ನರೇಶ್ ಶೆಣೈ ಕಸ್ಟಡಿ ವಿಸ್ತರಣೆ

Update: 2016-06-30 18:05 GMT

ಮಂಗಳೂರು, ಜೂ. 30: ನಗರದ ಆರ್‌ಟಿಐ ಕಾರ್ಯಕರ್ತ ವಿನಾಯಕ ಪಾಂಡುರಂಗ ಬಾಳಿಗಾ ಕೊಲೆ ಪ್ರಕರಣದಲ್ಲಿ ಬಂಧಿತನಾಗಿರುವ ಪ್ರಮುಖ ಆರೋಪಿ ನರೇಶ್ ಶೆಣೈಯ ಪೊಲೀಸ್ ಕಸ್ಟಡಿ ಅವಧಿಯನ್ನು ನ್ಯಾಯಾಲಯವು ಶುಕ್ರವಾರ ಎರಡು ದಿನಗಳ ಅವಧಿಗೆ ವಿಸ್ತರಿಸಿದೆ.

ಆರೋಪಿ ನರೇಶ್ ಶೆಣೈಯನ್ನು ಪ್ರಕರಣದ ತನಿಖಾಧಿಕಾರಿಯಾಗಿರುವ ಎಸಿಪಿ ತಿಲಕ್‌ಚಂದ್ರ ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.

ತನಿಖಾಧಿಕಾರಿಗಳು ಆರೋಪಿಯ ವಿಚಾರಣೆಗಾಗಿ ಕಸ್ಟಡಿ ಅವಧಿಯನ್ನು ವಿಸ್ತರಿಸುವಂತೆ ಮಾಡಿರುವ ಮನವಿಗೆ ಒಪ್ಪಿಗೆ ನೀಡಿದ ನ್ಯಾಯಾಲಯವು ಇನ್ನೂ ಎರಡು ದಿನ ಪೊಲೀಸ್ ಕಸ್ಟಡಿಯನ್ನು ವಿಸ್ತರಿಸಿ ಜುಲೈ 2 ರಂದು ಆರೋಪಿಯನ್ನು ಹಾಜರುಪಡಿಸುವಂತೆ ಆದೇಶಿಸಿತು.

ಇದೇ ವೇಳೆ ಆರೋಪಿ ಪರ ವಕೀಲರು, ನರೇಶ್ ಎರಡು ವರ್ಷಗಳಿಂದ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದು ಈ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ಅನುಮತಿ ನೀಡುವಂತೆ ಮನವಿ ಮಾಡಿದ್ದರು. ಆದರೆ ವಿನಾಯಕ ಬಾಳಿಗ ತಂದೆಯ ಪರ ವಕೀಲರು ಆರೋಪಿಯನ್ನು ಸರಕಾರಿ ವೈದ್ಯರ ಬಳಿ ತಪಾಸಣೆ ನಡೆಸಿಯೇ ಪೊಲೀಸ್ ಕಸ್ಟಡಿಗೆ ತೆಗೆದುಕೊಂಡಿರುವುದರಿಂದ ಖಾಸಗಿ ಚಿಕಿತ್ಸಾ ಕೇಂದ್ರಕ್ಕೆ ದಾಖಲಿಸುವ ಅಗತ್ಯದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು. ನ್ಯಾಯಾಲಯವು ಆರೋಪಿ ಪರ ವಕೀಲರ ಮನವಿಯನ್ನು ತಿರಸ್ಕರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News