ಕೊಣಾಜೆ: 'ಕಂಡಡೊಂಜಿ ದಿನ ಬೆನ್ನಿ ಬೆನ್ಕ' ಕಾರ್ಯಕ್ರಮ

Update: 2016-07-09 18:31 GMT

ಕೊಣಾಜೆ, ಜು.9: ಕೊಣಾಜೆ ಗ್ರಾಪಂ, ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ, ಮಂಗಳ ಗ್ರಾಮೀಣ ಯುವಕ ಸಂಘ, ಮಂಗಳೂರು ವಿವಿ ರಾಷ್ಟ್ರೀಯ ಸೇವಾ ಯೋಜನೆ ಹಾಗೂ ಇನ್ನಿತರ ಸಂಘಟನೆಗಳ ಸಹಭಾಗಿತ್ವದಲ್ಲಿ ‘ಕಂಡಡೊಂಜಿ ದಿನ ಬೆನ್ನಿ ಬೆನ್ಕ’ ಹಾಗೂ ಕೆಸರುಗದ್ದೆ ಕ್ರೀಡಾಕೂಟವು ಶನಿವಾರ ಕೊಣಾಜೆಯ ಕಲ್ಲಿಮಾರ್ ಗದ್ದೆಯಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಸಚಿವ ಯು.ಟಿ.ಖಾದರ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಗ್ರಾಮೀಣ ಪ್ರದೇಶದ ಕೃಷಿ ಚಟುವಟಿಕೆ, ಅಲ್ಲಿಯ ಜೀವನ ಶೈಲಿ ಮತ್ತು ರೈತರ ಬದುಕಿನ ಕುರಿತು ಇಂತಹ ಕಾರ್ಯಕ್ರಮಗಳಿಂದ ತಿಳಿದುಕೊಳ್ಳಲು ಸಾಧ್ಯ ಎಂದರು. ಕಾರ್ಯಕ್ರಮದಲ್ಲಿ ಮಂಗಳೂರು ತಾಪಂ ಅಧ್ಯಕ್ಷ ಮುಹಮ್ಮದ್ ಮೋನು, ಮಂಗಳಾ ಗ್ರಾಮೀಣ ಪ್ರತಿಷ್ಠಾನದ ಪ್ರಸಾದ್ ರೈ ಕಲ್ಲಿಮಾರ್, ಕೊಣಾಜೆ ಗ್ರಾಪಂ ಅಧ್ಯಕ್ಷ ಶೌಕತ್ ಅಲಿ, ಉಪಾಧ್ಯಕ್ಷೆ ಲಲಿತಾ ಎಸ್.ರಾವ್, ಮಂಗಳೂರು ವಿವಿ ಎನ್ನೆಸ್ಸೆಸ್ ಯೋಜನಾಧಿಕಾರಿ ಪ್ರೊ.ವಿನಿತಾ ನಾಯಕ್, ಉದ್ಯಮಿ ನಾಸಿರ್ ಕೆ.ಕೆ., ಮಂಗಳೂರು ವಿವಿ ಪ್ರಾಧ್ಯಾಪಕ ಡಾ.ಕಿಶೋರ್ ಕುಮಾರ್ ಸಿ.ಕೆ., ಗ್ರಾಪಂ ಸದಸ್ಯ ಅಚ್ಯುತ ಗಟ್ಟಿ, ಮುತ್ತು ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ವಿದ್ಯಾರ್ಥಿಗಳು ಹಿರಿಯರ ಸಹಾಯದಿಂದ ಪಾಡ್ದನ ದೊದಿಗೆ ನೇಜಿ ನೆಟ್ಟರು. ಅಲ್ಲದೆ ಟಿಲ್ಲರ್ ಯಂತ್ರದ ಮೂಲಕ ಗದ್ದೆಯನ್ನು ಉಳುವ ಅನುಭವ ಪಡೆದರು. ಇದರೊಂದಿಗೆ ಭತ್ತದ ಕೃಷಿ, ಇತರ ಉಪಕೃಷಿಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ಬಳಿಕ ಗದ್ದೆಯಲ್ಲಿ ವಿವಿಧ ಬಗೆಯ ಕೆಸರುಗದ್ದೆ ಕ್ರೀಡಾಕೂಟಗಳನ್ನೂ ಹಮ್ಮಿಕೊಳ್ಳಲಾಗಿತ್ತು.
ಮಧ್ಯಾಹ್ನ ಸೇರಿದ್ದ ಎಲ್ಲರಿಗೂ ಸ್ಥಳೀಯ ರೈತ ಅಚ್ಯುತ ಗಟ್ಟಿಯವರ ಮನೆಯಲ್ಲಿ ಗ್ರಾಮೀಣ ಶೈಲಿಯ ಭೋಜನ ವ್ಯವಸ್ಥೆ ಕಲ್ಪಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News