ಕಾಂಗ್ರೆಸ್ ಆಡಳಿತದಿಂದ ಆತ್ಮಹತ್ಯೆ ಭಾಗ್ಯ ಸೇರ್ಪಡೆ: ಪಾಲೇಮಾರ್ ವ್ಯಂಗ್ಯ

Update: 2016-07-08 17:22 GMT

ಮಂಗಳೂರು, ಜು.8: ರೈತರ ಆತ್ಮಹತ್ಯೆ ಬಳಿಕ ಇದೀಗ ರಾಜ್ಯದ ರಕ್ಷಣಾ ಕೋಟೆಯೆಂದೇ ಹೇಳಲಾಗುವ ಪೊಲೀಸ್ ಇಲಾಖೆಯಲ್ಲಿ ಆಗುತ್ತಿರುವ ಹಿರಿಯ ಅಧಿಕಾರಿಗಳ ಸರಣಿ ಆತ್ಮಹತ್ಯೆಗಳು ರಾಜ್ಯ ಮಾತ್ರವಲ್ಲ ದೇಶದ ಜನತೆಯನ್ನು ಕಂಗಾಲಾಗುವಂತೆ ಮಾಡಿದೆ. ಆಡಳಿತ ಪಕ್ಷದಿಂದ ನಿಷ್ಠಾವಂತರಿಗೆ ಕಿರುಕುಳ, ಇಲಾಖೆಗಳಲ್ಲಿ ಹಸ್ತಕ್ಷೇಪ ಮಿತಿ ಮೀರಿ ಬೆಳೆಯುತ್ತಿದೆ ಎಂದು ಮಾಜಿ ಸಚಿವ ಕೃಷ್ಣ ಜೆ.ಪಾಲೇಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪಣಂಬೂರಿನಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಎಸೈ ಬಂಡೆ, ಐಎಎಸ್ ಅಧಿಕಾರಿ ರವಿ, ಡಿವೈಎಸ್ಪಿ ಕಲ್ಲಪ್ಪ, ಇದೀಗ ಖಡಕ್ ಅಧಿಕಾರಿ ಎಂದೇ ಹೆಸರು ವಾಸಿಯಾಗಿದ್ದ ಡಿವೈಎಸ್ಪಿ ಗಣಪತಿ ಅವರ ವರೆಗೆ ಆತ್ಮಹತ್ಯೆ ಸರಣಿ ಮುಂದುವರಿದಿದೆ ಎಂದರು.

ದಕ್ಷ ಅಧಿಕಾರಿಗಳನ್ನು ವರ್ಗಾವಣೆ ಮಾಡುವುದರಲ್ಲೇ ನಿರತವಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಡಿವೈಎಸ್ಪಿ ಆನುಪಮಾ ಶೆಣೈ ರಾಜೀನಾಮೆ ಪಡೆದು ತಣ್ಣಗೆ ಕುಳ್ಳಿರಿಸಿ ಕಾನೂನು ಬಾಹಿರ ಕೆಲಸಗಳಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ ಎಂದು ಆರೋಪಿಸಿದರು.

ಜನತೆಗೆ ಭೀತಿ

ಪೊಲೀಸ್ ಅಧಿಕಾರಿಗಳನ್ನೇ ಬಿಡದ ಸರಕಾರ ಜನ ಸಾಮಾನ್ಯರಿಗೆ ಕಾನೂನು ರಕ್ಷಣೆ ನೀಡುತ್ತದೆ ಎಂಬುದು ಕನಸಿನ ಮಾತು. ಇದೀಗ ಭೀತಿಯಿಂದ ಜೀವನ ನಡೆಸುವಂತಾಗಿದ್ದು ಆಕ್ರೋಶಿತ ನಾಗರಿಕರಿಂದ ಭಾರೀ ಜನಾಂದೋಲನವಾಗುವ ಸಾಧ್ಯತೆಯಿದೆ ಎಂದು ಹೇಳಿದರು.

ಬಿಜೆಪಿಯಿಂದ ಸರಣಿ ಪ್ರತಿಭಟನೆ

ಗ್ರಾಮ, ತಾಲೂಕು, ಜಿಲ್ಲಾ ಮಟ್ಟದಲ್ಲಿ ಬಿಜೆಪಿ ಪಕ್ಷವು ದುರಾಡಳಿತ ವಿರುದ್ಧ ಸರಣಿ ಪ್ರತಿಭಟನೆಗೆ ಇಳಿಯಲಿದ್ದು ಜಿಲ್ಲಾ ಹಿರಿಯ ನಾಯಕರ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ. ಪೊಲೀಸ್ ಇಲಾಖೆಗೆ ನೈತಿಕ ಸ್ಥೈರ್ಯ ತುಂಬಲು ಬಿಜೆಪಿ ಮುಂದಾಗಲಿದೆ ಎಂದರು.

ರಣ್‌ದೀಪ್ ಕಾಂಚನ್, ಸೂರಜ್ ಕಲ್ಯ, ಮಾಜಿ ಕಾರ್ಪೊರೇಟರ್ ಅಶ್ವಿನ್ ಕುಮಾರ್, ಉದಯ್‌ ಪೂಜಾರಿ ಮತ್ತಿತರರು ಈ ಸಂದರ್ಭ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News