ಉಪ್ಪಿನಂಗಡಿಯಲ್ಲಿ ರಸ್ತೆಗುರುಳಿದ ಬಿದಿರು: ಸಾರ್ವಜನಿಕರಿಂದಲೇ ತೆರವು

Update: 2016-07-04 13:13 GMT

ಉಪ್ಪಿನಂಗಡಿ: ರಾತ್ರಿ ಸುರಿದ ಬಾರಿ ಗಾಳಿ ಮಳೆಗೆ ಉಪ್ಪಿನಂಗಡಿ ಪರಿಸರದಲ್ಲಿ 2 ಕಡೆಯಿಂದ ಬಿದಿರು ಗುಪ್ಪೆ ಬುಡ ಸಮೇತ ಉರುಳಿ ರಸ್ತೆಗೆ ಅಡ್ಡವಾಗಿ ಬಿದ್ದಿದ್ದು, ಎರಡೂ ಕಡೆಯಲ್ಲಿ ವಾಹನ ಸಂಚಾರಕ್ಕೆ ತಡೆ ಉಂಟಾಗಿದ್ದು, ಅರಣ್ಯ ಇಲಾಖೆಗೆ ಮಾಹಿತಿ ನೀಡಿದರೂ ಸ್ಥಳಕ್ಕೆ ಬಾರದೆ ಸ್ಥಳೀಯರೇ ರಸ್ತೆ ತೆರವುಗೊಳಿಸಿರುವ ಬಗ್ಗೆ ವರದಿಯಾಗಿದೆ.

ಉಪ್ಪಿನಂಗಡಿ-ಸುಬ್ರಹ್ಮಣ್ಯ ರಸ್ತೆಯಲ್ಲಿ ಪುಳಿತ್ತಡಿ ಸಮೀಪ ರಸ್ತೆ ಬದಿಯಲ್ಲಿದ್ದ ಬೃಹತ್ ಬಿದಿರು ಬುಡ ಸಮೇತ ರಸ್ತೆಗೆ ಉರುಳಿ ಬಿದ್ದಿದ್ದು, ರಸ್ತೆಯಲ್ಲಿ ವಾಹನ ಸಂಚಾರಕ್ಕೆ ತಡೆ ಉಂಟಾಯಿತು. ಬಳಿಕ ಸ್ಥಳೀಯ ನಿವಾಸಿ, ಗ್ರಾಮ ಪಂಚಾಯತ್ ಸದಸ್ಯ ಯು.ಕೆ. ಇಬ್ರಾಹೀಂ, ಉದಯ ಶಂಕರ್ ಭಟ್, ಝಕರಿಯಾ, ಆಶಿಕ್, ಹಕೀಂ, ಅಶ್ಪಕ್ ಮೊದಲಾದವರು ಅದನ್ನು ಮುರಿದು ತೆಗೆದು ರಸ್ತೆ ತೆರವುಗೊಳಿಸಿ ವಾಹನ ಸಂಚಾರಕ್ಕೆ ಅನುವು ಮಾಡಿ ಕೊಟ್ಟರು.

ರಾಮನಗರದಲ್ಲಿ ವಿದ್ಯುತ್ ವೈರ್‌ಗೆ ಬಿದ್ದ ಬಿದಿರು

ಉಪ್ಪಿನಂಗಡಿ-ಹಿರೇಬಂಡಾಡಿ ರಸ್ತೆಯಲ್ಲಿ ರಾಮನಗರ ಎಂಬಲ್ಲಿ ಬಿದಿರು ಬುಡ ಸಮೇತ ರಸ್ತೆಗೆ ಉರುಳಿ ಬಿದ್ದಿದೆ. ಹೀಗೆ ಬಿದ್ದ ಬಿದಿರು ವಿದ್ಯುತ್ ವೈರ್ ಮೇಲೆ ಬಿದ್ದಿದ್ದು, ವೈರ್ ತುಂಡಾಗಿ ರಸ್ತೆಯ ಮೇಲೆ ನೇತಾಡುತ್ತಿತ್ತು. ಬಳಿಕ ಮೆಸ್ಕಾಂ ಇಂಜಿನಿಯರ್ ಸುಂದರ್ ಮತ್ತು ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬಂದು ವಿದ್ಯುತ್ ಸಂಪರ್ಕ ಕಡಿತಗೊಳಿಸಿ, ರಸ್ತೆಗೆ ಬಿದ್ದಿದ್ದ ವೈರ್ ತೆರವುಗೊಳಿಸಿದರು.

ರಸ್ತೆಗೆ ಅಡ್ಡವಾಗಿ ಬಿದ್ದ ಬಿದಿರು ಇಡೀ ರಸ್ತೆಯನ್ನು ಆವರಿಸಿಕೊಂಡಿತ್ತು. ದ್ವಿಚಕ್ರ ವಾಹನ ಸಹಿತ ಯಾವುದೇ ವಾಹನ, ಜನ ಸಂಚಾರಕ್ಕೂ ಸಮಸ್ಯೆ ಉಂಟಾಗಿತ್ತು. ಹಿರೇಬಂಡಾಡಿ ಕಡೆಯಿಂದ ಉಪ್ಪಿನಂಗಡಿ ಹೋಗುವ ವಾಹನಗಳು, ಶಾಲೆಗೆ ಹೋಗುವ ವಿದ್ಯಾರ್ಥಿಗಳು ಪರದಾಡುವಂತಾಯಿತು. ಸ್ಥಳೀಯರಾದ ಅಜೀಝ್ ನಿನ್ನಿಕಲ್, ಖಾಸಿಂ ಕುದ್ಲೂರು, ಅಬ್ಬಾಸ್, ಪುತ್ತುಮೋನು, ಜಮರು, ಹೈದರ್ ಕಣ್ಣೂರು ಮೊದಲಾದವರು ರಸ್ತೆಯಲ್ಲಿದ್ದ ಬಿದಿರು ತೆರವುಗೊಳಿಸಿ, ಲಘು ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಸ್ಥಳಕ್ಕೆ ಬಾರದ ಅರಣ್ಯ ಇಲಾಖೆ

ಎರಡೂ ಕಡೆಯಲ್ಲಿ ರಸ್ತೆಗೆ ಬಿದಿರು ಬಿದ್ದಾಗ ಅರಣ್ಯ ಇಲಾಖೆ ಮತ್ತು ಮೆಸ್ಕಾಂ ಇಲಾಖೆಗೆ ಮಾಹಿತಿ ನೀಡಿದ್ದರು. ಎರಡೂ ಕಡೆಯಲ್ಲಿ ಮೆಸ್ಕಾಂ ಇಲಾಖೆಯವರು ತಕ್ಷಣ ಸ್ಥಳಕ್ಕೆ ಬಂದು ವಿದ್ಯುತ್ ಸಂಪರ್ಕ ಕಡಿತಗೊಳಿಸಿ, ಬಿದಿರು ಮೇಲೆ ಇದ್ದ ವೈರ್ ತೆರವು ಮಾಡಿ ತೆರಳಿದ್ದರು. ಆದರೆ ಅರಣ್ಯ ಇಲಾಖೆಯವರು ಮಾತ್ರ ಸ್ಥಳಕ್ಕೆ ಬರಲೇ ಇಲ್ಲ, ಹೀಗಾಗಿ ಸಾರ್ವಜನಿಕರು ಮಳೆಯಲ್ಲೇ ತೆರವುಗೊಳಿಸಿದರು ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News