ಮಲವಂತಿಗೆ: 7 ಕುಟುಂಬಗಳ ಸಂಕಷ್ಟಮಯ ಬದುಕು

Update: 2016-07-08 18:26 GMT
  • ಜಮೀನಿನ ಹಕ್ಕುಪತ್ರವಿಲ್ಲ ವಿದ್ಯುತ್-ದೂರವಾಣಿ ಸಂಪರ್ಕ ಕನಸಿನ ಮಾತು
  • ಮಳೆಗಾಲದಲ್ಲಿ ಇವರ ಬದುಕು ಅಯೋಮಯ

ಬೆಳ್ತಂಗಡಿ, ಜು.8: ತಾಲೂಕಿನ ಮಲವಂತಿಗೆ ಗ್ರಾಪಂ ವ್ಯಾಪ್ತಿಯ ರಾಷ್ಟ್ರೀಯ ಉದ್ಯಾನವನದೊಳಗೆ ವಾಸಿಸುವ ತಿಮ್ಮಯಕಂಡ, ಅಡ್ಡ್ಯೆತ್ತೋಡಿ, ಅರಸಿನಮಕ್ಕಿ ಪ್ರದೇಶದ ಏಳು ಕುಟುಂಬಗಳು ಮಳೆಗಾಲದಲ್ಲಿ ಕನಿಷ್ಠ ಒಂದು ಬೆಂಕಿಕಡ್ಡಿಗಾಗಿ ಸುಮಾರು ಐದು ಕಿ.ಮೀ. ದೂರದ ದಿಡುಪೆಗೆ ಕಾಡದಾರಿಯಲ್ಲಿ ಕಾಡುಪ್ರಾಣಿಗಳ ಭಯದ ನಡುವೆ ನಡೆದುಕೊಂಡ ಬರಬೇಕಾಗಿದೆ. ಇಲ್ಲಿನ ನಿವಾಸಿಗಳಿಗೆ ಜಮೀನಿನ ಹಕ್ಕುಪತ್ರವೂ ಇಲ್ಲವಾಗಿದ್ದು, ಅತ್ತ ಅರಣ್ಯದಿಂದ ಹೊರಬರಲೂ ಆಗದೆ ಇತ್ತ ಅರಣ್ಯದಲ್ಲೂ ಬದುಕಲಾರದೆ ಸಂಕಷ್ಟದ ಸ್ಥಿತಿಯಲ್ಲಿದ್ದಾರೆ. ಒಂದು ಕಾಲದಲ್ಲಿ ದಿಡುಪೆ ಕುಗ್ರಾಮವಾಗಿ ಗುರುತಿಸಿಕೊಂಡ ಊರು. ಈಗ ಈ ಊರು ಅಭಿವೃದ್ಧಿಯ ಕಡೆಗೆ ಸಾಗುತ್ತಿದೆ. ಆದರೆ ದಿಡುಪೆಯಿಂದ ಐದು ಕಿ.ಮೀ. ದೂರ ಕಾಡಿನಲ್ಲಿ ವಾಸಿಸುವ ಈ ಏಳು ಕುಟುಂಬಗಳಿಗೆ ಮಾತ್ರ ಅಭಿವೃದ್ಧಿ ಇನ್ನೂ ಮರಿಚಿಕೆಯಾಗಿದೆ. ಕುದುರೆಮುಖ ರಾಷ್ಟ್ರೀಯ ಉದ್ಯಾನವನದೊಳಗಿನ ಕಾಡಿನಲ್ಲಿ ತಮ್ಮ ಅಜ್ಜ, ಅಪ್ಪಜೀವನ ನಡೆಸಿದ ಜಾಗದಲ್ಲಿ ಇಂದಿಗೂ ಈ ಕುಟುಂಬಗಳು ಕೃಷಿಯನ್ನು ನಡೆಸುತ್ತಾ ಬದುಕುತ್ತಿದ್ದಾರೆ. ಇವರ ಮನೆಗಳಿಗೆ ಇನ್ನೂ ವಿದ್ಯುತ್ ಸಂಪರ್ಕ ದೊರೆತಿಲ್ಲ. ದೂರವಾಣಿಯಂತಹ ವಿಚಾರಗಳು ಇವರ ಪಾಲಿಗೆ ಕೇವಲ ಕನಸು ಮಾತ್ರ. ಬೇಸಿಗೆಯಲ್ಲಿ ನಡೆದುಕೊಂಡು ಹೋಗಲು ಕಚ್ಚಾರಸ್ತೆ ಇದೆ. ತುರ್ತು ಸಂದರ್ಭಗಳಲ್ಲಿ ಕೆಲವು ಜೀಪುಗಳೂ ಬರುತ್ತದೆ. ಆದರೆ ಮಳೆಗಾಲದಲ್ಲಿ ಮಾತ್ರ ಇವರ ಸ್ಥಿತಿ ಹೇಳತೀರದು. ಐದು ಕಿ.ಮೀ. ದೂರ ಕಾಡಿನಲ್ಲಿ ಹತ್ತಿ, ಇಳಿದು ಸಾಗಬೇಕು. ಅಲ್ಲದೆ ಜೋರಾಗಿ ಮಳೆ ಬಂದರೆ ಹರಿಯುವ ತೊರೆಯನ್ನು ದಾಟಲು ನೀರಿಳಿಯುವವರೆಗೆ ಕಾಯಬೇಕು. ಇದರ ನಡುವೆ ಕಾಡುಪ್ರಾಣಿಗಳ ಭಯ ಬೇರೆ. ಕೆಲವೊಮ್ಮೆ ಕಾಡಾನೆಯ ಕಾಟವೂ ಇವರು ಸಾಗುವ ದಾರಿಯಲ್ಲಿ ಎದುರಾಗುವುದು ಇದೆ. ಇವೆಲ್ಲದರ ನಡುವೆ ಕಾಡಿನಲ್ಲಿ ಅನೇಕ ಸಮಸ್ಯೆಗಳ ನಡುವೆಯೇ ಬದುಕನ್ನು ತಲಾತಲಾಂತರಗಳಿಂದ ಕಟ್ಟಿಕೊಂಡು ಜೀವನ ನಡೆಸುತ್ತಿದ್ದಾರೆ. *ಹಕ್ಕುಪತ್ರ ಇಲ್ಲ: ಇಲ್ಲಿ ವಾಸಿಸುತ್ತಿರುವ ಏಳು ಕುಟುಂಬಗಳಲ್ಲಿ ಐದು ಕುಟುಂಬಗಳಿಗೆ ಹಕ್ಕುಪತ್ರವೇ ಇಲ್ಲವಾಗಿದೆ. ತಿಮ್ಮಯಕಂಡದ ನಿವಾಸಿಗಳಾದ ಲಕ್ಷ್ಮಣ ಗೌಡ, ಸಂಜೀವ ಗೌಡ, ಕೃಷ್ಣಪ್ಪಗೌಡ ಹಾಗೂ ನಾಗಮ್ಮ ಇವರಿಗೆ ತಲಾ 2.50 ಎಕ್ರೆ ಜಾಗವಿದೆ. ಇಲ್ಲಿ ಕೃಷಿ, ಗದ್ದೆ ಬೇಸಾಯ ಮಾಡುತ್ತಿದ್ದಾರೆ. ಆದರೆ ಈ ಜಾಗದ ಹಕ್ಕುಪತ್ರ ಇಂದಿಗೂ ಸಿಕ್ಕಿಲ್ಲ. ಹಕ್ಕು ಪತ್ರ ನೀಡಲು ಕಂದಾಯ ಅರಣ್ಯ ಇಲಾಖೆ ಅಡ್ಡಿಪಡಿಸುತ್ತಿದೆ. ಅರಸಿನಮಕ್ಕಿಯ ನಿವಾಸಿ ಪಿ.ಟಿ.