ಹಿರಿಯಡ್ಕ-ಪೆರ್ಡೂರು: ಬಿರುಗಾಳಿಯಿಂದ ಅಪಾರ ಹಾನಿ

Update: 2016-07-04 18:44 GMT

ಉಡುಪಿ, ಜು.4: ಶುಕ್ರವಾರ ಮತ್ತು ಶನಿವಾರ ರಾತ್ರಿ ಪೆರ್ಡೂರು ಮತ್ತು ಹಿರಿಯಡ್ಕ ಪರಿಸರಗಳಲ್ಲಿ ಬೀಸಿದ ಸುಂಟರಗಾಳಿಯಿಂದ 180ಕ್ಕೂ ಅಧಿಕ ಮನೆಗಳಿಗೆ ಹಾನಿಯಾಗಿದ್ದು, ಇದರಿಂದ 75 ಲಕ್ಷ ರೂ.ಗಳಿಗೂ ಅಧಿಕ ವೌಲ್ಯದ ಸೊತ್ತುಗಳಿಗೆ ಹಾನಿಯಾಗಿವೆ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ. ಇವುಗಳಲ್ಲಿ 65 ಮನೆಗಳಿಗೆ ಸಂಪೂರ್ಣ ಹಾಗೂ 120 ಮನೆಗಳಿಗೆ ಭಾಗಶ: ಹಾನಿಯಾಗಿರುವುದಾಗಿ ವರದಿಯಲ್ಲಿ ತಿಳಿಸಲಾಗಿದೆ.

ಶನಿವಾರ ರಾತ್ರಿ ಬೆಳ್ಳರ್ಪಾಡಿ, ಬೊಮ್ಮರಬೆಟ್ಟು, ಪುತ್ತಿಗೆ, ಪೆರ್ಡೂರು ಪಾಡಿಗಾರ, ಅಂಜಾರು ಗ್ರಾಮಗಳ 130ಕ್ಕೂ ಅಧಿಕ ಮನೆಗಳು ಭಾರೀ ಗಾಳಿಯಿಂದ ಹಾನಿಗೊಳಗಾಗಿವೆ. ಕೆಲವೇ ಗಂಟೆಗಳ ಅಂತರದಲ್ಲಿ ಬೀಸಿದ ಈ ಗಾಳಿಗೆ 40 ಮನೆಗಳು ಸಂಪೂರ್ಣ ಹಾನಿಗೊಳಗಾಗಿದ್ದರೆ, 90ಕ್ಕೂ ಅಧಿಕ ಮನೆಗಳು ಭಾಗಶ: ಹಾನಿಗೊಂಡಿವೆ. ಪುತ್ತಿಗೆ ಮಠ ಹಾಗೂ ಸೋಮೇಶ್ವರ ದೇವಸ್ಥಾನಗಳಿಗೂ ಹಾನಿಗಳಾಗಿವೆ ಎಂದು ಉಡುಪಿ ತಹಶೀಲ್ದಾರ್ ಗುರುಪ್ರಸಾದ್ ತಿಳಿಸಿದ್ದಾರೆ.
ಮಗು ಚೇತರಿಕೆ:  ಶನಿವಾರ ಬೀಸಿದ ಬಿರುಗಾಳಿಯಿಂದ ಬೊಮ್ಮರಬೆಟ್ಟು ಗ್ರಾಪಂ ವ್ಯಾಪ್ತಿಯ ಗುಂಡ್ಯಡ್ಕದ ಮೈಕಳ ರಸ್ತೆಯಲ್ಲಿ ವಾಸ್ತವ್ಯ ಹೂಡಿರುವ ಮಹಾಂತೇಶ ಮತ್ತು ಶಾರದಾ ದಂಪತಿಯ ಒಂದೂವರೆ ತಿಂಗಳ ಮಗು ಅರ್ಜುನ್ ಗಂಭೀರವಾಗಿ ಗಾಯಗೊಂಡಿದ್ದು, ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದೆ. ಮಗು ಸ್ವಲ್ಪ ಚೇತರಿಸಿಕೊಂಡಿರುವುದಾಗಿ ವೈದ್ಯರು ತಿಳಿಸಿದ್ದಾರೆ ಎಂದು ಗುರುಪ್ರಸಾದ್ ನುಡಿದರು.

ಕೂಲಿಕಾರ್ಮಿಕರಾಗಿರುವ ಬಾಗಲಕೋಟೆ ಮೂಲದ ಮಹಾಂತೇಶ ಅವರ ಸಿಮೆಂಟ್ ಶೀಟ್ ಮನೆಯ ಛಾವಣಿಗೆ ಕಟ್ಟಲಾಗಿದ್ದ ಸೀರೆಯ ತೊಟ್ಟಿಲಲ್ಲಿದ್ದ ಅರ್ಜುನ್ ಗಾಳಿ ಬೀಸಿದಾಗ ಛಾವಣಿಯೊಂದಿಗೆ 10 ಅಡಿ ದೂರ ಹಾರಿಹೋಗಿ ಬಿದ್ದಿದ್ದು, ಗಂಭೀರವಾಗಿ ಗಾಯಗೊಂಡಿದ್ದ. ಕೂಡಲೇ ಅರ್ಜುನ್‌ನನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ದಾಖಲಿಸಿದ್ದು, ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಗಂಜಿ ಕೇಂದ್ರ: ರವಿವಾರ ಅತೀಹೆಚ್ಚು ಹಾನಿಗೊಳಗಾದ ಬೆಳ್ಳರ್ಪಾಡಿ ಗ್ರಾಮದ ಮನೆಯವರಿಗಾಗಿ ಬೆಳ್ಳರ್ಪಾಡಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತೆರೆದ ಗಂಜಿಕೇಂದ್ರ ತೆರೆಯಲಾಗಿದ್ದು, 45 ಮಂದಿ ಇದರಲ್ಲಿ ಆಶ್ರಯ ಪಡೆದಿದ್ದಾರೆ. ಇವರಲ್ಲಿ ಅರ್ಧದಷ್ಟು ಮಂದಿ ತಮ್ಮ ಮನೆಗಳಿಗೆ ಮರಳಿದರೂ. ಉಳಿದವರು ಸಂಜೆಯವರೆಗೆ ಇಲ್ಲಿ ಆಶ್ರಯ ಪಡೆದಿದ್ದಾರೆ ಎಂದು ತಹಶೀಲ್ದಾರ್ ತಿಳಿಸಿದರು.

