ನಿಧನ

Update: 2016-07-01 18:39 GMT

ಬಂಟ್ವಾಳ, ಜು.1: ಹಿರಿಯ ಯಕ್ಷಗಾನ ಕಲಾವಿದ ಸಿದ್ದಕಟ್ಟೆ ವಿಶ್ವನಾಥ ಶೆಟ್ಟಿ (61) ಶುಕ್ರವಾರ ಬೆಳಗ್ಗೆ ನಿಧನರಾದರು. ಕಳೆದ ಕೆಲವು ತಿಂಗಳಿನಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಅಜ್ಜಿಬೆಟ್ಟು ಗ್ರಾಮದ ಮನೆಯಲ್ಲಿ ಇಹಲೋಕ ತ್ಯಜಿಸಿದರು. ಮೃತರು ಪತ್ನಿ, ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ. ಯಕ್ಷಗಾನ ಕಲಾವಿದರಾಗಿದ್ದ ಸಿದ್ದಕಟ್ಟೆ ವಿಶ್ವನಾಥ ಶೆಟ್ಟಿಯವರು ತೆಂಕುತಿಟ್ಟು ಹಾಗೂ ಬಡಗುತಿಟ್ಟಿನಲ್ಲಿ ಮೇರು ಕಲಾವಿದರಾಗಿ ಗುರುತಿಸಿಕೊಂಡವರು. ತಾಳಮದ್ದಳೆ, ಅರ್ಥಧಾರಿಯಾಗಿ, ಕನ್ನಡ ಹಾಗೂ ತುಳು ಭಾಷೆಯಲ್ಲಿ ಸುಲಲಿ ತವಾಗಿ ಮಾತನಾಡುವ ಪ್ರಸಂಗರ್ತರಾಗಿ ಯಕ್ಷರಂಗದಲ್ಲಿ ಮಿಂಚಿದವರು. ಬಡ ಗುತಿಟ್ಟಿನ ಸಾಲಿಗ್ರಾಮ ಮೇಳದಲ್ಲಿ ಭೀಷ್ಮ ವಿಜಯದ ಪರಶುರಾಮನಾಗಿ, ಬ್ರಹ್ಮ ಕಪಾಲದ ಮಹೋಗ್ರನಾಗಿ, ಸತ್ಯ ಹರಿಶ್ಚಂದ್ರದ ವಸಿಷ್ಟನಾಗಿ, ಸೀತಾಕಲ್ಯಾಣದ ವಿಶ್ವಾ ಮಿತ್ರನಾಗಿ, ಪಂಚವಟಿಯ ರಾಮನಾಗಿ, ಗದಾಯುದ್ಧದ ಸಂಜಯನಾಗಿ, ಕಂಸ ವಧೆಯ ಅಕ್ರೂರನಾಗಿ ಪಾತ್ರ ನಿರ್ವಹಿಸಿ ಯಕ್ಷಲೋಕಕ್ಕೆ ಶೋಭೆ ತಂದವರು. ತೆಂಕುತಿಟ್ಟುವಿನಲ್ಲಿ ಜಾಂಬವ, ಪೆರುಮಾಳ ಬಲ್ಲಾಳ, ಚಂದುಗಿಡಿ, ದೇವುಪೂಂಜ ಮೊದಲಾದ ಪಾತ್ರಗಳನ್ನು ನಿರ್ವಹಿಸಿ ಪ್ರೇಕ್ಷಕರ ಮೆಚ್ಚುಗೆ ಗಳಿಸಿದವರು. ತಾಳಮದ್ದಲೆಗೂ ಸೈ
ವಿಶ್ವನಾಥ ಶೆಟ್ಟರೂ ರಂಗದಲ್ಲಿರುವಷ್ಟೇ ತಾಳಮದ್ದಳೆಯಲ್ಲೂ ಜನಪ್ರಿಯರಾಗಿದ್ದರು. ಪ್ರಸಿದ್ಧ ತಾಳಮದ್ದಲೆ ಕಲಾವಿದರ ಕೂಟದಲ್ಲಿ ಇವರು ಗುರುತಿಸಿಕೊಂಡಿದ್ದರು. ತನ್ನ ವಾದವನ್ನು ಸಮರ್ಪಕವಾಗಿ ಮಂಡಿಸಿ ಸಭ್ಯ ಕಲಾವಿದರೆಂದು ಗುರುತಿಸಿಕೊಂಡವರು. ಸೌಮ್ಯವಾದ ಸ್ವರ, ವ್ಯಾಕರಣ ಬದ್ಧ ಹಾಗೂ ಸ್ಪುಟವಾದ ಮಾತು ಅವರ ವಿಶೇಷತೆ. ಸೌಮ್ಯ ಪಾತ್ರಗಳಾದ ಭೀಷ್ಮ ಪರ್ವದ ಭೀಷ್ಮ, ಕೃಷ್ಣ ಸಂಧಾನದ ಕೃಷ್ಣ, ವಿಧುರ, ವಾಲಿವಧೆಯ ಸುಗ್ರೀವ, ರಾಮಪಟ್ಟಾಭಿಷೇಕದ ರಾಮ, ಭರತ, ವಿಭೀಷಣ, ಶಲ್ಯ ಪಾತ್ರಗಳಿಗೆ ಜೀವ ತುಂಬಿದವರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News