ಜಿಲ್ಲಾಮಟ್ಟದಲ್ಲಿ ಸಾರ್ವಜನಿಕರೊಂದಿಗೆ ಸಿಎಂ ವೀಡಿಯೊ ಕಾನ್ಫರೆನ್ಸ್: ಎ.ಬಿ.ಇಬ್ರಾಹೀಂ

Update: 2016-07-08 15:32 GMT

ಮಂಗಳೂರು,ಜು.7: ರಾಜ್ಯದ ಮುಖ್ಯಮಂತ್ರಿಗೆ ಸಾರ್ವಜನಿಕರ ಸಲ್ಲಿಸಿರುವ ಕುಂದು ಕೊರತೆಗಳ ಅರ್ಜಿಗಳ ಬಗ್ಗೆ ತುರ್ತು ಕ್ರಮ ಕೈಗೊಳ್ಳಲು ಜಿಲ್ಲಾ ಮಟ್ಟದಲ್ಲಿ ಮುಖ್ಯಮಂತ್ರಿ ಕಚೇರಿಯ ಮೂಲಕ ವೀಡಿಯೊ ಕಾನ್ಫರೆನ್ಸ್ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ ತಿಳಿಸಿದರು.

ಅವರು ಇಂದು ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಆಡಳಿತ ಚುರುಕುಗೊಳಿಸುವ ಬಗ್ಗೆ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆದ ಸಭೆಯ ನಿರ್ದೇಶನಗಳನ್ನು ಅನುಷ್ಠಾನಗೊಳಿಸಲು ಜಿಲ್ಲಾ ಮಟ್ಟದಲ್ಲಿ ಹಮ್ಮಿಕೊಂಡ ಅಧಿಕಾರಿಗಳ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದರು.

ರಾಜ್ಯದಲ್ಲಿ ಪಾರದರ್ಶಕ, ಜನಪರ, ಭ್ರಷ್ಟಾಚಾರ ರಹಿತ, ಜನರ ದೂರುಗಳಿಗೆ ತ್ವರಿತವಾಗಿ ಸ್ಪಂದಿಸುವ ರೀತಿಯಲ್ಲಿ ಸರಕಾರದ ಇಲಾಖೆಗಳು ಕಾರ್ಯನಿರ್ವಹಿಸಬೇಕು ಎನ್ನುವುದು ಮುಖ್ಯಮಂತ್ರಿಯವರ ಕಾಳಜಿಯಾಗಿದೆ. ಜಿಲ್ಲಾಮಟ್ಟದಲ್ಲಿ ಹಾಗೂ ಗ್ರಾಮ ಮಟ್ಟದಲ್ಲಿ ಪರಿಹಾರ ಮಾಡಬಹುದಾದ ಸಮಸ್ಯೆಗಳ ಬಗ್ಗೆ ಜನರು ರಾಜ್ಯದ ಮುಖ್ಯ ಮಂತ್ರಿಗಳಿಗೆ ಬೆಂಗಳೂರಿಗೆ ತೆರಳಿ ದೂರು ನೀಡುತ್ತಿರುವುದು ಹೆಚ್ಚುತ್ತಿದೆ. ಜನರ ಸಮಸ್ಯೆಗಳನ್ನು ತಳಮಟ್ಟದಲ್ಲಿಯೇ ಪರಿಹರಿಸಲು ಅನುಕೂಲವಾಗುವಂತೆ ಆಡಳಿತ ಯಂತ್ರದಲ್ಲಿ ಚುರುಕು ಮೂಡಿಸಲು ಸಮಸ್ಯೆಗಳನ್ನು ತ್ವರಿತವಾಗಿ ಬಗೆಹರಿಸಲು ನಿರ್ಧರಿಸಲಾಗಿದೆ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿಯವರು ದೂರು ನೀಡಿದ ದೂರುದಾರರನ್ನು ಜಿಲ್ಲಾ ಮಟ್ಟದಲ್ಲಿ ಆಹ್ವಾನಿಸಿ ಆತನೊಂದಿಗೆ ವೀಡಿಯೊ ಕಾನ್ಫರೆನ್ಸ್ ಮೂಲಕ ನೇರವಾಗಿ ಸಮಾಲೋಚನೆ ನಡೆಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸೂಚನೆ ನೀಡಿರುವುದಾಗಿ ತಿಳಿಸಿದರು.