ಜೋಸೆಫ್‌ರ ಜಾಗವೇ ರಾಷ್ಟ್ರೀಯ ಉದ್ಯಾನದೊಳಗೆ ಇದೆ. ಕೆಲವೊಮ್ಮೆ ಕಾಡಾನೆ ಕೂಡ ಇವರ ಮನೆಯ ಬಾಗಿಲು ತಟ್ಟಿದ ದಿನವೂ ಇದೆ. ಇವರಿಗೂ ಹಕ್ಕುಪತ್ರವಿಲ್ಲ. ಅಡ್ಡ್ಯೆತ್ತೋಡಿಯಲ್ಲಿ ಧರ್ಮಣ ಮಲೆಕುಡಿಯ ಹಾಗೂ ಚೋಂಕ್ರ ಮಲೆಕುಡಿಯರ ಕುಟುಂಬ ವಾಸವಾಗಿದೆ. ಇವರಿಗೆ ಮಾತ್ರ ಹಕ್ಕುಪತ್ರ ಸಿಕ್ಕಿದೆ. ಇರುವ ಜಾಗದಲ್ಲಿ ಕೃಷಿ ಮಾಡಿದರೂ ಕಾಡುಪ್ರಾಣಿಗಳ ಉಪಟಳದಿಂದ ಕೈಗೆ ಬೆಳೆದ ಬೆಳೆ ಸಿಗುತ್ತಿಲ್ಲ. ಶಾಸಕರು, ಸಂಸದರು, ಜಿಲ್ಲಾಧಿಕಾರಿಗಳು ಖುದ್ದು ಈ ಪ್ರದೇಶಗಳಿಗೆ ಭೇಟಿ ನೀಡಿದ್ದಾರೆ. ಎಲ್ಲ ರೀತಿಯ ಭರವಸೆ ನೀಡಿದ್ದಾರೆ. ಆದರೆ ಅವರು ಹೋದ ಹಾಗೆ ಭರವಸೆಗಳು ಮಾತ್ರ ಇನ್ನೂ ಈಡೇರಿಲ್ಲ.ನಡುವೆ ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗದವರು ಮೂಲನಿವಾಸಿಗಳಲ್ಲದ ಇಲ್ಲಿನ ಐದು ಕುಟುಂಬಗಳಿಗೆ ನೋಟಿಸು ನೀಡಿ ಅರಣ್ಯವನ್ನು ಅಕ್ರಮ ಮಾಡಿದ್ದ ಬಗ್ಗೆ ಇವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿದ್ದಾರೆ. ತಾವು ನಮ್ಮ ತಾತನ ಕಾಲದಿಂದಲೂ ಇಲ್ಲಿ ಕೃಷಿ ಮಾಡುತ್ತಿದ್ದೇವೆ. ತಮಗೆ ಹಕ್ಕುಪತ್ರ ನೀಡಿ ಎಂದು ಸಂಬಂಧಪಟ್ಟ ಎಲ್ಲರಿಗೂ ಮನವಿ ನೀಡಿ ಆಗಿದೆ. ಆದರೆ ಯಾವುದೇ ಪ್ರಯೋಜನವಿಲ್ಲ ಎಂದು ಆರೋಪಿಸಿದ್ದಾರೆ.ುದುರೆಮುಖ ರಾಷ್ಟ್ರೀಯ ಉದ್ಯಾನವನದಿಂದ ಹೊರ ಹೋಗುವವರಿಗೆ ಪರಿಹಾರ ನೀಡಲಾಗುತ್ತಿದೆ. ಆದರೆ ಈ ಕುಟುಂಬಗಳಿಗೆ ಹಕ್ಕುಪತ್ರ ಇಲ್ಲದಿರುವುದರಿಂದ ಯಾವುದೇ ಪರಿಹಾರ ಸಿಗುವ ಭರವಸೆಯೂ ಇಲ್ಲವಾಗಿದೆ. ಈ ಬಗ್ಗೆ ಹಿಂದೆ ಜಿಲ್ಲಾಧಿಕಾರಿ ಇಲ್ಲಿಗೆ ಭೇಟಿ ನೀಡಿದ್ದಾಗ ಇವರ ಸಮಸ್ಯೆಗಳಿಗೆ ಪರಿಹಾರ ನೀಡುವ ಭರವಸೆ ನೀಡಿದ್ದರೂ ಇನ್ನೂ ಪರಿಹಾರ ದೊರೆತಿಲ್ಲ. ಅಡ್ಡ್ಯೆತ್ತೋಡಿ ನಿವಾಸಿ ಧರ್ಮಣ ಮಲೆಕುಡಿಯರ ಮನೆಯಲ್ಲಿ 9 ಮಂದಿ ಇದ್ದಾರೆ. ಈ ಪೈಕಿ ಓರ್ವ ಪುತ್ರ ಟೊಕ್ಕಯ್ಯ ಅಂಗವಿಕಲನಾಗಿದ್ದು, ನಡೆದಾಡುವ ಸ್ಥಿತಿಯಲ್ಲಿಲ್ಲ. ಅನಾರೋಗ್ಯ ಉಂಟಾದರೆ ರಸ್ತೆಯ ಸಮಸ್ಯೆಯಿಂದಾಗಿ ಐದು ಕಿ.ಮೀ. ದೂರ ಕಾಡುದಾರಿಯಲ್ಲಿ ಈತನನ್ನು ಹೊತ್ತು ಸಾಗಬೇಕು. ಕಾಡುದಾರಿಯಲ್ಲಿ ಇಬ್ಬರು ನಡೆದಾಡಿಕೊಂಡು ಹೋಗುವುದೇ ಸಮಸ್ಯೆ. ಅಂತಹದರಲ್ಲಿ ಅಂಗವಿಕಲನನ್ನು ಹೊತ್ತುಕೊಂಡು ಹೋಗುವುದು ಸಾಹಸವೇ ಸರಿ. ಶಾಲಾ ಕಾಲೇಜುಗಳಿಗೆ ಹೋಗುವ ಮಕ್ಕಳೂ ಕಾಲ್ನಡಿಗೆಯಲ್ಲಿಯೇ ಹೋಗಬೇಕಾದ ಅನಿವಾರ್ಯತೆಯಿದೆ. ಮಳೆ ಜೋರಾಗಿದ್ದರೆ ಮಕ್ಕಳನ್ನು ಕರೆತರಲು ಮನೆಯವರು ಅರಣ್ಯದ ಹೊರಗಿನವರೆಗೂ ಬಂದು ಕಾಯಬೇಕಾಗುತ್ತದೆ. ಜೋರು ಮಳೆ ಬಂದರೆ ತೊರೆ ದಾಟಲೂ ಸಾಧ್ಯವಾಗದೇ ರಾತ್ರಿಯವರೆಗೆ ದಾರಿ ಮಧ್ಯೆ ಬಾಕಿಯಾಗಿರುವ ದಿನಗಳೂ ಇದೆ. ಂದೆಡೆ ರಸ್ತೆಯ ಸಮಸ್ಯೆಯಾದರೆ ಮತ್ತೊಂದೆಡೆ ಇವರಿಗೆ ಇನ್ನೂ ವಿದ್ಯುತ್ ಸಂಪರ್ಕ ದೊರೆತಿಲ್ಲ. ರಾಷ್ಟ್ರೀಯ ಉದ್ಯಾನವನದ ಒಳಗೆ ವಿದ್ಯುತ್ ಲೈನ್ ಎಳೆಯಲು ಅವಕಾಶವಿಲ್ಲವಾಗಿದ್ದು, ಇವರು ವಿದ್ಯುತ್ ಸಂಪರ್ಕದಿಂದ ಶಾಶ್ವತವಾಗಿ ವಂಚಿತರಾಗುತ್ತಿದ್ದಾರೆ. ಕ್ರಿಕೆಟಿಗ ಸಚಿನ್ ತೆಂಡೂಲ್ಕರ್‌ರ ಟ್ರಸ್ಟ್ ನೀಡಿದ ಸೋಲಾರ್ ಹಾಗೂ ಕನ್ಯಾಡಿಯ ಸೇವಾಭಾರತಿಯವರು ನೀಡಿದ ಸೋಲಾರ್ ಬೆಳಕು ಇವರ ಮನೆಗಳ ಕತ್ತಲನ್ನು ಬೆಳಗಿಸುತ್ತಿದೆ.

