ರಾಜ್ಯ ಸರಕಾರ ಅಧಿಕಾರಿ ಸಮೂಹವನ್ನು ಭಯಗ್ರಸ್ಥರನ್ನಾಗಿಸಿದೆ: ಸಂಸದ ನಳಿನ್

Update: 2016-07-09 14:40 GMT

ಪುತ್ತೂರು, ಜು.9: ರಾಜ್ಯದಲ್ಲಿರುವ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರವು ಸಮಾಜವನ್ನೇ ರಕ್ಷಣೆ ಮಾಡುವ ಪೊಲೀಸ್ ಇಲಾಖೆಯನ್ನೇ ಬಂಧನದಲ್ಲಿಡುವ ಕಾರ್ಯವೈಖರಿ ಮೂಲಕ ರಾವಣ ಸರಕಾರವಾಗಿ ಪರಿಣಮಿಸಿದ್ದು, ಅಧಿಕಾರಿ ಸಮೂಹವನ್ನು ಭಯಗ್ರಸ್ಥರನ್ನಾಗಿಸಿದೆ. ಅಧಿಕಾರಿಗಳನ್ನು ಆತ್ಮಹತ್ಯೆಗೈಯ್ಯುವಂತೆ ಪ್ರಚೋದನಕಾರಿ ಕೆಲಸ ಮಾಡುವ ಮೂಲಕ ಹೇಸಿಗೆ ರಾಜಕಾರಣ ಮಾಡುತ್ತಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಆರೋಪಿಸಿದರು.

ಅವರು ಶನಿವಾರ ಪುತ್ತೂರಿನ ಮಿನಿ ವಿಧಾನಸೌಧದ ಎದುರು ನಗರ ಹಾಗೂ ಗ್ರಾಮಾಂತರ ಬಿಜೆಪಿ ವತಿಯಿಂದ ಡಿವೈಎಸ್ಪಿ ಎಂ.ಕೆ. ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ ಕಾರಣವಾದ ರಾಜ್ಯಸರಕಾರದ ವಿರುದ್ಧ ನಡೆದ ಬೃಹತ್ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದರು.

ಸಿದ್ಧರಾಮಂ್ಯು ಸರಕಾರ ಅಧಿಕಾರಕ್ಕೆ ಬಂದ ಬಳಿಕ ಅನ್ನದಾತ ರೈತರ ಆತ್ಮಹತ್ಯೆಗಳು ಹೆಚ್ಚಾಗಿದೆ. ಇದೀಗ ಪೊಲೀಸ್ ಇಲಾಖೆಯ ಅಧಿಕಾರಿಗಳಿಗೆ ರಕ್ಷಣೆ ಇಲ್ಲದ ಸ್ಥಿತಿ ನಿರ್ಮಾಣಗೊಂಡಿದ್ದು, ಅವರು ಆತ್ಮಹತ್ಯೆಗೆ ಶರಣಾಗುವ ಪರಿಸ್ಥಿತಿ ಬಂದಿದೆ. ಅಧಿಕಾರಿಗಳಲ್ಲಿ, ಜನಸಾಮಾನ್ಯರಲ್ಲಿ ಪ್ರೀತಿ ವಿಶ್ವಾಸವಿಟ್ಟು ಅಧಿಕಾರ ಮಾಡಬೇಕಾದ ಸಿದ್ದರಾಮಯ್ಯ ಸರಕಾರ ಮೂರು ವರ್ಷಗಳಲ್ಲಿ ಅಧಿಕಾರಿ ವರ್ಗದಲ್ಲಿ ತ್ರಿಶಂಕು ಸ್ಥಿತಿಯನ್ನು ನಿರ್ಮಿಸಿದೆ. ಸಮಾಜದ ರಕ್ಷಣೆ ಹೊತ್ತ ಪೊಲೀಸ್ ಇಲಾಖಾ ಅಧಿಕಾರಿಗಳ ಸಮಸ್ಯೆಗಳನ್ನು ಆಲಿಸದೆ ಸರಕಾರ ಕೀಳುಮಟ್ಟದ ರಾಜಕಾರಣ ಮಾಡುತ್ತಿರುವ ಸಿದ್ದರಾಮಯ್ಯರಿಗೆ ನೈಜ ಪ್ರಾಮಾಣಿಕತೆ, ಪಾರದರ್ಶಕತೆ ಇದ್ದಲ್ಲಿ ತಕ್ಷಣ ರಾಜೀನಾಮೆ ನೀಡಬೇಕು. ಗಣಪತಿ ಆತ್ಮಹತ್ಯೆ ಪ್ರಕರಣವನ್ನು ಸಮಗ್ರವಾಗಿ ತನಿಖೆ ನಡೆಸುವ ಮೂಲಕ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡಬೇಕು. ಇಲ್ಲದಿದ್ದಲ್ಲಿ ದ.ಕ.ಜಿಲ್ಲೆಯ ಮುಖಾಂತರ ಉಗ್ರ ಹೋರಾಟ ಮೂಲಕ ಆತ್ಮಹತ್ಯೆ ಮಾಡಿಕೊಂಡ ಮನೆಯವರಿಗೆ ನ್ಯಾಯ ಒದಗಿಸುವ ಕೆಲಸ ಮುಂದಿನ ದಿನಗಳಲ್ಲಿ ಮಾಡಲಾಗುವುದು ಎಂದು ಎಚ್ಚರಿಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು ಮಾತನಾಡಿ, ಕರ್ನಾಟಕದಲ್ಲಿ ಪ್ರಸ್ತುತ ಹತ್ಯಾ ಸರಕಾರ ಅಧಿಕಾರದಲ್ಲಿದ್ದು, ಸಿದ್ದರಾಮಯ್ಯ ಹತ್ಯಾಭಾಗ್ಯವನ್ನು ಜನರಿಗೆ ನೀಡುತ್ತಿದ್ದಾರೆ. ದಕ್ಷ ಅಧಿಕಾರಿಗಳು ಕರ್ತವ್ಯ ನಿರ್ವಹಿಸಲು ಸಾಧ್ಯವಾಗದಂತಹ ಪರಿಸ್ಥಿತಿಯನ್ನು ನಿರ್ಮಾಣ ಮಾಡಿದ್ದಾರೆ. ಸಿದ್ದರಾಮಯ್ಯ ಪುಡಾರಿಗಳಿಗೆ ಸವಲತ್ತು ನೀಡುವ ಮೂಲಕ ಅಧಿಕಾರದ ದುರ್ಬಳಕೆ ಮಾಡುತ್ತಿದ್ದು, ದರಿದ್ರ ಸಿದ್ದರಾಮಯ್ಯರನ್ನು ಕರ್ನಾಟಕದ ಜನತೆ ಕಾಣುವಂತಾಗಿದೆ ಎಂದರು.

