ಕಡಬ: ರಾಮಕುಂಜೇಶ್ವರ ಪ್ರೌಢಶಾಲೆಯಲ್ಲಿ ವಿವಿಧ ಸಂಘಗಳ ಉದ್ಘಾಟನೆ

Update: 2016-06-27 09:20 GMT

ಕಡಬ, ಜೂ.27: ವಿದ್ಯಾರ್ಥಿಗಳು ತಮ್ಮ ಕಲಿಕೆಯ ಸಂದರ್ಭಗಳಲ್ಲಿ ಶಾಲೆಯ ವಿವಿಧ ಸಂಘಗಳ ಕಾರ್ಯ ಚಟುವಟಿಕೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಾಗ ಭವಿಷ್ಯದ ಭರವಸೆಗಳಿಗೆ ಭದ್ರ ಬುನಾದಿ ಹಾಕಿ ವ್ಯಕ್ತಿತ್ವ ವಿಕಸನಕ್ಕೆ ಪುರಕ ವಾತಾವರಣ ನಿರ್ಮಾಣವಾಗುತ್ತದೆ ಎಂದು ಕಡಬ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಎಸ್. ಬಾಲಕೃಷ್ಣ ಕೊಯ್ಲ ಹೇಳಿದರು.

ಅವರು ಶ್ರೀ ರಾಮಕುಂಜೇಶ್ವರ ಕನ್ನಡ ಮಾಧ್ಯಮ ಪ್ರೌಢ ಶಾಲಾ ವಿದ್ಯಾರ್ಥಿಗಳ ವಿವಿಧ ಸಂಘಗಳನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಇಂದು ವಿದ್ಯಾರ್ಥಿಗಳಿಗೆ ಕಲಿಕೆಗೆ ಯಾವುದೇ ಸಮಸ್ಯೆಗಳಿಲ್ಲ. ಆದರೆ ಉತ್ತಮ ನಾಯಕತ್ವ ಗುಣಗಳನ್ನು ರೂಢಿಸಿಕೊಳ್ಳುವ ಕಾರ್ಯಚಟುವಟಿಕೆಗಳು ಕಡಿಮೆಯಾಗುತ್ತಿವೆ. ಶಾಲೆಯಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಗಳಲ್ಲಿ ಅವರದ್ದೆ ಆದ ಪ್ರತಿಭೆಗಳಿದ್ದು, ಅವುಗಳನ್ನು ಹೊರತೆಗೆಯಬೇಕಾದರೆ ಸಂಘಟನೆಗಳ ಅನಿವಾರ್ಯತೆ ಇದೆಯೆಂದರು.

ಎಳವೆಯಲ್ಲಿ ಸಂಘಟನೆಗಳಲ್ಲಿ ತೊಡಗಿಸಿಕೊಂಡವರು ಇಂದು ಸಮಾಜಕ್ಕೆ ಆಸ್ತಿಯಾಗಿದ್ದಾರೆ. ವಿದ್ಯಾರ್ಥಿಗಳು ತಮಗೆ ಸಿಕ್ಕ ಅವಕಾಶವನ್ನು ಸದ್ಬಳಕೆ ಮಾಡಿಕೊಂಡು ಪರಿಪುರ್ಣ ಪ್ರತಿಭಾವಂತರಾಗಿ ಹೊರ ಹೊಮ್ಮುವುದರೊಂದಿಗೆ ಸಮಾಜದ ಆಸ್ತಿಯಾಗಿ ರಾಷ್ಟ್ರಕಟ್ಟುವ ಕಾಯಕಕ್ಕೆ ಮುಂದಾಗಬೇಕು ಎಂದು ಹೇಳಿದ ಅವರು ಕೋಟ್ಯಾಂತರ ಭಕ್ತರನ್ನು ಹೊಂದಿರುವ ಪೇಜಾವರ ಮಠಾಧೀಶ ಶ್ರಿ ವಿಶ್ವೆಶ ತೀರ್ಥ ಸ್ವಾಮೀಜಿಯವರ ನೇತೃತ್ವದಲ್ಲಿ ನಡೆಯುತ್ತಿರುವ ವಿದ್ಯಾಸಂಸ್ಥೆಯಲ್ಲಿ ಸಂಸ್ಕಾರಯುತ, ಜೀವನ ಪಾಠದ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳು ಧನ್ಯರು ಎಂದರು.

ಸಮಾರಂಭದ ಅಧ್ಯಕ್ಷತೆವಹಿಸಿದ್ದ ಶಾಲಾ ಮುಖ್ಯಗುರು ಸತೀಶ್ ಭಟ್ ಮಾತನಾಡಿ, ಎಲ್ಲಾ ಪ್ರತಿಭೆಗಳನ್ನು ಅನಾವರಣ ಮಾಡಲು ಒಂದೇ ಸೂರಿನಡಿ ಒಟ್ಟು 14 ಸಂಘಗಳನ್ನು ಪ್ರಾರಂಭಿಸಲಾಗಿದೆ. ಎಲ್ಲಾ ವಿದ್ಯಾರ್ಥಿಗಳನ್ನು ಅವರ ಪ್ರತಿಭೆಗಳಿಗೆ ಅನುಸಾರವಾಗಿ ಒಂದಲ್ಲಾ ಒಂದು ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಮಾಡುವುದೇ ನಮ್ಮ ಉಶವಾಗಿದೆ. ಕನ್ನಡ ಮಾಧ್ಯಮ ವಿದ್ಯಾರ್ಥಿಗಳು ಕೂಡಾ ಆಂಗ್ಲ ಭಾಷೆಯಲ್ಲಿ ಪರಿಣತಿ ಹೊಂದಬೇಕು ಎನ್ನುವ ನೆಲೆಯಲ್ಲಿ ಇಂಗ್ಲಿಷ್ ಸ್ಪಿಕಿಂಗ್ ಕೋರ್ಸ್ ಪ್ರಾರಂಭಿಸಲಾಗುವುದು. ಭಾಷಣೆ ಕಲೆಯಲ್ಲಿ ಪರಿಣತಿ ಹೊಂದುವಂತೆ ತರಬೇತಿ ನೀಡಲಾಗುವುದು. ಮುಖ್ಯವಾಗಿ ಸಂಸತ್ ಅಧಿವೇಶನ ನಡೆಸಲಾಗುವುದು ಎಂದು ಹೇಳಿದರು. ಶಿಕ್ಷಕಿಯರಾದ ಮಲ್ಲಿಕಾ ಹಾಗೂ ಮಮತಾ, ಶಿಕ್ಷಕ ಜನಾರ್ಧನ ಮೊದಲಾದವರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಿಗೆ ಪ್ರಮಾಣವಚನ ಬೋಧಿಸಲಾಯಿತು. ಶಿಕ್ಷಕಿ ಪುಷ್ಪಾವತಿ ಪ್ರಸ್ತಾವನೆಗೈದರು. ಶಿಕ್ಷಕ ದಿನೇಶ್ ಸ್ವಾಗತಿಸಿ, ಶಿಕ್ಷಕ ಬಾಲಚಂದ್ರ ಮುಂಚಿತ್ತಾಯ ವಂದಿಸಿದರು. ಶಿಕ್ಷಕ ಪ್ರವೀಣ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.

ಈ ಸಮಾರಂಭದಲ್ಲಿ ಕಡಬ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಎಸ್.ಬಾಲಕೃಷ್ಣ ಕೊಯ್ಲರನ್ನು ಮುಖ್ಯಗುರು ಸತೀಶ್ ಭಟ್ ಸನ್ಮಾನಿಸಿ, ಗೌರವಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News