*ರಸ್ತೆಯದ್ದೇ ಸಮಸ್ಯೆ: ಕಾಡಿನಲ್ಲಿದ್ದರೂ ಇವರ ಎಲ್ಲ ಸಮಸ್ಯೆಗಳಿಗೆ ರಸ್ತೆ ನಿರ್ಮಾಣಗೊಂಡರೆ ಪರಿಹಾರವಾಗುತ್ತದೆ. ದಿಡುಪೆ-ಸಂಸೆ ರಸ್ತೆಯನ್ನು ಅಭಿವೃದ್ಧಿಪಡಿಸಲು ಸರಕಾರ ಒಪ್ಪಿಗೆ ಕೊಟ್ಟರೆ ಮೊದಲು ಉಪಕಾರ ಇವರಿಗೆ. ರಾಷ್ಟ್ರೀಯ ಉದ್ಯಾನದೊಳಗೆ ಹಾದುಹೋಗುವ 9 ಕಿ.ಮೀ. ಉದ್ದದ ಈ ರಸ್ತೆಯನ್ನು ಅಭಿವೃದ್ಧಿಪಡಿಸಲು ಅರಣ್ಯ ಇಲಾಖೆ ಅನುಮತಿ ನೀಡುತ್ತಿಲ್ಲ. ಹಿಂದೊಮ್ಮೆ ಸಾರ್ವಜನಿಕರು ಸೇರಿ ಈ ರಸ್ತೆಯನ್ನು ದುರಸ್ತಿ ಮಾಡಿದ್ದರು. ಆದರೆ ಈಗ ಅದೆಲ್ಲವೂ ಹೋಗಿದೆ.ಬೇಸಿಗೆಯಲ್ಲಿ ಈ ರಸ್ತೆಯನ್ನು ಊರವರೇ ಸೇರಿ ಸಂಚಾರಕ್ಕೆ ವ್ಯವಸ್ಥೆ ಮಾಡಿಕೊಂಡರೂ, ಮಳೆ ಬಂದರೆ ರಸ್ತೆ ಸಂಪೂರ್ಣ ಬಂದ್ ಆಗುತ್ತದೆ. ಒಂದೋ ಇಲ್ಲಿಯೇ ಮೂಲಭೂತ ಸೌಲಭ್ಯಗಳನ್ನು ಒದಗಿಸಿ, ಇಲ್ಲವಾದಲ್ಲಿ ಸೂಕ್ತವಾದ ಪರಿಹಾರವನ್ನು ನೀಡಿ ಅರಣ್ಯದಿಂದ ಹೊರಗೆ ಹೋಗಲು ಅವಕಾಶ ನೀಡಿ ಎನ್ನುವುದು ಇಲ್ಲಿನ ನಿವಾಸಿಗಳ ಬೇಡಿಕೆಯಾಗಿದೆ.

Writer - ಶಿಬಿ ಧರ್ಮಸ್ಥಳ

contributor

Editor - ಶಿಬಿ ಧರ್ಮಸ್ಥಳ

contributor

Similar News