‘ನಾನು ವೈದ್ಯ... ಅತ್ಯಾಚಾರದ ವಿರುದ್ಧ ನಿಂತಿದ್ದೇನೆ’

Update: 2016-06-26 18:35 GMT

ಉಡುಪಿ, ಜೂ.26: ‘ಅತ್ಯಾಚಾರದ ವಿರುದ್ಧ ನಿಲ್ಲಿ. ನಾನು ವೈದ್ಯ, ನಾನು ಅತ್ಯಾಚಾರದ ವಿರುದ್ಧ ನಿಂತಿದ್ದೇನೆ’, ‘ನಿಮಗೆ ಗೊತ್ತಿರುವವರು ಅತ್ಯಾಚಾರಕ್ಕೆ ಒಳಗಾದಾಗ ಮಾತ್ರ ಧ್ವನಿ ಎತ್ತುವಿರಾ?’.... ಕೈಯಲ್ಲಿ ಇಂತಹ ಬರವಣಿಗೆಯ ಫಲಕಗಳನ್ನು ಹಿಡಿದು, ಬಾಯಿಗೆ ಮಾಸ್ಕ್ ಹಾಕಿಕೊಂಡು ಮಂಗಳೂರಿನ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು ಆಸ್ಪತ್ರೆಯ ವೈದ್ಯ ಡಾ.ನೋಯೆಲ್ ಮ್ಯಾಥ್ಯೂ(25) ದೇಶದ ಪ್ರಮುಖ ನಗರಗಳಲ್ಲಿ ಏಕಾಂಗಿಯಾಗಿ ಒಂದೆಡೆ ನಿಂತು ಅತ್ಯಾಚಾರದ ವಿರುದ್ಧ ಜಾಗೃತಿ ಅಭಿಯಾನ ನಡೆಸುತ್ತಿದ್ದಾರೆ.

2016ರ ಮೇ 15ರಂದು ಕೇರಳದ ಕೊಚ್ಚಿಯ ಲುಲು ಮಾಲ್ ಎದುರು ಮೊತ್ತಮೊದಲಿಗೆ ಈ ಅಭಿಯಾನವನ್ನು ಆರಂಭಿಸಿರುವ ಇವರು ಮೇ 29ರಂದು ಮಂಗಳೂರು, ಜೂ.6ರಂದು ಬೆಂಗಳೂರು, ಜೂ.17ರಂದು ಕುಂದಾಪುರ ಹಾಗೂ ಇಂದು ಮಣಿಪಾಲದಲ್ಲಿ ನಡೆಸಿದರು. ಸಂಜೆ 4:30ರಿಂದ ಸಂಜೆ ಆರು ಗಂಟೆ ಯವರೆಗೆ ಮಣಿಪಾಲದ ಬಸ್ ನಿಲ್ದಾಣದಲ್ಲಿ ಮಳೆ ಬಿಸಿಲು ಎನ್ನದೆ ವೌನವಾಗಿ ಒಬ್ಬನೇ ನಿಂತುಕೊಂಡು ಫಲಕಗಳ ಮೂಲಕ ಅತ್ಯಾಚಾರ ವಿರುದ್ಧ ನಿಲ್ಲುವಂತೆ ಜನರನ್ನು ಜಾಗೃತರನ್ನಾಗಿಸಿದರು.

