ಉದ್ಯಾವರದಲ್ಲಿ ಈದ್ ಸೌಹಾರ್ದ ಕೂಟ

Update: 2016-07-07 16:39 GMT

ಉದ್ಯಾವರ,ಜು.7: ಎಲ್ಲಾ ಜಾತಿ ಧರ್ಮದವರನ್ನು ಸಮಾನತೆಯಿಂದ ಕಾಣುವ ಸಂವಿಧಾನವನ್ನು ಭಾರತದಲ್ಲಿ ಮಾತ್ರ ಕಾಣಲು ಸಾಧ್ಯ ಎಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ತಿಳಿಸಿದ್ದಾರೆ.

ಉದ್ಯಾವರ ಸೈಂಟ್ ಫ್ರಾನ್ಸಿಸ್ ಕ್ಸೇವಿಯರ್ ಚರ್ಚ್ ಸಭಾಭವನದಲ್ಲಿ ಬುಧವಾರ ಉದ್ಯಾವರ ಯಶಸ್ವಿ ಫಿಶ್ ಮೀಲ್ ಆಂಡ್ ಆಯಿಲ್ ಕಂಪೆನಿ ಪ್ರಾಯೋಜಕತ್ವದಲ್ಲಿ ವಿವಿಧ ಸ್ಥಳೀಯ ಸಂಘಟನೆಗಳ ಸಹಯೋಗದೊಂದಿಗೆ ನಡೆದ ಈದ್ ಸೌಹಾರ್ದ ಕೂಟ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.

ಉಡುಪಿ ಕ್ಷೇತ್ರದಲ್ಲಿ ಜನರ ಪ್ರೀತಿ ವಿಶ್ವಾಸದಿಂದ ಗೆದ್ದು ಶಾಸಕನಾಗಿ ಇದೀಗ ಸಚಿವನಾಗಿದ್ದೇನೆ. ಸಂವಿಧಾನದಂತೆ ರಾಜಧರ್ಮವನ್ನು ಪಾಲಿಸುವ ಜವಾಬ್ದಾರಿ ಕೂಡಾ ನನ್ನದಾಗಿದೆ ಎಂದ ಅವರು, ಸರಕಾರದ ಪರವಾಗಿ ಸಮಸ್ತ ಮುಸ್ಲಿಂ ಬಾಂಧವರಿಗೆ ಈದ್ ಹಬ್ಬದ ಶುಭಾಶಯವನ್ನು ತಿಳಿಸಿದರು.

ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಡಾ.ಜೆರಾಲ್ಡ್ ಐಸಾಕ್ ಲೋಬೊ ಅಧ್ಯಕ್ಷತೆವಹಿಸಿ ಮಾತನಾಡಿ, ಧರ್ಮ ಧರ್ಮಗಳನ್ನು ಅರಿತು ಸೌಹಾರ್ದತೆಯಿಂದ ಬಾಳ್ವೆ ನಡೆಸುವುದೇ ನಿಜವಾದ ಮಾನವಧರ್ಮವಾಗಿದೆ. ದೇವರ ಆರಾಧನೆಯಿಂದ ಸಂಪತ್ತಿನ ವ್ಯಾಮೋಹವನ್ನು ದೂರಮಾಡಲು ಸಾಧ್ಯ. ಬಹುಸಂಸ್ಕೃತಿಯ ಸಮಾಜದಲ್ಲಿ ಪರಧರ್ಮವನ್ನು ಗೌರವಿಸುವ ಚಾರಿತ್ಯ ನಮ್ಮದಾಗಲಿ ಎಂದರು.

ಉದ್ಯಮಿ ಯಾಸೀನ್ ಮಲ್ಪೆ ದಕ್ಸೂಜಿ ಭಾಷಣ ಮಾಡಿದರು. ಅಖಿಲಭಾರತ ತುಳುಕೂಟದ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ,ಉದ್ಯಾವರ ಜಾಮಿಯಾ ಮಸೀದಿಯ ಮೌಲಾನಾ ಅಬ್ದುಲ್ ರಶೀದ್ ರೆಹಮಾನಿಯಾ ಮಾತನಾಡಿದರು. ಯಶಸ್ವಿ ಮೆರೈನ್ ಇನ್‌ಗ್ರೇಡಿಯಂಟ್ ನಿರ್ದೇಶಕರಾದ ಜನಾಬ್ ಎಫ್ ಎಂ. ಯಾಕೂಬ್, ಉದಯ್ ಮಲ್ಪೆ, ಉದ್ಯಾವರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಗಂಧಿ ಶೇಖರ್, ಮಹಮ್ಮದ್ ಖಲೀಲ್, ಅಲ್ಪೋನ್ಸ್ ಡಿಕೋಸ್ಟಾ,ಮಹಮ್ಮದ್ ಮೌಲಾ, ಲಾರೆನ್ಸ್ ಡೇಸಾ ಉಪಸ್ಥಿತರಿದ್ದರು. ಉದ್ಯಾವರ ಸೈಂಟ್ ಫ್ರಾನ್ಸಿಸ್ ಕ್ಸೇವಿಯರ್ ಚರ್ಚ್ ಧರ್ಮಗುರು ಡಾ. ರೋಕ್ ಡಿಸೋಜಾ ಸ್ವಾಘತಿಸಿದರು. ಉಡುಪಿ ವಲಯ ಪ್ರಧಾನ ಧರ್ಮಗುರು ಫ್ರೆಡ್ ಮಸ್ಕರೇನಸ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಉದ್ಯವಾರ ಯಶಸ್ವಿ ಫಿಶ್ ಮೀಲ್ ಆಂಡ್ ಆಯಿಲ್ ಕಂಪೆನಿ , ಸೌಹಾರ್ದ ಸಮಿತಿ ಉದ್ಯಾವರ ಮತ್ತು ಉಡುಪಿ, ಲಯನ್ಸ್,ಲಯನೆಸ್,ಮತ್ತು ಲಿಯೊ ಕ್ಲಬ್ ಉಡುಪಿ ಇಂದ್ರಾಳಿ, ಅಲ್ಪಸಂಖ್ಯಾತರ ವೇದಿಕೆ ಜಂಟಿಯಾಗಿ ಕಾರ್ಯಕ್ರಮ ಆಯೋಜಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News