ಸುಳ್ಯ: ಆಯುರ್ವೇದ ಮಾಹಿತಿ ನೀಡುವ ಆಂಡ್ರಾಯ್ಡ್ ಆ್ಯಪ್ ಬಿಡುಗಡೆ

Update: 2016-06-29 13:09 GMT

ಸುಳ್ಯ,ಜೂ.29: ಸುಳ್ಯ ಹಳೆಗೇಟಿನ ಆಯುರ್ಧಾಮ ಆಯುರ್ವೇದ ಆಸ್ಪತ್ರೆಯ ನಿರ್ದೇಶಕ ಡಾ.ಹರಿಪ್ರಸಾದ್ ಶೆಟ್ಟಿಯವರ ಮುತುವರ್ಜಿಯಲ್ಲಿ ಆಂಡ್ರಾಯ್ಡ್ ಮೊಬೈಲ್ ಅಪ್ಲಿಕೇಶನ್ ‘ಆಯುರ್ಧಾಮ ಮೆಡಿಸಿನ್ ಬುಕ್’ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಬಿಡುಗಡೆಗೊಂಡಿದೆ.

ಆಯುರ್ವೇದ ವಿಜ್ಞಾನದಲ್ಲಿ ಆಸಕ್ತಿಯಿರುವ ವಿದ್ಯಾರ್ಥಿಗಳು, ವೃತ್ತಿನಿರತರು ಹಾಗೂ ಜನ ಸಾಮಾನ್ಯರ ಅಗತ್ಯ ಮಾಹಿತಿಗಾಗಿ ಸಿದ್ಧಪಡಿಸಲಾದ ‘ಆಯುರ್ಧಾಮ ಮೆಡಿಸಿನ್ ಬುಕ್’ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಲಭ್ಯವಿದ್ದು ಆಂಡ್ರಾಯ್ಡ್ ಮೊಬೈಲ್ ಬಳಕೆದಾರರು ಸಂಪೂರ್ಣ ಉಚಿತವಾಗಿ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ.

ಕೇವಲ 5.5 ಎಂ.ಬಿ. ಗಾತ್ರದ ಈ ಅಪ್ಲಿಕೇಶನ್ ಎಲ್ಲಾ ಆಯುರ್ವೇದ ಔಷಧಿಗಳನ್ನು ಪರಿಚಯಿಸುವ ಪ್ರಯತ್ನವನ್ನು ಮಾಡಿದೆ. ಅರಿಷ್ಟ, ಚೂರ್ಣ, ಕಷಾಯ, ಲೇಹ ಸೇರಿದಂತೆ ವಿವಿಧ ಪ್ರಾಕಾರಗಳ ಆಯುರ್ವೇದಿಕ್ ಔಷಧಿಗಳ ಘಟಕಾಂಶಗಳು, ಔಷಧಿಯನ್ನು ಯಾವಾಗ ತೆಗೆದುಕೊಳ್ಳಬಹುದು ಎಂಬುದರ ಬಗ್ಗೆ ಸೂಚನೆಗಳು ಮತ್ತು ರೋಗಿಯು ತೆಗೆದುಕೊಳ್ಳಬಹುದಾದ ಔಷಧಿಯ ಪ್ರಮಾಣದ ಮಾಹಿತಿಯನ್ನು ಈ ಅಪ್ಲಿಕೇಶನ್‌ನಲ್ಲಿ ನೀಡಲಾಗಿದೆ ಎನ್ನುತ್ತಾರೆ ಡಾ.ಹರಿಪ್ರಸಾದ್ ಶೆಟ್ಟಿ.

ವಿಶೇಷವಾಗಿ ಆಯುರ್ವೇದ ವಿದ್ಯಾರ್ಥಿಗಳು ಮತ್ತು ವೃತ್ತಿನಿರತ ಆಯುರ್ವೇದ ವೈದ್ಯರ ಅಗತ್ಯಕ್ಕೆ ರೂಪಿಸಲಾದ ಈ ಆಂಡ್ರಾಯ್ಡಾ ಮೊಬೈಲ್ ಅಪ್ಲಿಕೇಶನ್ ಅನ್ನು ವೆಬ್ ಡೆವಲಪ್‌ಮೆಂಟ್ ಸಂಸ್ಥೆಯಾದ ಪುತ್ತೂರಿನ ಕ್ರಸ್ಟ್ ಸೆಂಟರ್ ಫಾರ್ ರಿಸರ್ಚ್ ಅಂಡ್ ಡೆವಲಪ್‌ಮೆಂಟ್ ಅಭಿವೃದ್ಧಿಪಡಿಸಿದ್ದು, ಬಿಡುಗಡೆಗೊಂಡ ಎರಡು ದಿನಗಳಲ್ಲೇ ಇನ್ನೂರಕ್ಕೂ ಹೆಚ್ಚು ಡೌನ್‌ಲೋಡ್ ದಾಖಲಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News