ಜನರ ಸಮಸ್ಯೆಗಳನ್ನು ಜಿಲ್ಲಾ ಮಟ್ಟದಲ್ಲಿಯೇ ಪರಿಹರಿಸಲು ಪ್ರತಿ ತಿಂಗಳು ಜಿಲ್ಲಾ ಉಸ್ತುವಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳನ್ನೊಳಗೊಂಡಂತೆ ಜನಸ್ಪಂದನ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಸರಕಾರಿ ಆಸ್ಪತ್ರೆ, ಆರೋಗ್ಯ ಕೇಂದ್ರಗಳು, ಅಂಗನವಾಡಿಗಳು, ಶಾಲೆಗಳಿಗೆ, ನ್ಯಾಯಬೆಲೆ ಅಂಗಡಿಗಳಿಗೆ, ವಿದ್ಯಾರ್ಥಿ ನಿಲಯಗಳಿಗೆ ಅಧಿಕಾರಿಗಳು ತಪಾಸಣೆ ನಡೆಸಲು ಭೇಟಿ ನೀಡಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು.

ಮಾಧ್ಯಮಗಳ ವರದಿಗಳ ಬಗ್ಗೆ ಅನುಪಾಲನಾ ವರದಿ

ಮಾಧ್ಯಮಗಳಲ್ಲಿ ಪ್ರಕಟವಾಗುವ ಜನರ ಸಮಸ್ಯೆಗಳಿಗೆ ಸಂಬಂಧಿಸಿದ ವರದಿಗಳಿಗೆ ಆಯಾ ಇಲಾಖೆಗಳ ಅಧಿಕಾರಿಗಳು ಪಾಲನಾ ವರದಿಗಳನ್ನು ಜಿಲ್ಲಾಮಟ್ಟದ ಅಧಿಕಾರಿಗೆ ಹಾಗೂ ಆಯಾ ಪತ್ರಿಕೆಗಳಿಗೆ ನೀಡಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಜಿಲ್ಲೆಯಲ್ಲಿ ವಿವಿಧ ಇಲಾಖೆಗಳಿಗೆ ಸಂಬಂಧಿಸಿದಂತೆ ಬಾಕಿ ಇರುವ ಪ್ರಗತಿ ಪರಿಶೀಲನೆ ನಡೆಸಿ, ಕುಂಠಿತಗೊಂಡಿರುವ ಪ್ರಗತಿಗೆ ಸಂಬಂಧಿಸಿದಂತೆ ಸೂಕ್ತ ಕ್ರಮ ಕೈಗೊಳ್ಳಲು ಸೂಚನೆ ನೀಡಿದರು. ನಗರೋತ್ಥಾನ ಯೋಜನೆಯಲ್ಲಿ ಮಂಗಳೂರು ಮಹಾನಗರ ಪಾಲಿಕೆಗೆ ಬಿಡುಗಡೆಯಾಗಿರುವ 100 ಕೋಟಿ ಅನುದಾನಕ್ಕೆ ಸಂಬಂಧಿಸಿದಂತೆ 50 ಕೋಟಿ ರೂ. ಖರ್ಚು ಆಗದೆ ಉಳಿದಿರುವ ಹಿನ್ನೆಲೆಯಲ್ಲಿ ತಕ್ಷಣ ಈ ಬಗ್ಗೆ ಕ್ರಮ ಕೈ ಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದರು.ಜಿಲ್ಲೆಯ 230 ಅಂಗನವಾಡಿಗಳಿಗೆ ಸ್ಥಳ ಒದಗಿಸಲು ಹಾಗೂ 29 ವಸತಿ ನಿಲಯಗಳಿಗೆ ಸೈಟ್ ಒದಗಿಸಲು ಸೂಕ್ತ ಕ್ರಮ ಕೈ ಗೊಳ್ಳಲು ಜಿಲ್ಲಾಧಿಕಾರಿ ಸೂಚನೆ ನೀಡಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀ ವಿದ್ಯಾ, ಹೆಚ್ಚುವರಿ ಜಿಲ್ಲಾಧಿಕಾರಿ ಕುಮಾರ್,ಮಂಗಳೂರು ಸಹಾಯಕ ಕಮೀಶನರ್ ಅಶೋಕ್, ಪುತ್ತೂರು ಸಹಾಯಕ ಕಮೀಶನರ್ ಡಾ.ರಾಜೇಂದ್ರ, ಸಹಾಯಕ ಕಮೀಶನರ್ ವೇದ ಮೂರ್ತಿ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News