ಪರ್ಕಳ ಪರಿಸರದಲ್ಲಿ ಮುಂದುವರೆದ ವಿದ್ಯುತ್ ಸಮಸ್ಯೆ

Update: 2016-07-08 17:36 GMT

ಉಡುಪಿ, ಜು.8: ಮಳೆಗಾಲ ಪ್ರಾರಂಭವಾದ ದಿನದಿಂದ ದಿನಂಪ್ರತಿ ವಿದ್ಯುತ್ ವಿತರಣೆಯಲ್ಲಿ ಕಂಡುಬಂದ ವ್ಯತ್ಯಾಸದಿಂದ ಹಾಗೂ ಈ ಬಗ್ಗೆ ಮೆಸ್ಕಾಂನ ಉನ್ನತ ಅಧಿಕಾರಿಗಳು ಇದರತ್ತ ಗಮನಕೊಡದ ಕಾರಣ ಪರ್ಕಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗುತ್ತಿದ್ದು, ಈ ಮೂಲಕ ಕತ್ತಲೆ ಭಾಗ್ಯ ಮುಂದುವರೆದಿದೆ.

ಸಣ್ಣಕ್ಕಿಬೆಟ್ಟು, ಮಾಣಿಬೆಟ್ಟು, ಪರ್ಕಳ ಪೇಟೆ, ಸೆಟ್ಟಿಬೆಟ್ಟು, ಹೆರ್ಗ ಗೋಳಿ ಕಟ್ಟೆ, ಹೆರ್ಗ ದೇವಸ್ಥಾನ ಬಳಿ, ಕೊಡಂಗೆ, ಕೆಳಪರ್ಕಳ, ಮುಂತಾದ ಕಡೆ ಒಂದೊಂದು ಕಾರಣದಿಂದ ದಿನನಿತ್ಯ ವಿದ್ಯುತ್ ವ್ಯತ್ಯಯ ಕಂಡುಬರುತ್ತಿದೆ. ಎರಡು ತಿಂಗಳ ಹಿಂದೆ ಪರ್ಕಳದಲ್ಲಿ ಪ್ರಾರಂಭಗೊಂಡ ಹೊಸ ಮೆಸ್ಕಾಂ ಕಚೇರಿಯಲ್ಲಿ ಹೆಚ್ಚುವರಿ ಸಿಬ್ಬಂದಿ ಆರು ಜನ ಸೇರಿ ಒಟ್ಟು 8 ಜನ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ.

ಆದರೆ ವಿದ್ಯುತ್ ಎಲ್ಲಿ ಕೈಕೊಟ್ಟಿದೆ ಎಂಬುದನ್ನು ತಿಳಿಯುವ ಉನ್ನತ ಮಟ್ಟದ ಜಿ.ಪಿ.ಆರ್.ಎಸ್ ತಂತ್ರಜ್ಞಾನದ ಉಪಕರಣಗಳು ಅವರ ಬಳಿ ಇಲ್ಲದ ಕಾರಣ ಈಗ ತೊಂದರೆಯಾಗುತ್ತಿದೆ. ಈ ಹಿಂದೆ ಅಳವಡಿಸಲಾದ ಇನ್ಸುಲೇಟರ್(ಬಟ್ಟಲು) ಮೊದಲಾದ ವಿದ್ಯುತ್ ಉಪಕರಣಗಳು ಕೆಟ್ಟು ಹೋಗಿವೆ. ಹೆರ್ಗದ ಮದಗದಲ್ಲಿ ವಿದ್ಯುತ್ ಕಂಬಗಳು ಹಾದು ಹೋಗಿದ್ದು, ಇದರ ತಂತಿಗಳು ಕೆರೆಯ ನೀರಿಗೆ ತಳಮಟ್ಟದಲ್ಲಿ ತಾಗುವಂತೆ ತೇಲುತ್ತಿದೆ.

ಅದನ್ನು ಕೂಡಲೇ ದುರಸ್ತಿಗೊಳಿಸಬೇಕೆಂದು ಸ್ಥಳೀಯರಾದ ಸಂಜೀವ ಪೂಜಾರಿ, ಗಣೇಶ್ ರಾಜ್ ಸರಳೇಬೆಟ್ಟು ಸಂಬಂಧ ಪಟ್ಟ ಇಲಾಖಾಧಿಕಾರಿಗಳನ್ನು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News