ಸುಳ್ಯ: ಕನ್ನಡ ಸಾಹಿತ್ಯ ಪರಿಷತ್ ಪದಸ್ವೀಕಾರ ಸಮಾರಂಭ

Update: 2016-07-08 18:09 GMT

ಸುಳ್ಯ, ಜು.8: ಕನ್ನಡ ಸಾಹಿತ್ಯ ಪರಿಷತ್ ಸುಳ್ಯ ತಾಲೂಕು ಘಟಕದ ಪದಸ್ವೀಕಾರ ಸಮಾರಂಭ ಸುಳ್ಯ ಅಂಬಟೆಡ್ಕದ ಕನ್ನಡ ವನದಲ್ಲಿ ನಡೆಯಿತು.
ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್‌ನ ಅಧ್ಯಕ್ಷ ಡಾ.ಕೆ.ವಿ.ಚಿದಾನಂದ ಕಾರ್ಯಕ್ರಮ ಉದ್ಘಾಟಿಸಿದರು.

ಕನ್ನಡದ ಬಳಕೆ ಇಳಿಮುಖವಾಗುತ್ತಿರುವ ಸಂದರ್ಭದಲ್ಲಿ ಅದನ್ನು ಮೇಲಕ್ಕೆ ಎತ್ತುವ ಕೆಲಸವನ್ನು ಸಾಹಿತ್ಯ ಪರಿಷತ್ತು ಮಾಡಬೇಕು. ಸಾಹಿತಿಗಳನ್ನು ಗುರುತಿಸುವ ಕಾರ್ಯ ಆಗಬೇಕು. ಯುವಜನರನ್ನು ಸಾಹಿತ್ಯ ಪರಿಷತ್ತಿಗೆ ಸೇರ್ಪಡೆ ಮಾಡುವ ಕೆಲಸವೂ ಆಗಬೇಕು ಎಂದವರು ಹೇಳಿದರು.

ಅತಿಥಿಯಾಗಿದ್ದ ಬೆಳ್ಳಾರೆ ಡಾ.ಶಿವರಾಮ ಕಾರಂತ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ಡಾ.ನರೇಂದ್ರ ರೈ ದೇರ್ಲ ಮಾತನಾಡಿ, ಜಾಗತೀಕರಣದಿಂದ ವೈವಿಧ್ಯತೆ ನಾಶವಾಗಿದೆ. ಭಾಷೆ, ಆಲೋಚನೆಗಳ ಜೊತೆಗೆ ಸಂಬಂಧಗಳೂ ಸಾಯುತ್ತಿವೆ. ಭಾಷೆಗಳನ್ನು ಉಳಿಸುವ ಕೆಲಸ ಹೃದಯ, ಮನಸ್ಸಿನಿಂದ ಆಗಬೇಕಾಗಿದೆ ಎಂದವರು ಹೇಳಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಸುಳ್ಯ ಘಟನದ ನೂತನ ಅಧ್ಯಕ್ಷ ಡಾ.ಹರಪ್ರಸಾದ್ ತುದಿಯಡ್ಕ ಮತ್ತು ಅವರ ಬಳಗಕ್ಕೆ ಪದಗ್ರಹಣ ನೆರವೇರಿಸಿದರು. ಸಾಹಿತ್ಯ ಪರಿಷತ್ತಿನ ಪೂರ್ವಾಧ್ಯಕ್ಷರುಗಳನ್ನು ಹಾಗೂ ಸಮ್ಮೇಳನಾಧ್ಯಕ್ಷರುಗಳನ್ನು ಸಮಾರಂಭದಲ್ಲಿ ಗೌರವಿಸಲಾಯಿತು.

ಪ್ರದೀಪ್ ಕುಮಾರ್ ಕಲ್ಕೂರ ಮಾತನಾಡಿ, ಭಾಷೆಯ ಶಿಥಿಲತೆಗೆ ಶೈಕ್ಷಣಿಕ ನೀತಿಯೇ ಕಾರಣ. ಶಿಕ್ಷಣ ನೀತಿಯ ಕುರಿತು ಸಾಹಿತ್ಯ ಪರಿಷತ್ ವತಿಯಿಂದ ಜಿಲ್ಲೆಯ ಶಿಕ್ಷಣ ಸಂಸ್ಥೆಗಳ ಸಭೆ ಕರೆದು ಅಭಿಪ್ರಾಯ ಸಂಗ್ರಹ ಮಾಡಲು ನಿರ್ಧರಿಸಲಾಗಿದೆ. ಮನೆಮನೆಗಳಲ್ಲಿ ಸಾಹಿತ್ಯ ಸಮ್ಮೇಳನಗಳು ಆದಾಗ ಕನ್ನಡದ ಬಗ್ಗೆ ಕೀಳರಿಮೆ ದೂರವಾಗುತ್ತದೆ. ಕನ್ನಡವಿಲ್ಲದಲ್ಲಿ ಕನ್ನಡದ ಕಂಪನ್ನು ಹರಡುವ ಕೆಲಸ ಆಗಬೇಕು. ವ್ಯಸನಮುಕ್ತ, ಜಾಗೃತ ಸಮಾಜ ನಿರ್ಮಾಣ ಪರಿಷತ್ತಿನ ಗುರಿ ಎಂದರು.

ಸಾಹಿತ್ಯ ಪರಿಷತ್ ಪೂರ್ವಾಧ್ಯಕ್ಷರಾದ ಎಂ.ಮೀನಾಕ್ಷಿ ಗೌಡ, ಜಾಕೆ ಮಾಧವ ಗೌಡ, ಎ.ಕೆ.ಹಿಮಕರ ಮಾತನಾಡಿದರು. ನೂತನ ಗೌರವ ಕಾರ್ಯದರ್ಶಿಗಳಾದ ಚಂದ್ರಶೇಖರ ಪೇರಾಲು, ತೇಜಸ್ವಿ ಕಡೆಪಾಲ, ಕೋಶಾಧಿಕಾರಿ ದಯಾನಂದ ಆಳ್ವ, ಮಹಾಲಕ್ಷ್ಮಿ ಕೊರಂಬಡ್ಕ ವೇದಿಕೆಯಲ್ಲಿದ್ದರು.

ಎಂ.ಮೀನಾಕ್ಷಿ ಗೌಡ ಸ್ವಾಗತಿಸಿ, ತೇಜಸ್ವಿ ಕಡೆಪಾಲ ವಂದಿಸಿದರು. ಮಮತಾ ಮೂಡಿತ್ತಾಯ, ವಸಂತ ಏನೆಕಲ್ಲು ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News