ಮಲ್ಪೆ: ವೃದ್ಧ ದಂಪತಿಯನ್ನು ಕಟ್ಟಿ ಹಾಕಿ ಲಕ್ಷಾಂತರ ರೂ.ಮೌಲ್ಯದ ಚಿನ್ನಾಭರಣ ಕಳವು

Update: 2016-07-04 16:00 GMT

ಮಲ್ಪೆ, ಜು.4: ಬಡಾನಿಡಿಯೂರು ಗ್ರಾಮದ ಪಾವಂಜೆ ಗುಡ್ಡೆ ಎಂಬಲ್ಲಿ ಜು.4ರಂದು ನಸುಕಿನ ವೇಳೆ ಮನೆಯೊಂದಕ್ಕೆ ನುಗ್ಗಿದ ಮುಸುಕುಧಾರಿ ದರೋಡೆಕೋರರಿಬ್ಬರು ವೃದ್ಧ ದಂಪತಿಯನ್ನು ಕಟ್ಟಿ ಹಾಕಿ ಚಿನ್ನಾಭರಣ ಹಾಗೂ ಕಾರು ದರೋಡೆಗೈದಿರುವ ಬಗ್ಗೆ ವರದಿಯಾಗಿದೆ.

ಕೆಮ್ಮಣ್ಣುವಿನಲ್ಲಿ ಕ್ಲಿನಿಕ್ ನಡೆಸುತ್ತಿರುವ ಡಾ.ಬಿ.ದೇವಿದಾಸ್ ಭಟ್(73) ಹಾಗೂ ಅವರ ಪತ್ನಿ ಸರೋಜಿನಿ(65) ಜು.3ರಂದು ರಾತ್ರಿ ಊಟ ಮಾಡಿ ಮನೆಯಲ್ಲಿ ಮಲಗಿದ್ದು, ಜು.4ರಂದು ಬೆಳಗಿನ ಜಾವ 3:30ರ ಸುಮಾರಿಗೆ ಮನೆಯ ಮಹಡಿ ಮೇಲೆ ಶಬ್ದ ಕೇಳಿದ ಹಿನ್ನೆಲೆಯಲ್ಲಿ ಡಾ.ದೇವಿಪ್ರಸಾದ್ ಭಟ್ ಎದ್ದು ನೋಡಿ ಮತ್ತೆ ಮಲಗಿದ್ದರು. ನಂತರ ಇವರು 4ಗಂಟೆ ಸುಮಾರಿಗೆ ಎದ್ದು ಟಾಯ್ಲೆಟ್‌ಗೆ ಹೋಗುವಾಗ ಅಲ್ಲೇ ಹತ್ತಿರ ಉಪ್ಪರಿಗೆ ಮೆಟ್ಟಿಲಲ್ಲಿ ಕಪ್ಪು ಜಾಕೆಟ್ ತೊಟ್ಟು, ಮುಖಕ್ಕೆ ವಸ್ತ್ರ, ಕೈಚೀಲ ಧರಿಸಿದ್ದ ಸುಮಾರು 25ವರ್ಷ ವಯಸ್ಸಿನ ಇಬ್ಬರು ಯುವಕರು ಚೂರಿ ತೋರಿಸಿ ಹಣ ಕೊಡುವಂತೆ ಭಟ್‌ರನ್ನು ಬೆದರಿಸಿದರು.

ನಂತರ ಕಳ್ಳರು ಡಾ.ದೇವಿಪ್ರಸಾದ್ ಭಟ್‌ರನ್ನು ಬೆಡ್‌ರೂಂಗೆ ಕರೆದು ಕೊಂಡು ಬಂದು ಬಾಯಿಗೆ ಮತ್ತು ಕೈಕಾಲಿಗೆ ಗಮ್ ಟೇಪ್ ಮತ್ತು ಅವರ ಪತ್ನಿಯನ್ನು ಬಟ್ಟೆಯಲ್ಲಿ ಕಟ್ಟಿ ಹಾಕಿದರು. ಗೊದ್ರೇಜ್ ಕೀ ಕೇಳಿ ಅವರಿಂದ ಪಡೆದು ಅದರಲ್ಲಿದ್ದ ಚಿನ್ನದ 2 ಗ್ರಾಂ ತೂಕದ 10 ಚಿನ್ನದ ನಾಣ್ಯ ಹಾಗೂ ನಗದು, ಪತ್ನಿಯ 30ಗ್ರಾಂ ತೂಕದ 2 ಬಂಗಾರದ ಬಳೆ ತೆಗೆದುಕೊಂಡರು. ಬಳಿಕ ಅಲ್ಲಿಂದ ಹೋಗುವಾಗ ಬೆದರಿಸಿ ಅವರ ಕಾರಿನ ಕೀ ಪಡೆದು ಮನೆಯ ಎದುರು ನಿಲ್ಲಿಸಿದ ಹುಂಡೈ ಐ10 ಕಾರಿನೊಂದಿಗೆ ಇಬ್ಬರು ದರೋಡೆ ಕೋರರು ಪರಾರಿಯಾದರು. ಕಳವಾದ ಚಿನ್ನಾಭರಣದ ಮೌಲ್ಯ 1.25ಲಕ್ಷ ರೂ. ಎಂದು ಅಂದಾಜಿಸಲಾಗಿದೆ.

