ಬಂಟ್ವಾಳ: ಡಿವೈಎಸ್ಪಿ ಆತ್ಮಹತ್ಯೆ ಪ್ರಕರಣವನ್ನು ಸಿಬಿಐಗೆ ವಹಿಸಲು ಒತ್ತಾಯಿಸಿ ಬಿಜೆಪಿಯಿಂದ ಧರಣಿ

Update: 2016-07-09 14:01 GMT

ಬಂಟ್ವಾಳ, ಜು. 9: ಡಿವೈಎಸ್ಪಿ ಎಂ.ಕೆ.ಗಣಪತಿ ಆತ್ಮಹತ್ಯೆ ಪ್ರಕರಣವನ್ನು ಸಿಬಿಐಗೆ ತನಿಖೆಗೆ ಒಪ್ಪಿಸುವಂತೆ ಹಾಗೂ ಪ್ರಕರಣದಲ್ಲಿ ಹೆಸರಿಸಲಾದ ಸಚಿವ, ಅಧಿಕಾರಿಗಳನ್ನು ತಕ್ಷಣ ಬಂಧಿಸುವಂತೆ ಒತ್ತಾಯಿಸಿ ಬಿಜೆಪಿ ಬಂಟ್ವಾಳ ವಿಧಾನಸಬಾ ಕ್ಷೇತ್ರದ ವತಿಯಿಂದ ಶನಿವಾರ ಬೆಳಗ್ಗೆ ಬಿ.ಸಿ.ರೋಡ್ ಪ್ಲೈಓವರ್ ಕೆಳಗೆ ಧರಣಿ ನಡೆಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಶಾಸಕ ಎ.ರುಕ್ಮಯ ಪೂಜಾರಿ, ರಾಜ್ಯದಲ್ಲಿ ದಿನದಿಂದ ದಿನಕ್ಕೆ ದಕ್ಷ ಅಧಿಕಾರಿಗಳನ್ನು ಬೇರೆ ಬೇರೆ ರೂಪದಲ್ಲಿ ಕಳೆದುಕೊಳ್ಳುತ್ತಿದ್ದೇವೆ. ಆದರೂ ಸರಕಾರ ಎಚ್ಚೆತ್ತುಕೊಂಡಿಲ್ಲ. ಸರಕಾರದ ಸಚಿವ ಸ್ಥಾನದಲ್ಲಿರುವ ಮತ್ತು ಅಧಿಕಾರಿಗಳ ಹೆಸರುಗಳನ್ನು ಉನ್ನತ ಮಟ್ಟದ ಅಧಿಕಾರಿಗಳು ಉಲ್ಲೇಖಿಸಿ ಆತ್ಮಹತ್ಯೆ ಮತ್ತು ಅಸಹಜ ಸಾವುಗಳು ನಡೆದರೂ ಪ್ರಕರಣದ ಗಂಭೀರತೆಯನ್ನು ಅರಿತುಕೊಂಡಿಲ್ಲ. ಒಟ್ಟಿನಲ್ಲಿ ಸರಕಾರ ನಿದ್ದೆಯಿಂದ ಹೊರಬಂದಿಲ್ಲ. ಕಾನೂನು ಸುವ್ಯವಸ್ಥೆಯಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಟೀಕಿಸಿದರು.

ಪ್ರತಿಭಟನೆಯಲ್ಲಿ ಕ್ಷೇತ್ರ ಸಮಿತಿ ಅಧ್ಯಕ್ಷ ದೇವದಾಸ ಶೆಟ್ಟಿ, ಪಕ್ಷದ ಪ್ರಮುಖರಾದ ಪದ್ಮನಾಭ ಕೊಟ್ಟಾರಿ, ರಾಜೇಶ್ ನಾಯಕ್ ಉಳಿಪ್ಪಾಡಿ ಗುತ್ತು, ತುಂಗಪ್ಪ ಬಂಗೇರ, ಕಮಲಾಕ್ಷಿ ಕೆ.ಪೂಜಾರಿ, ಜಿ. ಆನಂದ, ರಾಮ್‌ದಾಸ ಬಂಟ್ವಾಳ, ದಿನೇಶ್ ಅಮ್ಟೂರು, ಆನಂದ ಶಂಭೂರು, ಚೆನ್ನಪ್ಪ ಕೋಟ್ಯಾನ್, ಗೋವಿಂದ ಪ್ರಭು, ದಿನೇಶ್ ಭಂಡಾರಿ ಮತ್ತಿತರರು ಉಪಸ್ಥಿತರಿದ್ದರು.

ಬಳಿಕ ತಹಶೀಲ್ದಾರ್ ಪುರಂದರ ಹೆಗ್ಡೆಗೆ ಮನವಿ ನೀಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News