ಸುಳ್ಯದಲ್ಲಿ ಗಾಳಿ-ಮಳೆಯ ಅಬ್ಬರ: ನೂರಾರು ವಿದ್ಯುತ್ ಕಂಬ, ಮರಗಳು ಧರಾಶಾಯಿ

Update: 2016-06-28 18:39 GMT

ಸುಳ್ಯ, ಜೂ.28: ತಾಲೂಕಿನಲ್ಲಿ ಗಾಳಿ-ಮಳೆಯ ಅಬ್ಬರ ಮುಂದುವರಿದಿದ್ದು, 150ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಧರೆಗೆ ಉರುಳಿವೆ. ಇದರಿಂದ ವಿದ್ಯುತ್ ಪೂರೈಕೆ ವ್ಯತ್ಯಯಗೊಂಡಿದೆ. ಹಲವೆಡೆ ಮರಗಳು ಬಿದ್ದು ಮನೆಗಳಿಗೆ ಹಾನಿ ಸಂಭವಿಸಿದೆ.
 ಬೆಟ್ಟಂಪಾಡಿಯ ಆಟೊಚಾಲಕ ಸುನೀಲ್ ಎಂಬವರ ಮನೆಯ ತಡೆಗೋಡೆ ಕುಸಿದಿದ್ದು, ಮನೆಯೂ ಅಪಾಯದ ಸ್ಥಿತಿಯಲ್ಲಿದೆ. ಇದರಿಂದ ಸುಮಾರು 50 ಸಾವಿರ ರೂ. ನಷ್ಟ ಅಂದಾಜು ಮಾಡಲಾಗಿದೆ. ಗಾಂಧಿನಗರ ಶಾಲಾ ಮೈದಾನದ ಎದುರಿನ ಟಿಂಬರ್ ಶಂಸುದ್ದೀನ್ ಎಂಬವರ ಮನೆಯ ಮೇಲೆ ಮರ ಬಿದ್ದು ಮನೆ ಭಾಗಶಃ ಹಾನಿಗೊಂಡಿದೆ. ಅಡುಗೆ ಕೋಣೆ ಸಂಪೂರ್ಣ ಧ್ವಂಸಗೊಂಡಿದೆ. ದಕ್ಷಿಣ ಬೀರಮಂಗಲದಲ್ಲಿ ಸುಳ್ಯಕ್ಕೆ ವಿದ್ಯುತ್ ಪೂರೈಕೆ ಮಾಡುವ 33 ಕೆ.ವಿ. ಲೈನ್ ಮೇಲೆ ಮರಬಿದ್ದ ಪರಿಣಾಮ 3 ಕಂಬಗಳು ಮುರಿದುಬಿದ್ದಿದ್ದು, ಸುಳ್ಯಕ್ಕೆ ವಿದ್ಯುತ್ ಸರಬರಾಜು ಸ್ಥಗಿತಗೊಂಡಿದೆ. ರವೀಂದ್ರ ಕೊಯಿಂಗೋಡಿ ಎಂಬವರ ಮನೆಗೆ ಮಾವಿನಮರ ಮುರಿದುಬಿದ್ದು ಹಾನಿಯಾಗಿದೆ. ಲತೀಫ್ ಎಂಬವರ ಮನೆಯ ಶೀಟ್‌ಗಳು ಮತ್ತು ಕೆಲವು ಹೆಂಚು ಗಳು ಹಾರಿಹೋಗಿವೆ. ಹಸನ್ ಹಾಜಿ ಎಂಬವರ ಮನೆಯೆದುರಿದ್ದ ಮರ ಬುಡ ಸಮೇತ ಉರುಳಿ ಬಿದ್ದ ಪರಿಣಾಮ ಪಕ್ಕದ ಮನೆಯ ಟೆರೇಸ್‌ಗೆ ಹಾನಿಯಾಗಿದೆ. ಸುಳ್ಯ ಮುಖ್ಯರಸ್ತೆಯಲ್ಲಿ ಸೋಮವಾರ ಲಾರಿಯ ಮೇಲೆ ಮರ ಉರುಳಿ ಬಿದ್ದಾಗ ಹಲವು ವಿದ್ಯುತ್ ಕಂಬಗಳು ಧರಾಶಾಯಿಯಾಗಿವೆ. ಇದರಿಂದಾಗಿ ವಿದ್ಯುತ್ ಸರಬರಾಜು ಅಸ್ತವ್ಯಸ್ತಗೊಂಡಿದೆ. ಪಂಜಿಗುಂಡಿಯಲ್ಲಿ ರಾಜ್ಯ ಹೆದ್ದಾರಿಗೆ ಮರ ಬಿದ್ದು ಅರ್ಧಗಂಟೆ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಸುಳ್ಯ ಮಹಿಳಾ ಸಮಾಜದ ಎದುರಿನ ಗೂಡಂಗಡಿಯೊಂದರ ಮೇಲೆ ಮರಬಿದ್ದು ಹಾನಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News