ನಿಧನ

Update: 2016-07-03 18:31 GMT


  
ಮಂಗಳೂರು, ಜು. 3: ದಕ್ಷಿಣ ಕನ್ನಡ ಪರಿಸರಾಸಕ್ತರ ಒಕ್ಕೂಟದ ಅಧ್ಯಕ್ಷ, ಸುಸ್ಥಿರಕೃಷಿಯ ಪ್ರವರ್ತಕ ಇ.ವಿಠಲ ರಾವ್ ಕಿನ್ಯ (89)ಶುಕ್ರವಾರ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ. ವಿಠಲ ರಾವ್ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಮದನಪಲ್ಲಿಯಲ್ಲಿ ಹುಟ್ಟಿ, ಬಳ್ಳಾರಿ ಮತ್ತು ಮಂಗಳೂರಿನಲ್ಲಿ ಶಿಕ್ಷಣ ಪಡೆದಿದ್ದರು. ಸೇವಾನಿವೃತ್ತರಾದ ಬಳಿಕ ಕೃಷಿ ಭೂಮಿ ಖರೀದಿಸಿ ಮಂಗಳೂರಿನಲ್ಲಿ ವಾಸ್ತವ್ಯ ಹೂಡಿದ್ದರು. ಕೃಷಿ ಇಲಾಖೆಯ ಸಹಕಾರದೊಂದಿಗೆ ರಸಗೊಬ್ಬರ ಆಧಾರಿತ ಜಪಾನ್ ಮಾದರಿ ಕೃಷಿ ಮಾಡಿ 1968ರಿಂದ ಸಾವಯವ ಕೃಷಿ ಪದ್ಧತಿಯನ್ನು ಅನುಸರಿಸಿದ್ದರು. ಪರಿಸರ ರಕ್ಷಣೆ ಮತ್ತು ಸುಸ್ಥಿರ ಕೃಷಿ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದರು. ಅವರು ಸೈಲೆಂಟ್ ಸ್ಪ್ರಿಂಗ್ ಮತ್ತು ಹಿಡನ್ ಪರ್ಸುವೆಡರ್ಸ ಎಂಬ ಎರಡು ಕೃತಿಗಳನ್ನು ಪ್ರಕಟಿಸಿದ್ದಾರೆ. ಸಮಾನ ಮನಸ್ಕ ಕೃಷಿಕರಾದ ಡಾ.ಎಲ್.ಸಿ.ಸೋನ್ಸ್, ಅಡ್ಡೂರು ಶಿವಶಂಕರ ರಾವ್ ಅವರೊಂದಿಗೆ ಸೇರಿಕೊಂಡು ರೈತರ ಮಾಹಿತಿ ವಿನಿಮಯ ಕ್ಲಬ್ ಆರಂಭಿಸಿದ ವಿಠಲ ರಾವ್ ಅನಂತರದ ದಿನಗಳಲ್ಲಿ ದ.ಕ. ಕೃಷಿಕರ ವೇದಿಕೆ, ಮಂಗಳೂರು ತಾಲೂಕು ಪರಿಸರಾಸಕ್ತರ ಒಕ್ಕೂಟ, ಜಿಲ್ಲಾ ಪರಿಸರಾಸಕ್ತರ ಒಕ್ಕೂಟಗಳನ್ನು ಸ್ಥಾಪಿಸಿ ಅವುಗಳ ಅಧ್ಯಕ್ಷರಾಗಿದ್ದರು.
ಮೃತರು ಪತ್ನಿ, ಇಬ್ಬರು ಪುತ್ರರು ಮತ್ತು ಒಬ್ಬ ಪುತ್ರಿಯನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News