ಹುಶಾರು! ರಾಷ್ಟ್ರೀಯ ಹೆದ್ದಾರಿ 75ರ ಉದ್ದಕ್ಕೂ ಕಾದಿದೆ ಅಪಾಯ

Update: 2016-07-07 09:58 GMT

ಬಂಟ್ವಾಳ, ಜು. 7: ರಾಷ್ಟ್ರೀಯ ಹೆದ್ದಾರಿ 75ರ ಬದಿಯಲ್ಲಿರುವ ಅಪಾಯಕಾರಿ ಮರಗಳನ್ನು ಇನ್ನೂ ಕತ್ತರಿಸದೇ ಇರುವುದರಿಂದ ಮಳೆಗಾಲದ ಗಾಳಿ ಮಳೆಗೆ ಅವಘಡವನ್ನು ಎದುರು ನೋಡುತ್ತಿದೆ.

ಬಂಟ್ವಾಳ ತಾಲೂಕಿನ ರಾಷ್ಟ್ರೀಯ ಹೆದ್ದಾರಿಯುದ್ದಕ್ಕೂ ಹತ್ತಾರು ಹಳೆ ಹಾಗೂ ಒಣಗಿರುವ ಮರಗಳಿವೆ. ಅದರಲ್ಲೂ ಬುಡೋಳಿ ಜಂಕ್ಷನ್‌ನಿಂದ ಮಾಣಿ ಪಳಕೆ ನಡುವಿನ ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿ ಒಣಗಿ ನಿಂತಿರುವ ಬೃಹತ್ ಹಳೆ ತಾಳೆ ಮರಳು ಗಾಳಿ ಮಳೆಗೆ ಧರಾಶಾಹಿಯಾಗುವ ಕ್ಷಣಗಳನ್ನು ಎದುರಿಸುತ್ತಿವೆ. ಆದರೂ ಈ ಮರಗಳನ್ನು ಕತ್ತರಿಸುವ ಗೋಜಿಗೆ ಅಧಿಕಾರಿಗಳು ಹೋಗುತ್ತಿಲ್ಲ. ಇದೇ ಪ್ರದೇಶದಲ್ಲಿ ಮೇ ತಿಂಗಳ ಅಂತ್ಯದಲ್ಲಿ ಬೀಸಿದ ಗಾಳಿಗೆ ತಾಳೆ ಮರವೊಂದು ಮಾರುತಿ ಆಲ್ಟೊ ಕಾರಿನ ಮೇಲೆ ಉರುಳಿ ಬಿದ್ದು ಇಬ್ಬರು ತೀವ್ರ ಸ್ವರೂಪದ ಗಾಯಗೊಂಡು ಚಿಂತಾಜನಕ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದದನ್ನು ಇಲ್ಲಿ ಸ್ಮರಿಸಬಹುದು. 

ಅಲ್ಲದೆ ರಸ್ತೆ ಬದಿಯಲ್ಲಿ ಇರುವ ಮರಗಳಿಂದ ವಾಹನ ಪ್ರಯಾಣಿಕರೂ ತೊಂದರೆ ಅನುಭವಿಸುತ್ತಿದ್ದಾರೆ. ರಸ್ತೆಗೆ ತಾಗಿಕೊಂಡು ಮರಗಳು ಬೆಳೆಯುತ್ತಿದ್ದರೂ ಅವುಗಳನ್ನೂ ಕತ್ತರಿಸುವ ಕೆಲಸಗಳು ನಡೆಯುತ್ತಿಲ್ಲ. ಎರಡು ವರ್ಷಗಳ ಹಿಂದೆ ಮಾಣಿ ಸಮೀಪ ಸರಕಾರಿ ಬಸ್‌ನಲ್ಲಿ ಪತ್ನಿ ಮಗುವಿನೊಂದಿಗೆ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬರು ಕಿಟಕಿಗೆ ತಲೆ ಇಟ್ಟು ಮಲಗಿದ್ದ ವೇಳೆ ತಲೆ ಮರಕ್ಕೆ ಬಡಿದು ದೇಹದಿಂದ ತಲೆ ಬೇರ್ಪಟ್ಟ ದುರ್ಘಟನೆಯೂ ನಡೆದಿದ್ದನ್ನು ಇಲ್ಲಿ ನೆನಪಿಸಬಹುದು.

ರಸ್ತೆ ಬದಿಯಲ್ಲಿರುವ ಅಪಾಯಕಾರಿ ಮರಗಳನ್ನು ಕಡಿಯುವ ಬಗ್ಗೆ ಹೆದ್ದಾರಿ ಹಾಗೂ ಅರಣ್ಯ ಇಲಾಖೆಯ ನಡುವೆ ಸಮನ್ವಯದ ಕೊರತೆ ಕಾಣುತ್ತಿದೆ. ರಸ್ತೆ ಬದಿ ಇರುವ ಅಪಾಯಕಾರಿ ಮರಗಳನ್ನು ಕಡಿಯುವಂತೆ ಹೆದ್ದಾರಿ ಇಲಾಖೆಯ ಅಧಿಕಾರಿಗಳೊಂದಿಗೆ ಮನವಿ ಮಾಡಿದರೆ ಮರಗಳನ್ನು ಕಡಿಯಲು ಅರಣ್ಯ ಇಲಾಖೆಯವರು ಅವಕಾಶ ನೀಡುತ್ತಿಲ್ಲ ಎಂದು ಸಬೂಬು ಹೇಳುತ್ತಿದ್ದಾರೆ. ಎರಡೂ ಇಲಾಖೆಯ ಕಚ್ಚಾಟದಿಂದ ಅಪಾಯವನ್ನು ಎದುರಿಸುತ್ತಿರುವುದು ಮಾತ್ರ ಬಡ ಸಾರ್ವಜನಿಕರು ಎಂಬುದು ಖೇದಕರ. ಇನ್ನಾದರೂ ಅಧಿಕಾರಿಗಳು, ಜನಪ್ರತಿನಿಧಿಗಳು ಅಪಘಡಗಳು ಸಂವಿಸುವ ಮುನ್ನ ಎಚ್ಚೆತ್ತು ಹೆದ್ದಾರಿ ಬದಿಯಲ್ಲಿರುವ ಅಪಾಯಕಾರಿ ಮರಗಳನ್ನು ಕತ್ತರಿಸಬೇಕಾಗಿದೆ ಎಂದು ಆಟೊ ರಿಕ್ಷಾ ಚಾಲಕ ಶಂಸೀರ್, ಮನೋಹರ್ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News