ಕರಾವಳಿಯಾದ್ಯಂತ ಮುಂದುವರಿದ ಗಾಳಿಮಳೆ: ಅಪಾರ ಹಾನಿ

Update: 2016-06-29 18:37 GMT

ವಾಹನ ಸವಾರರು, ವಿದ್ಯಾರ್ಥಿಗಳ ಪರದಾಟ

ಮಂಜೇಶ್ವರ, ಜೂ.29: ಎರಡು ದಿನಗಳಿಂದ ಪಶ್ಚಿಮ ಕರಾವಳಿಯಲ್ಲಿ ಮುಂಗಾರು ಬಿರುಸುಗೊಂಡಿದ್ದು, ಗಾಳಿ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ. ನಿನ್ನೆ ಬೆಳಗ್ಗಿನಿಂದಲೇ ಸುರಿದ ಜಡಿ ಮಳೆಯಿಂದ ಪ್ರಯಾಣಿಕರು, ಶಾಲಾ ವಿದ್ಯಾರ್ಥಿಗಳು ಪರದಾಡುವಂತಾಯಿತು.

ಸೋಮವಾರದಂದು ಜಿಲ್ಲಾಧಿಕಾರಿ ಕಚೇರಿಯಿಂದ ಎಲ್ಲ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ನಿನ್ನೆ ಸುರಿದ ಭಾರೀ ಮಳೆಯಿಂದ ರಾಷ್ಟ್ರೀಯ ಹೆದ್ದಾರಿ ಸಂಚಾರ ಸಹಿತ ಒಳ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿ ಸಂಚಾರ ದುಸ್ತರವಾಗಿತ್ತು. ಉಪ್ಪಳ ಸಮೀಪದ ಬೇಕೂರಿನಲ್ಲಿ ಬೃಹದಾಕಾರದ ಮರವೊಂದು ಬುಡಸಹಿತ ರಸ್ತೆಗೆ ಬಿದ್ದು ಹಲವು ಗಂಟೆಗಳ ಕಾಲ ಸಂಚಾರ ಸ್ತಬ್ಧವಾಯಿತು. ನಂತರ ಸ್ಥಳೀಯಾಡಳಿತದಿಂದ ಮರವನ್ನು ತೆರವುಗೊಳಿಸ ಲಾಯಿತು. ಕುಂಬಳೆ ಪೊಲೀಸ್ ಠಾಣಾ ಪರಿಸರದಲ್ಲಿ ಬೃಹದಾಕಾರದ ಮರವೊಂದು ಧರಾಶಾಯಿಯಾದ ಪರಿಣಾಮ ವಿದ್ಯುತ್ ತಂತಿಗಳು ಮುರಿದು ಬಿದ್ದು, ಇಡೀ ದಿನ ವಿದ್ಯುತ್ ಇಲ್ಲದ ಸ್ಥಿತಿ ನಿರ್ಮಾಣವಾಯಿತು.
ಕಡಲ್ಕೊರೆತ ಭೀತಿ
ನಗರದ ಚೆರಂಗೈ ಕಡಲ ಕಿನಾರೆ ಸಹಿತ ಮೊಗ್ರಾಲ್ ಪುತ್ತೂರು, ಉಪ್ಪಳ ಪ್ರದೇಶದಲ್ಲಿ ಕಡಲಬ್ಬರ ಅಧಿಕಗೊಂಡಿದ್ದು, ಜಿಲ್ಲಾಡಳಿತ ಮುಂಜಾಗ್ರತಾ ಕ್ರಮಗಳನ್ನು ವಹಿಸಿದೆ. ಸಮುದ್ರದ ಸನಿಹ ಪ್ರದೇಶದಲ್ಲಿ ವಾಸಿಸುವ ಜನರಿಗೆ ಸಮುದ್ರದ ಬಳಿ ಹೋಗದಂತೆ ಎಚ್ಚರಿಕೆ ನೀಡಲಾಗಿದೆ. ಕಡಲ್ಕೊರೆತದ ಬಗ್ಗೆ ಜಿಲ್ಲಾಡಳಿತಕ್ಕೆ ಈ ಹಿಂದೆ ವಿಸ್ತ ೃತ ವರದಿಯನ್ನು ಸಲ್ಲಿಸಲಾಗಿದ್ದು, ಶೀಘ್ರವೇ ಅಗತ್ಯ ಕ್ರಮ ಕೈಗೊಳ್ಳಲಾಗುವುದೆಂದು ಜಿಪಂ ಸದಸ್ಯರು ತಿಳಿಸಿದ್ದಾರೆ. ಮೀನು ಕಾರ್ಮಿಕರು ಗಾಳಿ ಮಳೆ ಸಂದರ್ಭ ಆಳಸಮುದ್ರದಲ್ಲಿ ಮೀನುಗಾರಿಕೆ ನಡೆಸದಂತೆ ಎಚ್ಚರಿಕೆ ನೀಡಲಾಗಿದೆ.

