ಪುತ್ತೂರು ನಗರ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆಯಲ್ಲಿ ಪಕ್ಷದ ನೀತಿ ನಿಯಮ ಉಲ್ಲಂಘನೆ: ಆರೋಪ

Update: 2016-07-11 13:25 GMT

ಪುತ್ತೂರು, ಜು.11: ಕಾಂಗ್ರೆಸ್ ಪಕ್ಷದ ನೀತಿ ನಿಯಮವನ್ನು ಉಲ್ಲಂಘಿಸಿ ಪುತ್ತೂರು ನಗರ ಕಾಂಗ್ರೆಸ್ ಅಧ್ಯಕ್ಷರನ್ನು ನೇಮಕ ಮಾಡಲಾಗಿದ್ದು, ಈ ನೇಮಕದ ವಿರುದ್ಧ ಕೆಪಿಸಿಸಿ ಅಧ್ಯಕ್ಷರಿಗೆ ದೂರು ನೀಡಲಾಗುವುದು ಎಂದು ಲ್ಯಾನ್ಸಿ ಮಸ್ಕರೇನಸ್ ತಿಳಿಸಿದ್ದಾರೆ.

ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಳೆದ ಎಂಟು ವರ್ಷಗಳಿಂದ ನಗರ ಕಾಂಗ್ರೆಸ್ ಅಧ್ಯಕ್ಷನಾಗಿದ್ದು, ಈಗಲೂ ಮುಂದುವರಿಯುತ್ತಿದ್ದೇನೆ. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಫಝಲ್ ರಹೀಂ ನಗರ ಕಾಂಗ್ರೆಸ್ ಅಧ್ಯಕ್ಷತೆಗೆ ಸೂತ್ರಬೆಟ್ಟು ಜಗನ್ನಾಥ ರೈ ಅವರನ್ನು ನೇಮಕ ಮಾಡುವಾಗ ಪಕ್ಷದ ನೀತಿ ನಿಯಮಗಳನ್ನು ಉಲ್ಲಂಘನೆ ಮಾಡಿದ್ದಾರೆ. ಈ ನೇಮಕವನ್ನು ಒಪ್ಪಲು ಸಾಧ್ಯವಿಲ್ಲ. ನನ್ನನ್ನು ಬದಲಾಯಿಸಿ ಬೇರೆ ಅಧ್ಯಕ್ಷರನ್ನು ನೇಮಕ ಮಾಡಬಾರದು ಎಂದು ನಾನೇನು ಹೇಳುವುದಿಲ್ಲ. ಆದರೆ ಆ ಪ್ರಕ್ರಿಯೆ, ಪಕ್ಷದ ನಿಯಮಾವಳಿ ಪ್ರಕಾರ ಬ್ಲಾಕ್ ಕಾಂಗ್ರೆಸ್‌ನಿಂದ ಶಿಫಾರಸು ಹೋಗಿ ಅದನ್ನು ಜಿಲ್ಲಾ ಕಾಂಗ್ರೆಸ್ ಅನುಮೋದಿಸಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಘೋಷಿಸಬೇಕು. ಆದರೆ ಇಲ್ಲಿ ಬ್ಲಾಕ್ ಅಧ್ಯಕ್ಷರು ತಾವೇ ನೇಮಕ ಮಾಡಿಕೊಂಡಿದ್ದಾರೆ. ಈ ಮೂಲಕ ನಿಯಮಾವಳಿ ಉಲ್ಲಂಘನೆಯಾಗಿದೆ ಎಂದರು.

