ಕಟ್ಟಡ ಕಾರ್ಮಿಕನಿಂದ ಮರಳು ಸಂಸ್ಕರಣೆ ಯಂತ್ರ ಆವಿಷ್ಕಾರ

Update: 2016-06-27 18:42 GMT

ಉಡುಪಿ, ಜೂ.27: ಕಟ್ಟಡ ನಿರ್ಮಾಣ ಕಾರ್ಮಿಕರೊ ಬ್ಬರು ಕಸದಿಂದ ರಸ ಎಂಬಂತೆ ಗುಜರಿ ಸಾಮಗ್ರಿಗಳನ್ನು ಬಳಸಿಕೊಂಡು ವಿದ್ಯುತ್ ಚಾಲಿತ ಮರಳು ಸಂಸ್ಕರಿಸುವ (ಹೊಯ್ಗೆ ಸೋಸುವ) ಯಂತ್ರವನ್ನು ಆವಿಷ್ಕರಿಸಿ ವಿಶಿಷ್ಟ ಸಾಧನೆ ಮೆರೆದಿದ್ದಾರೆ.
ಗಾರೆ ಕೆಲಸ ಮಾಡುವ ಕುಂದಾಪುರ ತಾಲೂಕಿನ ಹಕ್ಲಾಡಿ ಗ್ರಾಮದ ಚಂದ್ರಶೇಖರ್ ಮೊಗವೀರ (54) ಈ ಹೊಸ ಯಂತ್ರ ಆವಿಷ್ಕರಿಸಿದ ಕಾರ್ಮಿಕ. ಇತ್ತೀಚಿನ ದಿನಗಳಲ್ಲಿ ಮರಳಿನ ಆವಶ್ಯಕತೆ ಹೆಚ್ಚುತ್ತಿದ್ದು, ಎಷ್ಟು ಮರಳು ಸಂಸ್ಕರಿಸಿದರೂ ಬೇಡಿಕೆ ಈಡೇರಿಸಲು ಸಾಧ್ಯವಾ ಗದೆ ಇರುವುದನ್ನು ಮನಗಂಡ ಚಂದ್ರಶೇಖರ್ ಈ ಪ್ರಯತ್ನಕ್ಕೆ ಕೈಹಾಕಿ ಯಶ ಕಂಡಿದ್ದಾರೆ.
ದೈಹಿಕ ಶ್ರಮದಿಂದ ನಾಲ್ವರು ಒಂದಿಡೀ ದಿನ ಅರ್ಧ ಲಾರಿ ಲೋಡ್ ಮರಳು ಸಂಸ್ಕರಿಸಿದರೆ, ಈ ಯಂತ್ರದ ಮೂಲಕ ಕೇವಲ ಇಬ್ಬರು ಒಂದು ದಿನಕ್ಕೆ ಮೂರು ಲೋಡ್ ಮರಳನ್ನು ಸಂಸ್ಕರಿಸಬಹುದಾಗಿದೆ. ಜಾಲಿಯನ್ನು ಬದಲಾಯಿಸಿ ಕಾಂಕ್ರಿಟ್‌ಗೆ ಬಳಸಲು ದೊಡ್ಡ ಮರಳು, ಸಣ್ಣ ಮರಳನ್ನು ಸಂಸ್ಕರಿಸುವ ವ್ಯವಸ್ಥೆಯನ್ನು ಕೂಡ ಈ ಯಂತ್ರದಲ್ಲಿ ಕಲ್ಪಿಸಲಾಗಿದೆ. ಅಲ್ಲದೆ ಮರಳಲ್ಲಿರುವ ಕಲ್ಲು ತ್ಯಾಜ್ಯಗಳನ್ನು ಹೊರ ಎಸೆಯುವ ಸೌಲಭ್ಯವನ್ನು ಇದು ಹೊಂದಿದೆ. ಈ ಯಂತ್ರವನ್ನು ಒಂದೆಡೆಯಿಂದ ಇನ್ನೊಂದೆಡೆಗೆ ಸುಲಭವಾಗಿ ಕೊಂಡೊಯ್ಯಲು ಅನುಕೂಲವಾಗುವಂತೆ ಬೈಕಿನ ಎರಡು ಚಕ್ರಗಳನ್ನು ಜೋಡಿಸಲಾಗಿದೆ. ಯಂತ್ರ ವನ್ನು ಯಾವ ಕಡೆ ಬೇಕಾದರೂ ತಿರುಗಿಸುವುದಕ್ಕಾಗಿ ಕಿಂಗ್‌ಪಿನ್ ಸಿಸ್ಟಮ್ ಮೂಲಕ ಮುಂದುಗಡೆ ಎರಡು ಮರದ ಚಕ್ರವನ್ನು ಅಳವಡಿಸಲಾಗಿದೆ.