ಧಾರಾಕಾರ ಮಳೆ: ಮುಳುಗಡೆ ಭೀತಿಯಲ್ಲಿ ಸೇತುವೆ

ಸುಬ್ರಹ್ಮಣ್ಯ, ಜೂ.29: ಘಟ್ಟ ಪ್ರದೇಶದಲ್ಲಿ ಹಾಗೂ ಸುಬ್ರಹ್ಮಣ್ಯ ಪರಿಸರದಲ್ಲಿ ಮೂರು-ನಾಲ್ಕು ದಿನಗಳಿಂದ ಮಳೆ ಅಧಿಕವಾಗಿದೆ. ಮಂಗಳವಾರ ರಾತ್ರಿಯಿಂದ ಬುಧವಾರ ಮುಂಜಾನೆ ವರೆಗೆ ಸುರಿದ ಮಳೆಯಿಂದ ಕುಮಾರಧಾರಾ ನದಿ ತುಂಬಿ ಹರಿಯುತ್ತಿದೆ. ಸ್ನಾನಘಟ್ಟ ಸಂಪೂರ್ಣವಾಗಿ ಜಲಾವೃತವಾಗಿದ್ದು, ಸುಬ್ರಹ್ಮಣ್ಯದಲ್ಲಿ ಶಾಲೆ ಕಾಲೇಜುಗಳಿಗೆ ರಜೆ ಸಾರಲಾಗಿದೆ.

ಸ್ನಾನಘಟ್ಟ ಮುಳುಗಡೆ:

