ಕಾಡುವಾಸಿ ಕೆಂಚಪ್ಪರನ್ನು ನಾಡಿಗೆ ಕರೆತರುವ ಪ್ರಯತ್ನ ವಿಫಲ

Update: 2016-07-04 13:26 GMT

ಸುಳ್ಯ, ಜು.4: ಕಳೆದ 48 ವರ್ಷಗಳಿಂದ ಕಾಡಿನಲ್ಲಿ ವಾಸಿಸುತ್ತಿರುವ ಕೆಂಚಪ್ಪಅವರನ್ನು ನಾಡಿಗೆ ಕರೆತರುವ ಕಾರ್ಯ ವಿಫಲಗೊಂಡಿದೆ. ಅವರನ್ನು ನಿರಾಶ್ರಿತರ ಪರಿಹಾರ ಕೇಂದ್ರಕ್ಕೆ ಸೇರಿಸಲು ತೆರಳಿದಾಗ ಕಾಡುಬಿಟ್ಟು ಬರಲು ನಿರಾಕರಿಸಿದ್ದಾರೆ.

ಕಳೆದ 48 ವರ್ಷಗಳಿಂದ ಮರ್ಕಂಜ ಗ್ರಾಮದ ಬಾಳೆಡಿ ರಕ್ಷಿತಾರಣ್ಯದಲ್ಲಿ ಸೂರು ಕಟ್ಟಿಕೊಂಡು ವಾಸಿಸುತ್ತಿರುವ ಕೆಂಚಪ್ಪರ ಬಗ್ಗೆ ಪತ್ರಿಕೆಗಳಲ್ಲಿ ಬಂದ ವರದಿಗೆ ಸ್ಪಂದಿಸಿರುವ ಜಿಲ್ಲಾಧಿಕಾರಿ ಕೆಂಚಪ್ಪರನ್ನು ನಾಡಿಗೆ ಕರೆತಂದು ಮಂಗಳೂರಿನಲ್ಲಿರುವ ನಿರಾಶ್ರಿತರ ಪರಿಹಾರ ಕೇಂದ್ರಕ್ಕೆ ಸೇರಿಸುವಂತೆ ಸುಳ್ಯ ತಹಶೀಲ್ದಾರ್ ಮತ್ತು ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಕಾರ್ಯದರ್ಶಿಗೆ ಪತ್ರದ ಮೂಲಕ ಸೂಚಿಸಿದ್ದರು.

ಅದರಂತೆ ತಹಶೀಲ್ದಾರ್ ಶನಿವಾರ ಕಾಡಿಗೆ ತೆರಳಿ ನಗರದಲ್ಲಿರುವ ನಿರಾಶ್ರಿತ ಕೇಂದ್ರಕ್ಕೆ ಬರುವಂತೆ ಕೆಂಚಪ್ಪರಲ್ಲಿ ಮನವಿ ಮಾಡಿದರು. ಆದರೆ ಇದಕ್ಕೆ ಕೆಂಚಪ್ಪಅವರು ‘ನಾನು ಕಾಡಲ್ಲೇ ಇರುತ್ತೇನೆ. ಇಲ್ಲೇ ನನ್ನ ಬದುಕು’ ಎಂದು ನಿರಾಶ್ರಿತರ ಕೇಂದ್ರಕ್ಕೆ ಆಗಮಿಸಲು ನಿರಾಕರಿಸಿದ್ದಾರೆ. ಕೆಂಚಪ್ಪಅವರ ಸಂಬಂಧಿಕರು, ನೆರೆಹೊರೆಯವರು ಕೂಡ ಬಲವಂತವಾಗಿ ಅವರನ್ನು ಒಯ್ಯಬೇಡಿ ಎಂದಿದ್ದಾರೆ.

‘ಅವರಿಗೆ ಚೆನ್ನಾಗಿ ಹಸಿವಿದೆ. ನಮ್ಮಲ್ಲಿಗೆ ಬಂದು ಊಟ ಮಾಡಿಕೊಂಡು ಹೋಗುತ್ತಾರೆ. ಅವರಿಂದ ಯಾರಿಗೂ ಸಮಸ್ಯೆ ಇಲ್ಲ ಎಂದು ಅವರಿಗೆ ಊಟ ನೀಡುವ ಮನೆಯವರು ತಿಳಿಸಿದ್ದಾರೆ. ಈ ಹಿಂದೆಯೂ ಪತ್ರಿಕೆಯಲ್ಲಿ ಇವರ ಬಗ್ಗೆ ವರದಿ ಪ್ರಕಟವಾದಾಗ ಸಂಘ - ಸಂಸ್ಥೆಯವರು, ಸಾಮಾಜಿಕ ಕಳಕಳಿ ಉಳ್ಳವರು ನಾಡಿಗೆ ಬರುವಂತೆ ಮನವೊಲಿಸಿದಾಗ ಕೆಂಚಪ್ಪನಿರಾಕರಿಸಿದ್ದರು.

21ರ ಹರೆಯದಲ್ಲೇ ಊರು ತೊರೆದವರು ತನ್ನ 21ನೆ ವರ್ಷದಲ್ಲಿ ಏಕಾಏಕಿ ಮನೆ ತೊರೆದ ಕೆಂಚಪ್ಪ ಅವರು ಸುಮಾರು 7 ಕಿ.ಮೀ. ದೂರದ ಕಾಡು ಸೇರಿ ಸೂರು ಕಟ್ಟಿಕೊಂಡು ಅಲ್ಲಿಯೇ ಜೀವನ ಸಾಗಿಸತೊಡಗಿದ್ದರು. ಕಾಡಿನಲ್ಲಿ ಸಿಗುವ ಗೆಡ್ಡೆಗೆಣಸು, ಹಣ್ಣು ಹಂಪಲನ್ನು ಆಹಾರವಾಗಿ ಬಳಸುತ್ತಿದ್ದರು. ಕೆಲವು ವರ್ಷಗಳಿಂದ ಕಾಡಿನಲ್ಲಿ ಸಿಗುವ ಕಟ್ಟಿಗೆಯನ್ನು ತನ್ನ ಸಂಬಂಕರ ಮನೆಗೆ ತಂದು ಹಾಕಿ ಊಟ ಮಾಡಿಕೊಂಡು ಹೋಗುತ್ತಿದ್ದಾರೆ. ಕೆಂಚಪ್ಪ ಅವರಿಗೆ ಈಗ 79 ವಯಸ್ಸು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News