನೀಡುವುದು ಎಲ್ಲಿಂದ ಎಂದು ಪ್ರಶ್ನಿಸಿದ ಅವರು ಸರ್ಕಾರ ಸಬ್ಸಿಡಿಯ ಮೂಲಕ ಯಂತ್ರೋಪಕರಣಗಳನ್ನು ನೀಡುತ್ತಿದೆ ಆದರೆ ಆ ಯಂತ್ರಗಳನ್ನು ರೈತರೆ ಮಾರ್ಕೆಟಿನಲ್ಲಿ ಹೋಗಿ ತೆಗೆದುಕೊಂಡರೆ ಆ ಯಂತ್ರಗಳಿಗೆ ಸಬ್ಸಿಡಿ ಬಿಟ್ಟು ಸಿಗುವ ಹಣದಲ್ಲಿಯೇ ಖರೀದಿಸಲು ಸಾಧ್ಯವಾಗುತ್ತದೆ.ಈ ಮೂಲಕ ಸರಕಾರವು ರೈತರನ್ನು ಕಡೆಗಣಿಸುತ್ತಿದೆ ಅದರಿಂದ ಹೆಚ್ಚಿನ ಪ್ರಯೋಜನ ಕೃಷಿಕರಿಗೆ ಲಭಿಸುತ್ತಿಲ್ಲ ಎಂದು ಆರೋಪಿಸಿದರು.

ಮುಖ್ಯ ಅತಿಥಿಯಾಗಿ, ಭಾಗವಹಿಸಿದ ಬೆಳುವಾಯಿ ಗ್ರಾ.ಪಂ ಅಧ್ಯಕ್ಷ ಭಾಸ್ಕರ ಆಚಾರ್ಯ, ರೈತರಿಗೆ ಸಂಬಂಧಿಸಿ ಪ್ರದೇಶವಾರು ಕಾನೂನುಗಳು ಜಾರಿಗೆ ಬಂದಾಗ ಮಾತ್ರ ರೈತರಿಗೆ ಪ್ರಯೋಜನವಾಗಬಹುದು ಎಂದರು. ಸಮಾರಂಭದ ಅಧ್ಯಕ್ಷತೆ ವಹಿಸಿದ ಕೃಷಿ ವಿಚಾರ ವಿನಿಮಯ ಕೇಂದ್ರದ ಅಧ್ಯಕ್ಷ ರಾಜವರ್ಮ ಬೈಲಂಗಡಿ ಮಾತನಾಡಿ ಕೃಷಿಯನ್ನು ಬದ್ಧತೆಯಿಂದ ಮಾಡಿದರೆ ಅದನ್ನು ಲಾಭದಾಯಕವನ್ನಾಗಿಸಬಹುದು. ಕೃಷಿ ಲಾಭದಾಯಕವಲ್ಲದಿದ್ದರೂ ಆರೋಗ್ಯದಾಯಕವಾಗಿದೆ. ವಿದ್ಯಾವಂತರು ಕೃಷಿಯತ್ತ ಆಕರ್ಷಿತರಾಗಬೇಕು ಎಂದರು. ಬೆಳುವಾಯಿ ಗ್ರಾ. ಪಂ ಮಾಜಿ ಅಧ್ಯಕ್ಷ ರಾಘು ಪೂಜಾರಿ, ಸಿ.ಎ ಬ್ಯಾಂಕ್ ಮಾಜಿ ಅಧ್ಯಕ್ಷ ಜಯರಾಜ್, ಭಾಗವಹಿಸಿದರು. ಕೆ.ವಿಕೆ ಮಂಗಳೂರಿನ ಬೇಸಾಯ ಶಾಸ್ತ್ರದ ವಿಜ್ಷಾನಿ ಡಾ. ಹರೀಶ್ ಶೆಣೈ ವೈಜ್ಞಾನಿಕ ಪದ್ಧತಿಯ ಭತ್ತದ ಕುರಿತು, ಕೆವಿಕೆಯ ಚೈತನ್ಯ ಲಾಭದಾಯಕ ಪಪ್ಪಾಯಿ ಕೃಷಿಯ ಕುರಿತು ಮಾಹಿತಿ ನೀಡಿದರು.  ವಲಯ ರೈತ ಸಂಘದ ಅಧ್ಯಕ್ಷ ಧನಕೀರ್ತಿ ಬಲಿಪ ಸ್ವಾಗತಿಸಿದರು. ಸಿ.ಎ ಬ್ಯಾಂಕ್ ಪ್ರಬಂಧಕ ಸುರೇಶ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ದಯಾನಂದ ಭಟ್ ಕಾರ್ಯಕ್ರಮ ನಿರ್ವಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News