ತಾತ್ಕಾಲಿಕ ಪರಿಹಾರ ವಿತರಣೆ: 
ರವಿವಾರ ಬೆಳಗ್ಗಿನಿಂದಲೇ ಕಾರ್ಯಾ ಚರಣೆಗಿಳಿದ ಗುರುಪ್ರಸಾದ್ ನೇತೃತ್ವದ ಕಂದಾಯ ಇಲಾಖೆಯ ಸಿಬ್ಬಂದಿ ಎಲ್ಲಾ ಸಂತ್ರಸ್ತರಿಗೂ ತಾತ್ಕಾಲಿಕ ಪರಿಹಾರ ವಿತರಿಸಿದರು. ಪೂರ್ಣ ಹಾನಿಗೊಂಡ ಮನೆಯವರಿಗೆ 10,000 ರೂ. ಹಾಗೂ ಭಾಗಶ: ಹಾನಿಗೊಂಡವರಿಗೆ 5,000 ರೂ.ಗಳನ್ನು ಸ್ಥಳದಲ್ಲೇ ವಿತರಿಸಲಾಯಿತು ಎಂದು ಗುರುಪ್ರಸಾದ್ ತಿಳಿಸಿದರು. ಗಾಳಿಯಿಂದ ಹಾನಿಗೊಳಗಾದ ಮನೆಗಳಿಗೆ ಭೇಟಿ ನೀಡಿದ ಕಾಪು ಶಾಸಕ, ಮಾಜಿ ಸಚಿವ ವಿನಯಕುಮಾರ್ ಸೊರಕೆ ಸಂತ್ರಸ್ತರಿಗೆ ಚೆಕ್‌ಗಳನ್ನು ವಿತರಿಸಿದರು. ಒಟ್ಟು 9.68 ಲಕ್ಷ ರೂ. ವಿತರಿಸಲಾಗಿದೆ ಎಂದು ತಿಳಿದುಬಂದಿದೆ. ಇದರೊಂದಿಗೆ 10,000 ಹೆಂಚುಗಳನ್ನು ಸಹ ವಿತರಿಸಲಾಗಿದೆ.
ಬಿರುಗಾಳಿಯಿಂದ ಮನೆಗಳಲ್ಲದೇ 14 ಎಕರೆ ಪ್ರದೇಶಗಳಲ್ಲಿದ್ದ ನೂರಾರು ಅಡಿಕೆ ಮರಗಳು ಧರಾಶಾಯಿಯಾಗಿವೆ. ಇವುಗಳ ನಷ್ಟದ ಅಂದಾಜು ಇನ್ನಷ್ಟೇ ಸಿಗಬೇಕಾಗಿದೆ. ಅಧಿಕಾರಿಗಳು ಈ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಗುರುಪ್ರಸಾದ್ ತಿಳಿಸಿದರು.
ಶನಿವಾರದೊಳಗೆ ಎಲ್ಲಾ ಸಂತ್ರಸ್ತರಿಗೂ ಪೂರ್ಣ ಪರಿಹಾರವನ್ನು ವಿತರಿಸಲಾಗುವುದು. ಒಂದೆರಡು ದಿನಗಳೊಳಗೆ ಅಧಿಕಾರಿಗಳಿಂದ ತಾಂತ್ರಿಕ ವರದಿ ಕೈಸೇರಲಿದ್ದು, ಅನಂತರ ಪೂರ್ಣಮನೆ ಹಾನಿಗೊಳಗಾದ ವರಿಗೆ 95,000 ರೂ. ಹಾಗೂ ಭಾಗಶ: ಮನೆ ಹಾನಿಗೊಳಗಾದವರಿಗೆ 20ರಿಂದ 40,000ರೂ. ಪರಿಹಾರ ದೊರೆಯಲಿದೆ ಎಂದವರು ತಿಳಿಸಿ ದರು.
ಬಿರುಗಾಳಿಯಿಂದ ಹಾನಿಗೊಳಗಾದ ಹಿರಿಯಡ್ಕ, ಪುತ್ತಿಗೆ ಹಾಗೂ ಬೆಳ್ಳರ್ಪಾಡಿ ಪ್ರದೇಶಗಳಿಗೆ ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ನೇತೃತ್ವದ ತಂಡವೊಂದು ಇಂದು ಭೇಟಿ ಪರಿಶೀಲಿಸಿದೆ. ಸಂತ್ರಸ್ತರಿಗೆ ಸರಿಯಾದ ಪರಿಹಾರ ವಿತರಣೆಯಾಗಿಲ್ಲ, ಅಧಿಕಾರಿಗಳು ಪರಿಹಾರ ಕಾರ್ಯದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿಲ್ಲ ಎಂದು ತಂಡ ಆಪಾದಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News