ಪ್ರತಿಭಟನಾ ಸಭೆಯ ಬಳಿಕ ಡಿವೈಎಸ್ಪಿ ಗಣಪತಿ ಅವರ ಸಾವಿಗೆ ಕಾರಣರಾದ ಮಾಜಿ ಗೃಹಮಂತ್ರಿ ಕೆ.ಜೆ.ಜಾರ್ಜ್ ಅವರನ್ನು ಸಂಪುಟದಿಂದ ವಜಾಗೊಳಿಸಿ ಅವರ ಮೇಲೆ ಕೇಸು ದಾಖಲಿಸಬೇಕು, ಉನ್ನತ ಪೊಲೀಸ್ ಅಧಿಕಾರಿಗಳಾದ ಎಂ.ಎನ್.ಪ್ರಸಾದ್ ಹಾಗೂ ಲೋಕಾಯುಕ್ತ ಐಜಿ ಮೊಹಾಂತಿಯವರನ್ನು ತಕ್ಷಣ ಕರ್ತವ್ಯದಿಂದ ವಜಾಗೊಳಿಸಿ ಅವರ ಮೇಲೂ ಕೇಸು ದಾಖಲಿಸಬೇಕು ಮುಂತಾದ ವಿವರಗಳನ್ನೊಳಗೊಂಡ ಮನವಿಯೊಂದನ್ನು ಸಹಾಯಕ ಕಮೀಷನರ್ ಕಚೇರಿ ಮ್ಯಾನೇಜರ್ ಬಾಬು ನಾಕ್ ಅವರ ಮುಖಾಂತರ ರಾಜ್ಯಪಾಲರಿಗೆ ನೀಡಲಾಯಿತು.

ಸಭೆಯಲ್ಲಿ ಮಾಜಿ ಮಂಡಲ ಬಿಜೆಪಿ ಅಧ್ಯಕ್ಷ ಅಪ್ಪಯ್ಯ ಮಣಿಯಾಣಿ, ನಗರ ಮಂಡಲ ಪ್ರಧಾನ ಕಾರ್ಯದರ್ಶಿ ಗೌರಿ ಬನ್ನೂರು, ರಾಮದಾಸ್, ಅಧ್ಯಕ್ಷ ಜೀವಂಧರ್ ಜೈನ್, ತಾಲೂಕು ಪಂಚಾಯತ್ ಅಧ್ಯಕ್ಷೆ ಭವಾನಿ ಚಿದಾನಂದ, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಸದಸ್ಯೆ ಶಯನಾ ಜಯಾನಂದ, ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ, ತಾಪಂ ಸದಸ್ಯ ಸಾಜ ರಾಧಾಕೃಷ್ಣ ಆಳ್ವ ಮತ್ತಿತರರು ಉಪಸ್ಥಿತರಿದ್ದರು.

ಪುತ್ತೂರು ಗ್ರಾಮಾಂತರ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೇಶವ ಬಜತ್ತೂರು ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಶಂಭು ಭಟ್ ಸ್ವಾಗತಿಸಿದರು. ನಗರಸಭೆಯ ಸದಸ್ಯ ರಾಜೇಶ್ ಬನ್ನೂರು ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News