ಕೇರಳ ರಾಜ್ಯದ ಚೆಂಗನ್ನೂರಿನ ಕುರಿಯ ಕೋಸ್ ಹಾಗೂ ಲೇಖಾ ದಂಪತಿ ಪುತ್ರರಾಗಿರುವ ಇವರು, ಮಂಗಳೂರಿನ ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜಿನಲ್ಲಿ ತನ್ನ ಎಂಬಿಬಿಎಸ್ ಪದವಿ ಮುಗಿಸಿ ನಂತರ ಅಲ್ಲೇ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ತಂದೆ ಓಮನ್‌ನಲ್ಲಿ ಉದ್ಯಮಿಯಾಗಿದ್ದಾರೆ. ದೇಶಾದ್ಯಂತ ಅಭಿಯಾನ: ಈಗಾಗಲೇ ಐದು ನಗರಗಳಲ್ಲಿ ಅತ್ಯಾಚಾರ ವಿರುದ್ಧ ಅಭಿಯಾನ ನಡೆಸಿರುವ ಡಾ.ನೋಯೆಲ್ ಜುಲೈ ತಿಂಗಳಲ್ಲಿ ಚೆನ್ನೈಯಲ್ಲಿ, ಮುಂದೆ ದಿಲ್ಲಿ, ಮುಂಬೈ, ಪಂಜಾಬ್, ಲಕ್ನೋ, ಹೈದರಾಬಾದ್‌ಗಳಲ್ಲಿ 2017ರ ಜೂ.17ರವರೆಗೆ ಈ ಅಭಿಯಾನವನ್ನು ನಡೆಸಲಿದ್ದಾರೆ. ಹೀಗೆ ದೇಶಾದ್ಯಂತ ನಡೆಯುತ್ತಿರುವ ಅತ್ಯಾಚಾರದ ವಿರುದ್ಧ ಜನರು ಧ್ವನಿ ಎತ್ತುವಂತೆ ಮಾಡುವುದು ಇವರ ಅಭಿಯಾನದ ಉದ್ದೇಶ ವಾಗಿದೆ.

ವೃತ್ತಿಯ ಮಧ್ಯೆ ಕಾಳಜಿ

ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ವೈದ್ಯ ರಾಗಿರುವ ಡಾ.ನೋಯೆಲ್ ತಮ್ಮ ವೃತ್ತಿಯ ನಡುವೆ ಈ ಚಳವಳಿಗೆ ಇಳಿದಿದ್ದಾರೆ. ಮಂಗಳೂರು, ಕುಂದಾಪುರ, ಮಣಿಪಾಲದಲ್ಲಿ ಇವರು ಸಂಜೆ 4:30ರಿಂದ 6 ಗಂಟೆಯವರೆಗೆ ಈ ಅಭಿಯಾನವನ್ನು ನಡೆಸಿದ್ದು, ಬಳಿಕ ಸ್ಥಳೀಯರ ಸಹಕಾರದೊಂದಿಗೆ ಮೇಣದ ಬತ್ತಿಯೊಂದಿಗೆ ನಡಿಗೆ ಕಾರ್ಯಕ್ರಮವನ್ನು ನಡೆಸಿದ್ದಾರೆ. ವೈದ್ಯ ವೃತ್ತಿಯ ಮಧ್ಯೆಯೂ ಸಾಮಾಜಿಕ ಕಾಳಜಿಯೊಂದಿಗೆ ಈ ರೀತಿ ಅಭಿಯಾನ ನಡೆಸುತ್ತಿರುವ ಡಾ.ನೋಯೆಲ್‌ರ ಕಾರ್ಯ ಎಲ್ಲರ ಪ್ರಶಂಸಗೆ ಪಾತ್ರವಾಗಿದೆ. ಇವರ ಈ ಹೋರಾಟಕ್ಕೆ ಆಸ್ಪತ್ರೆಯ ಆಡಳಿತ ಮಂಡಳಿಯೂ ಬೆಂಬಲವಾಗಿ ನಿಂತಿದೆ. ‘ನನ್ನಿಂದ ಎಷ್ಟು ಸಾಧ್ಯವೋ ಅಷ್ಟು ಕೆಲಸ ಮಾಡುತ್ತಿದ್ದೇನೆ. ನಾನು ಬಸ್ ನಿಲ್ದಾಣದಲ್ಲಿ ಈ ರೀತಿ ಒಬ್ಬನೆ ನಿಂತಿರುವುದನ್ನು ಕಂಡು ಜನ ನನ್ನ ಬಳಿ ಬಂದು ಮಾತನಾಡುತ್ತಾರೆ. ಬಸ್‌ನಲ್ಲಿ ಹೋಗುವವರು ಫಲಕಗಳನ್ನು ಓದುತ್ತಾರೆ. ಹೀಗೆ ಸಾರ್ವಜನಿಕರ ಮನದಲ್ಲಿ ಅಲ್ಪಸ್ವಲ್ಪವಾದರೂ ಅತ್ಯಾಚಾರದ ವಿರುದ್ಧ ಜಾಗೃತಿ ಮೂಡುವಂತೆ ಮಾಡುತ್ತಿದ್ದೇನೆ ಎಂಬ ತೃಪ್ತಿ ನನಗೆ ಇದೆ’ ಎಂದು ಡಾ.ನೋಯೆಲ್ ಮ್ಯಾಥ್ಯೂ ಹೇಳಿಕೊಂಡರು.

