ರಸ್ತೆಗೆ ಉರುಳಿದ ಬೃಹತ್ ಮರ: ವಾಹನ ಸಂಚಾರ ಅಸ್ತವ್ಯಸ್ತ

Update: 2016-06-30 15:45 GMT

ಬಂಟ್ವಾಳ, ಜೂ. 30: ಮೂಡುಬಿದಿರೆ ರಸ್ತೆಯ ಮಾಡಮ್ಮೆ ಎಂಬಲ್ಲಿ ರಸ್ತೆಗೆ ಅಡ್ಡಲಾಗಿ ಬೃಹತ್ ಮರವೊಂದು ಬಿದ್ದಿರುವುದರಿಂದ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿತು. ಈ ಸಂದರ್ಭದಲ್ಲಿ ದ್ವಿಚಕ್ರವಾಹನದಲ್ಲಿ ಸಂಚರಿಸುತ್ತಿದ್ದ ಮಹಿಳೆಯೊಬ್ಬರು ಪವಾಡ ಸದೃಶವಾಗಿ ಅಪಾಯದಿಂದ ಪಾರಾಗಿದ್ದಾರೆ.

ರಸ್ತೆಗೆ ಮರ ಅಡ್ಡವಾಗಿ ಬಿದ್ದ ಪರಿಣಾಮ ಈ ರಸ್ತೆಯಲ್ಲಿ ಸಂಚರಿಸುತ್ತಿದ್ದ ಎಲ್ಲ ವಾಹನಗಳು ಸಿದ್ದಕಟ್ಟೆ - ಕರ್ಪೆ ಮಾರ್ಗವಾಗಿ ಕಲ್ಕೂರಿ ಕ್ರಾಸ್ ಮಾಡಿ ಮಾಡಮೆ ಮುಖಾಂತರ ಸಂಚರಿಸಿದವು.

ಸುದ್ದಿ ತಿಳಿದ ತಾಲೂಕು ಪಂಚಾಯತ್ ಸದಸ್ಯ ಪ್ರಭಾಕರ ಪ್ರಭು, ಕುಕ್ಕಿಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ದಿನೇಶ್, ಸುಂದರ ಶಾಂತಿ ಸ್ಥಳಕ್ಕೆ ಆಗಮಿಸಿ ಅರಣ್ಯ, ಲೋಕೋಪಯೋಗಿ, ಮೆಸ್ಕಾಂ ಅಧಿಕಾರಿಗಳಿಗೆ ಮಾಹಿತಿ ನೀಡಿ ಮರ ತೆರವುಗೊಳಿಸಲು ಕ್ರಮ ಕೈಗೊಂಡರು.

ಸಿದ್ದಕಟ್ಟೆ ಮೆಸ್ಕಾಂ ಶಾಖಾಧಿಕಾರಿ ತಿಲಕ್ ಹಾಗೂ ಸಿಬ್ಬಂದಿ, ಅರಣ್ಯ ಇಲಾಖೆಯ ಅಧಿಕಾರಿಗಳ ಕೋರಿಕೆಯ ಮೇರೆಗೆ ನೋಣಯ್ಯ ಶೆಟ್ಟಿಗಾರ್ ಸಿದ್ದಕಟ್ಟೆ, ಪ್ರಕಾಶ ಜೈನ್ ರಾಯಿ ಜೆಸಿಬಿ ಹಾಗೂ ಜನರ ಸಹಕಾರದಿಂದ ಶೀಘ್ರ ಮರವನ್ನು ತೆರವುಗೊಳಿಸಿ ಸಂಚಾರಕ್ಕೆ ದಾರಿ ಸುಗಮ ಮಾಡಲಾಯಿತು.

ಇತ್ತೀಚೆಗೆ ನಡೆದ ಕುಕ್ಕಿಪಾಡಿ ಗ್ರಾಮ ಪಂಚಾಯತ್‌ನ 2ನೆ ಗ್ರಾಮ ಸಭೆಯಲ್ಲೂ ಅಪಾಯಕಾರಿಯಾದ ಈ ಮರವನ್ನು ತೆರವುಗೊಳಿಸಲು ಸಾರ್ವಜನಿಕರು ಆಗ್ರಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News