ಸಚಿವರ ಘನತೆ ಉಳಿಸಲು ಹೋದರೆ ನನ್ನ ವಿರುದ್ಧವೇ ದೂರು!

Update: 2016-07-01 15:18 GMT

ಮಂಗಳೂರು,ಜು.1: ಸಚಿವ ಯು ಟಿ ಖಾದರ್ ಘನತೆ ಉಳಿಸಲು ಹೋದರೆ ನನ್ನ ವಿರುದ್ಧವೇ ಪೊಲೀಸರಿಗೆ ಸಚಿವರ ಆಪ್ತ ಸಹಾಯಕರು ದೂರು ನೀಡಿದ್ದಾರೆ ಎಂದು ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ತಮ್ಮ ಮೇಲೆ ನೀಡಲಾಗಿರುವ ದೂರಿಗೆ ಪ್ರತಿಕ್ರಿಯಿಸಿದ್ದಾರೆ.

ಈ ಬಗ್ಗೆ ಪತ್ರಿಕಾ ಪ್ರಕಟನೆ ನೀಡಿರುವ ಮುನೀರ್ ಕಾಟಿಪಳ್ಳ, ಕೊಲೆ ಆರೋಪದಲ್ಲಿ ಬಂಧಿತನಾಗಿರುವ ಯುವ ಬ್ರಿಗೇಡ್ ನಾಯಕ ನರೇಂದ್ರ ಶೆಣೈಯನ್ನು ಜೈಲಿನಲ್ಲಿ ಚೆನ್ನಾಗಿ ನೋಡಿಕೊಳ್ಳುವಂತೆ ಸಚಿವ ಯು.ಟಿ. ಖಾದರ್ ಆಪ್ತ ಸಹಾಯಕ ದೂರವಾಣಿಯಲ್ಲಿ ಸೂಚಿಸಿದ್ದಾರೆ ಎಂದು ಜೈಲಾಧಿಕಾರಿಗಳು ಹಿರಿಯ ವಕೀಲರಿಗೆ ಮಾಹಿತಿ ನೀಡಿರುವುದನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದೆ. ಸಚಿವ ಯು.ಟಿ. ಖಾದರ್ ಬಗ್ಗೆ ಗಮನ ಹರಿಸಲಿ ಮತ್ತು ಯು. ಟಿ. ಖಾದರ್ ಹೆಸರನ್ನು ಯಾರಾದರೂ ದುರುಪಯೋಗ ಮಾಡಿಕೊಂಡಿದ್ದರೆ ಈ ಬಗ್ಗೆ ತನಿಖೆ ನಡೆಸಲಿ ಎಂಬುದಷ್ಟೇ ಫೇಸ್‌ಬುಕ್ ಸ್ಟೇಟಸ್‌ನ ಉದ್ದೇಶವಾಗಿತ್ತು.

ಇಷ್ಟಕ್ಕೂ ಯು.ಟಿ.ಖಾದರ್ ಆಪ್ತ ಸಹಾಯಕರು ಅಥವಾ ಅವರ ಕಚೇರಿ ಈ ಕೃತ್ಯದಲ್ಲಿ ಇರಲಿಕ್ಕಿಲ್ಲ ಎಂದು ಸ್ಪಷ್ಟವಾಗಿ ನಿರಾಕರಿಸಲೂ ಸಾಧ್ಯವಿಲ್ಲ. ಯಾಕೆಂದರೆ ಯು.ಟಿ. ಖಾದರ್ ಮತ್ತು ಅವರ ಕಚೇರಿ, ಸರಕಾರಿ ನಿವಾಸದಲ್ಲಿ ಹಿಂದುತ್ವ ಸಂಘಟನೆಯ ಪ್ರಮುಖ ಸ್ಥಾನದಲ್ಲಿರುವ ಶಿಕ್ಷಣ ಸಂಸ್ಥೆಯ ಮಾಲಕರು, ಆಸ್ಪತ್ರೆಗಳ ಮಾಲಕರು ಅಡ್ಡಾಡುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಈ ಹಿನ್ನೆಲೆಯಲ್ಲಿ ನರೇಶ್ ಶೆಣೈ ಜೊತೆ ಆತ್ಮೀಯತೆಯನ್ನು ಹೊಂದಿರುವ ಹಿಂದುತ್ವ ಸಂಘಟಕರು ಯು.ಟಿ. ಖಾದರ್ ಆಪ್ತ ಸಹಾಯಕರ ಆತ್ಮೀಯ ಸಂಪರ್ಕವನ್ನು ದುರುಪಯೋಗಪಡಿಸಿಕೊಂಡಿರುವ ಸಾಧ್ಯತೆಗಳು ಇಲ್ಲವೆಂದಿಲ್ಲ. ಇದು ಯು.ಟಿ.ಖಾದರ್ ಅರಿವಿಗೆ ಬಂದು ನಡೆದಿದೆಯೋ ಅಥವಾ ಗಮನಕ್ಕೆ ಬಾರದೆ ನಡೆದಿದೆಯೋ ಅಥವಾ ಫೇಕುಗಳ ಕೃತ್ಯವೋ ಅನ್ನೋದು ತನಿಖೆಯಿಂದಷ್ಟೇ ತಿಳಿಯಬಹುದು.