ಕುಮಾರಧಾರಾದಲ್ಲಿ ಪ್ರವಾಹ ಅಧಿಕವಾದ ಕಾರಣ ಸ್ನಾನಘಟ್ಟವು ಸಂಪೂರ್ಣವಾಗಿ ಮುಳು ಗಡೆ ಯಾಗಿದೆ. ಘಟ್ಟ ಪ್ರದೇಶದಲ್ಲಿ ಇದೇ ರೀತಿ ನಿರಂತರ ಮಳೆಯಾದರೆ ಕುಮಾರಧಾರಾ ಸೇತುವೆ ಮುಳುಗುವ ಸಾಧ್ಯತೆ ದಟ್ಟವಾಗಿದೆ. ಕೊಲ್ಲಮೊಗ್ರು, ಹರಿಹರ, ಬಿಳಿನೆಲೆ, ನೆಟ್ಟಣ, ಏನೆಕಲ್, ಪಂಜ, ಬಳ್ಪ, ಗುತ್ತಿಗಾರು, ಕಲ್ಮಡ್ಕ, ಕರಿಕ್ಕಳ, ಪಂಬೆತ್ತಾಡಿ, ಎಣ್ಮೂರು, ನಿಂತಿ ಕಲ್, ಅಲೆಕ್ಕಾಡಿಗಳಲ್ಲಿ ಕೂಡಾ ಮಳೆಯ ಪ್ರಮಾಣ ಬುಧವಾರ ಅಧಿಕಗೊಂಡಿತ್ತು. ಸುಬ್ರಹ್ಮಣ್ಯ ಮಾತ್ರವಲ್ಲದೆ ಇಲ್ಲಿನ ಪರಿಸರದ ಹರಿಹರ ಪಲ್ಲತ್ತಡ್ಕ, ಕೊಲ್ಲಮೊಗ್ರು, ಕಲ್ಮಕಾರು, ಗುತ್ತಿಗಾರು, ಪಂಜ, ಬಳ್ಪ, ಏನೆಕಲ್, ನಿಂತಿಕಲ್, ಬಿಳಿನೆಲೆ, ನೆಟ್ಟಣ ಮೊದಲಾದೆಡೆ ನಿರಂತರ ಮಳೆಯಾಗುತ್ತಿರುವುದರಿಂದ ಈ ಪರಿಸರದಲ್ಲಿ ನದಿ, ತೊರೆಗಳು ತುಂಬಿ ಹರಿಯುತ್ತಿವೆ. ಕೃಷಿ ತೋಟಗಳಿಗೆ ನೀರು ನುಗ್ಗಿದ ಪರಿಣಾಮ ಕೃಷಿಕರಿಗೆ ನಷ್ಟ ಸಂಭವಿಸಿದೆ.


ಮರ ಉರುಳಿ ಬಿದ್ದು ಮನೆಗಳಿಗೆ ಹಾನಿ
ಕೊಣಾಜೆ, ಜೂ.29: ಕೊಣಾಜೆ ಬಳಿ ಮಂಗಳವಾರ ರಾತ್ರಿ ಸುರಿದ ಭಾರೀ ಗಾಳಿಮಳೆ ಯಿಂದ ಮರಗಳು ಉರುಳಿ ಬಿದ್ದು ಎರಡು ಮನೆಗಳಿಗೆ ಹಾನಿ ಸಂಭವಿಸಿದೆ.

ಕೊಣಾಜೆ ಪಂಚಾಯತ್ ಕಚೇರಿ ಬಳಿಯ ಸುಂದರಿ ಎಂಬವರ ಮನೆಯ ಮೇಲೆ ಮರ ಉರುಳಿ ಬಿದ್ದಿದೆ. ಅದೃಷ್ಟವಶಾತ್ ಮನೆಯೊಳಗಿದ್ದ ಯಾರಿಗೂ ಅಪಾಯ ಸಂಭವಿಸಿಲ್ಲ. ಅಲ್ಲದೆ ಅಲ್ಲೇ ಸಮೀಪದ ಹವ್ವಮ್ಮ ಎಂಬವರ ಮನೆಗೂ ಮರವೊಂದು ಉರುಳಿ ಬಿದ್ದಿದ್ದು, ಹೆಂಚುಗಳು ಹುಡಿಯಾಗಿ ಹಾನಿ ಸಂಭವಿಸಿದೆ.

ಸುಂದರಿಯವರ ಮನೆಯ ಮೇಲ್ಛಾವಣಿ ಕುಸಿದು ಬಿದ್ದು ಅಪಾರ ಹಾನಿ ಸಂಭವಿಸಿದ್ದು, ಸ್ಥಳೀಯರಾದ ಪ್ರಕಾಶ್ ಶೆಟ್ಟಿ, ಜಿ.ಪಿ.ಖಾದರ್, ಹಮೀದ್ ಕಲ್ಲಿಮಾರ್, ಗುರುವ, ರಫೀಕ್, ಅಬ್ದುಲ್ಲಾ ಮತ್ತಿತರರು ಕುಸಿದಿದ್ದ ಮೇಲ್ಛಾವಣಿಯನ್ನು ಶ್ರಮದಾನದ ಮೂಲಕ ಸರಿಪಡಿಸುವಲ್ಲಿ ಶ್ರಮಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News