ಸಾಧನೆಗೆ ಪ್ರೇರಣೆಯಾದ ವೃತ್ತಿ
1977ರಿಂದ ಗಾರೆ ಕೆಲಸ ಮಾಡುತ್ತಿದ್ದ ಚಂದ್ರಶೇಖರ್ ಮೊಗವೀರ, ಅದಕ್ಕೂ ಮೊದಲು ಚಾಲಕರಾಗಿ, ಫಿಟ್ಟರ್ ಆಗಿ ಕೆಲಸ ನಿರ್ವಹಿಸಿದ್ದರು. ಕೆಲ ತಿಂಗಳ ಹಿಂದೆ ಇವರು ಕೆಲಸಕ್ಕೆ ಹೋದಲ್ಲಿ ನಾಲ್ಕು ಮಂದಿ ಒಂದು ದಿನದಲ್ಲಿ ಕೇವಲ ಅರ್ಧ ಲಾರಿ ಲೋಡ್ ಮರಳು ಸಂಸ್ಕರಿಸಿರುವುದನ್ನು ನೋಡಿ ಅದಕ್ಕೊಂದು ಪರಿಹಾರ ಕಂಡುಕೊಳ್ಳಬೇಕೆಂದು ಯೋಚನೆ ಮಾಡಿದರು. ಆಗ ಅವರಿಗೆ ಹೊಳೆದದ್ದು ಈ ಯಂತ್ರದ ಆವಿಷ್ಕಾರದ ಯೋಚನೆ.
ಗುಜರಿಯಿಂದ ತಂದ ಅರ್ಧ ಎಚ್‌ಪಿ ಮೋಟಾರ್, ಎಂ80 ದ್ವಿಚಕ್ರ ವಾಹನದ ಗೇರ್ ಬಾಕ್ಸ್, ಸೈಕಲ್ ರಿಮ್, ಜಾಲಿಯನ್ನು ಜೋಡಿಸಿ ಈ ಹೊಸ ಯಂತ್ರವನ್ನು ಅಭಿವೃದ್ಧಿ ಪಡಿಸಿದರು. ಇದಕ್ಕೆ ಇವರಿಗೆ 20 ಸಾವಿರಕ್ಕೂ ಅಧಿಕ ಹಣ ಖರ್ಚಾಗಿದೆ. ಅರ್ಧ ಎಚ್‌ಪಿ ಮೋಟಾರು ಅಳವಡಿಸಿರುವುದರಿಂದ ಇದಕ್ಕೆ ಹೆಚ್ಚು ವಿದ್ಯುತ್ ವ್ಯಯವಾಗಲ್ಲ ಎನ್ನುತ್ತಾರೆ ಚಂದ್ರಶೇಖರ್. ಈ ಯಂತ್ರವನ್ನು ಇನ್ನು ಕೂಡ ಅಭಿವೃದ್ಧಿಪಡಿಸುವ ಇಚ್ಛೆಯಿದೆ. ಮರಳನ್ನು ಯಂತ್ರವೇ ಒಳಗೆ ಎಸೆದು ಕೊಳ್ಳುವಂತೆ ಅಭಿವೃದ್ಧಿಪಡಿಸುತ್ತೇನೆ. ಈ ದಿಸೆಯಲ್ಲಿ ನನ್ನ ಪ್ರಯತ್ನ ಮುಂದುವರಿದಿದೆ ಎಂದು ಅವರು ತಿಳಿಸಿದ್ದಾರೆ.
ಸಿಐಟಿಯು ಕಟ್ಟಡ ಕಾರ್ಮಿಕರ ಸಂಘದ ಮುಖಂಡ ರಾಗಿರುವ ಚಂದ್ರಶೇಖರ್ ಮೊಗವೀರ, ಪತ್ನಿ ಸುಶೀಲಾ ಜೊತೆ ಬದುಕು ನಡೆಸುತ್ತಿದ್ದಾರೆ. ಇವರ ಮಗ ಮುಂಬೈಯಲ್ಲಿ ಕೆಲಸ ಮಾಡುತ್ತಿದ್ದು, ಮಗಳನ್ನು ಮುಂಬೈಗೆ ಮದುವೆ ಮಾಡಿಕೊಟ್ಟಿದ್ದಾರೆ.

ಎರಡು ತಿಂಗಳ ಹಿಂದೆ ಈ ಯಂತ್ರವನ್ನು ಆವಿಷ್ಕರಿಸಿದ್ದೇನೆ. ಈಗಾಗಲೇ ಅದರ ಟ್ರಯಲ್ ಕೂಡ ನೋಡಲಾಗಿದೆ. ಇದಕ್ಕೆ 20 ಸಾವಿರ ರೂ. ವೆಚ್ಚವಾಗಿದೆ. ಮುಂದೆ ಬೇಡಿಕೆ ಬಂದರೆ ಇನ್ನಷ್ಟು ಯಂತ್ರಗಳನ್ನು ತಯಾರಿಸಿ ಕೊಡಲು ನಾನು ಸಿದ್ಧ.
 -ಚಂದ್ರಶೇಖರ್ ಮೊಗವೀರ, ಕಟ್ಟಡ ಕಾರ್ಮಿಕ

 ಸಿಐಟಿಯು ಕಟ್ಟಡ ಕಾರ್ಮಿಕ ಸಂಘದ ಮುಖಂಡರಾಗಿರುವ ಚಂದ್ರಶೇಖರ್ ಮರಳು ಸಂಸ್ಕರಿಸುವ ಯಂತ್ರ ಅವಿಷ್ಕರಿಸುವ ಮೂಲಕ ವಿಶೇಷ ಸಾಧನೆ ಮಾಡಿದ್ದಾರೆ. ಅವರಿರುವ ಗ್ರಾಮಕ್ಕೆ ಸಭೆಗೆಂದು ಹೋದಾಗ ಈ ಯಂತ್ರವನ್ನು ನೋಡಿದ್ದೇನೆ. ಈ ಕ್ಷೇತ್ರದಲ್ಲಿ ಅವರು ಇನ್ನಷ್ಟು ಸಾಧನೆ ಮಾಡಲಿ.

-ಸುರೇಶ್ ಕಲ್ಲಾಗರ್, ಮುಖಂಡರು, ಸಿಐಟಿಯು ಕುಂದಾಪುರ

Writer - ನಝೀರ್ ಪೊಲ್ಯ

contributor

Editor - ನಝೀರ್ ಪೊಲ್ಯ

contributor

Similar News