ಇದೊಂದು ಗಂಭೀರ ಪ್ರಕರಣ. ಈ ಪ್ರಕರಣದ ಹಾದಿ ತಪ್ಪಿಸಲು ಹಲವು ಶಕ್ತಿಗಳು ಯತ್ನಿಸುತ್ತಿವೆ ಮತ್ತು ಕೋಮುವಾದಿಗಳ ಜೊತೆ ಅಪವಿತ್ರ ಮೈತ್ರಿಯನ್ನು ಹೊಂದಿರುವ ಸರಕಾರದ ಉನ್ನತ ಸ್ಥಾನದಲ್ಲಿರುವವರು ಕೆಲವರು ಪ್ರಯತ್ನಿಸಿದ ಆರೋಪಗಳು ಈಗಾಗಲೇ ಕೇಳಿ ಬಂದಿರುತ್ತದೆ. ಅಂತಹ ಸಂದರ್ಭದಲ್ಲಿ ಈ ಪ್ರಕರಣದ ರೂವಾರಿಗಳು ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಳ್ಳದಂತೆ ಮತ್ತು ಅವರಿಗೆ ಯಾವುದೇ ರಿಯಾಯಿತಿಗಳು ದೊರೆಯದಂತೆ ಜಾಗರೂಕನಾಗಿರುವುದು ನನ್ನ ಕರ್ತವ್ಯವೆಂದು ನಾನು ಭಾವಿಸಿರುತ್ತೇನೆ. ಆ ನಿಟ್ಟಿನಲ್ಲಿ ಸಮಾನ ಮನಸ್ಕರು ಮತ್ತು ನನ್ನ ಸಂಘಟನೆಯೊಂದಿಗೆ ಕ್ರೀಯಾಶೀಲನಾಗಿರುತ್ತೇನೆ. ಇದೇ ಹಿನ್ನೆಲೆಯಲ್ಲಿ ಯು.ಟಿ.ಖಾದರ್ ಹೆಸರಿನ ಬಳಕೆಯ ಬಗ್ಗೆ ಮಾಹಿತಿ ಬಂದಾಗ ಅದನ್ನು ಸಾಮಾಜಿಕ ಜವಾಬ್ದಾರಿಯಿಂದ ಹಂಚಿಕೊಂಡಿದ್ದೇನೆ. ಇದನ್ನು ಶ್ಲಾಘಿಸಬೇಕಿದ್ದ ಸಚಿವ ಯು.ಟಿ.ಖಾದರ್ ತನ್ನ ಮೂವರು ಆಪ್ತ ಸಹಾಯಕರ ಹೆಸರಿನಲ್ಲಿ ನನ್ನ ವಿರುದ್ಧ ಕದ್ರಿ ಠಾಣೆಯಲ್ಲಿ ಮೊಕದ್ದಮೆ ಹೂಡಿದ್ದಾರೆ.

ನಾನು ನೀಡಿದ ಮಾಹಿತಿಯನ್ವಯ ತನಿಖೆ ಆಗಬಹುದು ಎಂದುಕೊಂಡಿದ್ದರೆ ಸಚಿವರು ಆಪ್ತ ಸಹಾಯಕರ ಮೂಲಕ ನನ್ನ ವಿರುದ್ಧವೇ ದೂರು ನೀಡಿರುವುದು ವಿಪರ್ಯಾಸ. ಇದು ಸಚಿವ ಖಾದರ್‌ರ ಪ್ರಾಮಾಣಿಕತೆ, ಬದ್ಧತೆಯ ಬಗ್ಗೆ ನನ್ನಲ್ಲಿ ಅನುಮಾನಗಳನ್ನು ಹುಟ್ಟಿಸಿದೆ ಎಂದು ಮುನೀರ್ ಕಾಟಿಪಳ್ಳ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News