ದರೋಡೆಕೋರರು ಮನೆಯ ಮಹಡಿ ಮೇಲಿನ ಬಾಗಿಲನ್ನು ತೂತು ಮಾಡಿ ಆ ಮೂಲಕ ಕೈಹಾಕಿ ಒಳಗಿನ ಚಿಲಕ ತೆಗೆದು ಒಳನುಗ್ಗಿದ್ದಾರೆ. ಡಾ. ದೇವಿಪ್ರಸಾದ್ ಭಟ್ ಅವರಿಗೆ ಮೂವರು ಮಕ್ಕಳಿದ್ದು ಅವರು ಮದುವೆ ಯಾಗಿ ಇದೀಗ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಕಳೆದ ಹಲವು ವರ್ಷಗಳಿಂದ ಈ ಮನೆಯಲ್ಲಿ ಇವರಿಬ್ಬರೆ ನೆಲೆಸಿದ್ದಾರೆ.

2015ರ ಎಪ್ರಿಲ್ ತಿಂಗಳಲ್ಲಿಯೂ ಇಂತಹದ್ದೆ ಘಟನೆ ಇದೇ ಮನೆಯಲ್ಲಿ ನಡೆದಿತ್ತು. ಮನೆಯ ಎದುರು ಬಾಗಿಲಿನಿಂದ ನುಗ್ಗಿದ ಓರ್ವ ಮುಸುಕು ಧಾರಿ ವ್ಯಕ್ತಿ ಇದೇ ದಂಪತಿಯನ್ನು ಬೆದರಿಸಿ ಕಳವಿಗೆ ಯತ್ನಿಸಿದ್ದನು. ಮನೆ ಯಲ್ಲಿ ಯಾವುದೇ ವಸ್ತು ದೊರಕದ ಕಾರಣ ಬರಿಗೈಯಲ್ಲಿ ಹಿಂತಿರುಗಿದ್ದನು. ಸ್ಥಳಕ್ಕೆ ಆಗಮಿಸಿದ ಮಲ್ಪೆ ಪೊಲೀಸರು, ಶ್ವಾನದಳ, ಬೆರಳಚ್ಚು ತಜ್ಞರು ಪರಿಶೀಲನೆ ನಡೆಸಿದರು. ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಅಣ್ಣಾಮಲೈ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ವಿಷ್ಣುವರ್ಧನ್, ಡಿವೈಎಸ್ಪಿ ಕುಮಾರಸ್ವಾಮಿ, ಮಲ್ಪೆ ಎಸ್ಸೈ ರವಿಕುಮಾರ್ ಮನೆಗೆ ತೆರಳಿ ಮಾಹಿತಿ ಕಲೆಹಾಕಿದ್ದಾರೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

ಕಕ್ಕುಂಜೆ ಬಳಿ ಕಾರು ಪತ್ತೆ

ದರೋಡೆಕೋರರು ಚಿನ್ನಾಭರಣದೊಂದಿಗೆ ಕಾರಿನಲ್ಲಿ ಪರಾರಿಯಾಗಿ ನಂತರ ಅದನ್ನು ಪೆರಂಪಳ್ಳಿ ಸಮೀಪದ ಕಕ್ಕುಂಜೆ ಎಂಬಲ್ಲಿ ಬಿಟ್ಟು ಹೋಗಿ ದ್ದರು. ಈ ಬಗ್ಗೆ ಸ್ಥಳೀಯರಿಂದ ಇಂದು ಸಂಜೆ ವೇಳೆ ಕಾರು ಪತ್ತೆಯಾಗಿತ್ತು. ಕಾರಿನ ಕೀ ಕೂಡ ಅದರಲ್ಲೇ ಬಿಟ್ಟುಹೋಗಿದ್ದಾರೆ. ಆದರೆ ಕಳವುಗೈದ ಚಿನ್ನಾ ಭರಣ ಪತ್ತೆಯಾಗಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News