ಕೆ.ಜೆ.ಜಾರ್ಜ್ ರಾಜೀನಾಮೆಗೆ ಬಿಜೆಪಿ ಒತ್ತಾಯ

Update: 2016-07-09 12:15 GMT

ಮಂಗಳೂರು, ಜು.9: ಡಿವೈಎಸ್‌ಪಿ ಎಂ.ಕೆ. ಗಣಪತಿ ಅವರ ಆತ್ಮಹತ್ಯೆಯ ಹಿನ್ನೆಲೆಯಲ್ಲಿ ಸಚಿವ ಕೆ.ಜೆ. ಜಾರ್ಜ್ ಶೀಘ್ರವೇ ರಾಜೀನಾಮೆ ನೀಡಬೇಕು ಹಾಗೂ ಗಣಪತಿಯವರು ಆತ್ಮಹತ್ಯೆಗೆ ಮೊದಲು ಹೆಸರಿಸಿರುವ ಹಿರಿಯ ಪೊಲೀಸ್ ಅಧಿಕಾರಿಗಳನ್ನು ವಜಾಗೊಳಿಸಬೇಕು ಎಂದು ಆಗ್ರಹಿಸಿ ಮಂಗಳೂರು ಬಿಜೆಪಿ ದಕ್ಷಿಣ ವಲಯದ ವತಿಯಿಂದ ಪ್ರತಿಭಟನೆ ನಡೆಯಿತು.

ಜಿಲ್ಲಾಧಿಕಾರಿ ಕಚೇರಿ ಎದುರು ನಡೆದ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಆತ್ಮಹತ್ಯೆ ಪ್ರಕರಣಗಳಲ್ಲಿ ಡೆತ್‌ನೋಟ್‌ನಲ್ಲಿ ಹೆಸರಿಸಲಾಗಿದ್ದ ವ್ಯಕ್ತಿಗಳ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ. ಆದರೂ ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ 2 ದಿನಗಳಾದರೂ ಸಾವಿಗೆ ಮೊದಲೇ ಅವರು ಹೆಸರಿಸಿರುವವರ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳಲಾಗಿಲ್ಲ ಎಂದು ಹೇಳಿದರು.

ಅವರ ಆತ್ಮಹತ್ಯೆಗೆ ಕಾರಣರಾದವರು ಎಷ್ಟೇ ದೊಡ್ಡ ಹುದ್ದೆಯಲ್ಲಿದ್ದರೂ ಅವರನ್ನು ಬಂಧಿಸಿ ತನಿಖೆಗೆ ಒಳಪಡಿಸಬೇಕು. ಜಾರ್ಜ್ ಅವರು ಕೂಡಲೇ ತಮ್ಮ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಬೇಕು. ಹಿರಿಯ ಪೊಲೀಸ್ ಅಧಿಕಾರಿಗಳಾದ ಪ್ರಣಬ್ ಮೊಹಂತಿ ಹಾಗೂ ಎ.ಎಂ. ಪ್ರಸಾದ್ ಅವರನ್ನು ಕೆಲಸದಿಂದ ವಜಾಗೊಳಿಸಬೇಕೆಂದು ಅವರು ಒತ್ತಾಯಿಸಿದರು.

ಮಾಜಿ ಶಾಸಕ ಯೋಗೀಶ್ ಭಟ್ ಮಾತನಾಡಿ, ರಾಜ್ಯದಲ್ಲಿ 800ಕ್ಕೂ ಅಧಿಕ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾಮಾಜಿಕ ಶಾಂತಿ ಕಾಪಾಡಿ, ಸಮಾಜಕ್ಕೆ ದ್ರತೆ ನೀಡುವ ಅಧಿಕಾರಿಗಳೇ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಉಳ್ಳಾಲದಂತಹ ಸೂಕ್ಷ್ಮ ಪ್ರದೇಶದಲ್ಲಿ ಉತ್ತಮ ಕೆಲಸ ಮಾಡಿ, ಶಾಂತಿ ಸುವ್ಯವಸ್ಥೆಯನ್ನು ಕಾಪಾಡಿಕೊಂಡಿದ್ದ ಗಣಪತಿಯವರಂತಹ ಡಿವೈಎಸ್ಪಿ ಇಂದು ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಡೆತ್‌ನೋಟ್‌ನಲ್ಲಿ ಆತ್ಮಹತ್ಯೆಗೆ ಕಾರಣ ಏನು ಎಂಬುವುದನ್ನು ಬರೆಯಲಾಗಿದ್ದರೂ ಅವರ ಮೇಲೆ ಯಾವುದೇ ಕ್ರಮ ಕೈಗೊಳ್ಳದೇ ಪ್ರಕರಣವನ್ನು ಮುಚ್ಚಿ ಹಾಕುವ ಪ್ರಯತ್ನ ಮಾಡಲಾಗುತ್ತಿದೆ. ಈ ಬಗ್ಗೆ ಸರಿಯಾದ ತನಿಖೆಯಾಗಬೇಕೆಂದು ಆಗ್ರಹಿಸಿದರು.

ಪಾಲಿಕೆ ವಿರೋಧ ಪಕ್ಷದ ನಾಯಕಿ ರೂಪಾ ಡಿ.ಬಂಗೇರ, ಸುಧೀರ್ ಶೆಟ್ಟಿ ಕಣ್ಣೂರು, ರವಿಶಂಕರ್ ಮಿಜಾರು, ರಾಜಗೋಪಾಲ ರೈ, ರಾಜೇಂದ್ರ, ರಹೀಂ ಉಚ್ಚಿಲ್ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News