‘ಆ್ಯಂಟಿ ರೇಪ್ ಸ್ಕಾಡ್ ಇಂಡಿಯಾ’ ಎಂಬ ಫೇಸ್‌ಬುಕ್ ಪೇಜ್‌ನ್ನು ತೆರೆದಿರುವ ಇವರು, ಆ ಮೂಲಕ ಯುವ ಜನತೆಯನ್ನು ಸಂಘಟಿಸುವ ಕಾರ್ಯ ಕೂಡ ಮಾಡುತ್ತಿದ್ದಾರೆ. ಸಾಮಾಜಿಕ ತಾಣದಲ್ಲಿ ಇದರ ಬಗ್ಗೆ ಜಾಗೃತಿ ಮೂಡಿಸುವ ಇವರ ಕೆಲಸಕ್ಕೆ ಸಾಕಷ್ಟು ಬೆಂಬಲ ವ್ಯಕ್ತವಾಗಿದೆ.

‘ಅತ್ಯಾಚಾರಕ್ಕೆ ಒಳಗಾಗುವ ಮಹಿಳೆಯರ ಪರ ಹಾಗೂ ಅತ್ಯಾಚಾರಿಗಳ ವಿರುದ್ಧ ಹಲವು ಯೋಜನೆ ಹಾಗೂ ಕಾನೂನು ಜಾರಿಗೆ ತರಬೇಕೆಂಬುದು ನನ್ನ ಬೇಡಿಕೆ. ಈ ವಿಚಾರದಲ್ಲಿ ಸರಕಾರದ ಗಮನ ಸೆಳೆಯುವುದು ನನ್ನ ಮುಖ್ಯ ಉದ್ದೇಶವಾಗಿದೆ. ದೇಶದಲ್ಲಿ ಪ್ರತಿವರ್ಷ ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಸರಿಸುಮಾರು 25 ಸಾವಿರ ಪ್ರಕರಣಗಳು ದಾಖಲಾಗುತ್ತಿವೆ. ಪ್ರತಿದಿನ 50 ಅತ್ಯಾಚಾರ ಪ್ರಕರಣಗಳು ನಡೆಯುತ್ತಿರುತ್ತವೆ’.

-ಡಾ.ನೋಯೆಲ್


 ‘ಅತ್ಯಾಚಾರಕ್ಕೆ ಒಳಗಾದ ಮಹಿಳೆಯರು ಪೊಲೀಸ್ ಠಾಣೆಗೆ ಹೋಗಲು ಭಯಪಡುತ್ತಾರೆ. ಹಾಗಾಗಿ ಅವರಿಗೆ ಅನುಕೂಲವಾಗುವಂತೆ ದೇಶಾದ್ಯಂತ ದಿನದ 24 ಗಂಟೆಗಳ ಸೇವೆ ನೀಡುವ ಹೆಲ್ಪ್‌ಲೈನ್‌ನ್ನು ಸರಕಾರ ಆರಂಭಿಸಬೇಕು. ಪ್ರತಿ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ವಿರೋಧಿ ಪಡೆಯನ್ನು ರಚಿಸಬೇಕು. ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಈಗ ಇರುವ ಕಾನೂನಿನಲ್ಲಿ ಹಲವು ದೋಷಗಳಿವೆ. ಇದರಿಂದ ಅತ್ಯಾಚಾರಿಗಳು ಸುಲಭದಲ್ಲಿ ಶಿಕ್ಷೆಯಿಂದ ಪಾರಾಗುತ್ತಿದ್ದಾರೆ. ಅದಕ್ಕಾಗಿ ಆ ಕಾನೂನನ್ನು ಇನ್ನಷ್ಟು ಬಲಗೊಳಿಸಿ ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು.
                                    -ಡಾ.ನೋಯೆಲ್

Writer - ನಝೀರ್ ಪೊಲ್ಯ

contributor

Editor - ನಝೀರ್ ಪೊಲ್ಯ

contributor

Similar News