ಉಡುಪಿ: ಕನಕದಾಸ ಮಂದಿರ ಜೀರ್ಣೋದ್ಧಾರಕ್ಕೆ ಶಿಲಾನ್ಯಾಸ

Update: 2016-07-10 18:52 GMT

ಉಡುಪಿ, ಜು.10: ಭಕ್ತ ಕನಕದಾಸ ಮಂದಿರ ಜೀರ್ಣೋದ್ಧಾರ ಸಮಿತಿಯ ವತಿಯಿಂದ ಸುಮಾರು 1.25 ಕೋ. ರೂ. ವೆಚ್ಚದಲ್ಲಿ ನಡೆಸಲುದ್ದೇಶಿಸಿರುವ ಉಡುಪಿ ಶ್ರೀಕೃಷ್ಣ ಮಠದ ಕನಕ ಗೋಪುರ ಮುಂಭಾಗದ ಭಕ್ತ ಕನಕದಾಸ ಮಂದಿರದ ಜೀರ್ಣೋದ್ಧಾರಕ್ಕೆ ಪರ್ಯಾಯ ಪೇಜಾವರ ಶ್ರೀವಿಶ್ವೇಶತೀರ್ಥ ಸ್ವಾಮೀಜಿ ಹಾಗೂ ಕಲಬುರಗಿ ಕುರುಬ ಪೀಠದ ಶ್ರೀ ಸಿದ್ಧರಾಮಾನಂದ ಪುರಿ ಸ್ವಾಮೀಜಿ ರವಿವಾರ ಶಿಲಾನ್ಯಾಸ ನೆರವೇರಿಸಿದರು.

ಬಳಿಕ ಆಶೀರ್ವಚನ ನೀಡಿದ ಪೇಜಾವರ ಶ್ರೀಯವರು, ಕೃಷ್ಣ ಹಾಗೂ ಕನಕದಾಸರ ನಡುವೆ ಅವಿನಾಭಾವ ಸಂಬಂಧ ಇದೆ. ಕಳೆದ ಕನಕ ಜಯಂತಿ ಸಂದರ್ಭದಲ್ಲಿ ಕನಕ ಮಂದಿರದ ಜೀರ್ಣೋದ್ಧಾರದ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗಿತ್ತು. ಈ ಕಾರ್ಯಕ್ಕೆ ಮಠದ ವತಿಯಿಂದ 25 ಲಕ್ಷ ರೂ. ದೇಣಿಗೆ ನೀಡಲಾಗುವುದು. ಉಳಿದ ಮೊತ್ತವನ್ನು ಕೇಂದ್ರ, ರಾಜ್ಯ ಸರಕಾರ ಮತ್ತು ಭಕ್ತರಿಂದ ಸಂಗ್ರಹಿಸುವ ಕಾರ್ಯ ಮಾಡಬೇಕು ಎಂದರು.

ಕಲ್ಬುರ್ಗಿ ಕುರುಬ ಪೀಠದ ಶ್ರೀ ಸಿದ್ಧರಾಮಾನಂದ ಪುರಿ ಸ್ವಾಮೀಜಿ, ರಾಜ್ಯ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಪಂಡಿತ್‌ರಾವ್ ಚಿದ್ರಿ ಮಾತನಾಡಿದರು.
ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್, ಸಂಸದೆ ಶೋಭಾ ಕರಂದ್ಲಾಜೆ ಶುಭ ಹಾರೈಸಿದರು. ಮಠದ ಮುಖ್ಯ ಪುರೋಹಿತ ಚಿತ್ರಾಪುರ ಗೋಪಾಲ ಕೃಷ್ಣ ಆಚಾರ್ಯ ಧಾರ್ಮಿಕ ವಿಧಿ ವಿಧಾನಗಳನ್ನು ನಡೆಸಿದರು.
ಕನಕ ಸದ್ಭಾವನಾ ಜ್ಯೋತಿ ರಥಯಾತ್ರೆ ಸಮಿತಿಯ ರಾಜ್ಯಾಧ್ಯಕ್ಷ ಓಂ ಶ್ರೀಕೃಷ್ಣ ಮೂರ್ತಿ, ಪ್ರಧಾನ ಕಾರ್ಯದರ್ಶಿ ಕೆ.ಆರ್.ಪ್ರಭಾವತಿ, ಕಾನೂನು ಸಲಹೆಗಾರ ಅಮೃತೇಶ್, ರಾಜ್ಯ ಕುರುಬರ ಸಂಘದ ನಿರ್ದೇಶಕಿ ಜಯಲಕ್ಷ್ಮೀ, ಪ್ರಸನ್ನ ಕುಮಾರ್ ಮಂಗಳೂರು, ಶ್ರೀಕನಕದಾಸ ಸಮಾಜ ಸೇವಾ ಸಂಘದ ಜಿಲ್ಲಾಧ್ಯಕ್ಷ ಮೇಟಿ ಮುದಿಯಪ್ಪ, ಮಠದ ದಿವಾನ ರಘುರಾಮ ಆಚಾರ್ಯ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News