ಹಿಂದೆ ಡಾಲ್ಫಿ ರೇಗೊ ಅವರು ನಗರ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿಯೂ ನಿಯಮಾವಳಿ ಪಾಲನೆ ಮಾಡಲಾಗಿತ್ತು. ಪುತ್ತೂರು ನಗರಸಭೆಯಲ್ಲಿ ಕಾಂಗ್ರೆಸ್ ಆಳ್ವಿಕೆಯಿದ್ದು, ನಗರ ಅಧ್ಯಕ್ಷರ ನೇಮಕ ಸಂದರ್ಭ ಪಕ್ಷದ ಕೌನ್ಸಿಲರ್‌ಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಿತ್ತು. ಆದರೆ ಯಾರೊಬ್ಬರ ಜೊತೆಗೂ ಚರ್ಚಿಸಿಲ್ಲ. ಹಿಂದೆ ಪುರಸಭೆಯ ಅಧ್ಯಕ್ಷತೆಗೆ ವಾಣಿ ಶ್ರೀಧರ್ ಆಕಾಂಕ್ಷಿಯಾಗಿ ಪಕ್ಷದ ಅಧಿಕೃತ ಅಭ್ಯರ್ಥಿಯ ವಿರುದ್ಧ ಸ್ಪರ್ಧಿಸಿ ಬಿಜೆಪಿಯ ಬೆಂಬಲ ಪಡೆದರು. ಅವರಿಗೆ ಕುಮ್ಮಕ್ಕು ನೀಡಿ ಪಕ್ಷ ವಿರೋಧಿ ಕೆಲಸ ಮಾಡಿದವರನ್ನೇ ಈಗ ನಗರ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ತನ್ನದೆ ವಾರ್ಡ್‌ನಲ್ಲಿ ಎರಡು ಬಾರಿ ಸೋಲು ಅನುಭವಿಸಿದವರಿಗೆ ನಗರ ಅಧ್ಯಕ್ಷತೆ ನೀಡಲಾಗಿದೆ ಎಂದು ಅವರು ಆಪಾದಿಸಿದರು.

ಹೇಮನಾಥ ಶೆಟ್ಟಿ ಬ್ಲಾಕ್ ಅಧ್ಯಕ್ಷರಾಗಿದ್ದಾಗ ಪುತ್ತೂರಿನಲ್ಲಿ ಕಾಂಗ್ರೆಸ್ ಶಾಸಕರು ಆಯ್ಕೆಯಾದರು. ಅವರ ಅಧ್ಯಕ್ಷತೆ ಅವಧಿಯಲ್ಲಿ ಪುತ್ತೂರು ಬ್ಲಾಕ್ ವ್ಯಾಪ್ತಿಯ 11 ಗ್ರಾಪಂಗಳಲ್ಲಿ 8 ಗ್ರಾಪಂಗಳನ್ನು ಕಾಂಗ್ರೆಸ್ ಗೆದ್ದಿತ್ತು. ಫಝಲ್ ರಹೀಂ ಅಧ್ಯಕ್ಷರಾದ ಮೇಲೆ 13 ಗ್ರಾಪಂಗಳು ಬ್ಲಾಕ್ ವ್ಯಾಪ್ತಿಗೆ ಬಂದರೂ ಅದರಲ್ಲಿ ಕೇವಲ 4ನ್ನು ಮಾತ್ರ ಪಕ್ಷ ಗೆಲ್ಲಲು ಸಮರ್ಥವಾಯಿತು. ಇತ್ತೀಚೆಗೆ ನಡೆದ ಜಿಪಂ ಚುನಾವಣೆಯಲ್ಲಿ ಅನಿತಾ ಹೇಮನಾಥ ಶೆಟ್ಟಿ ಅವರನ್ನು ಬಿಟ್ಟರೆ ಬೇರ್ಯಾರೂ ಕಾಂಗ್ರೆಸ್‌ನಿಂದ ಗೆದ್ದಿಲ್ಲ. ಅನಿತಾ ಅವರು ಗೆದ್ದಿದ್ದು ಕೂಡ ಅವರ ಸ್ವಂತ ಬಲದಿಂದ. ಅವರಿಗೆ ಟಿಕೆಟ್ ನೀಡಲು ಕೂಡ ವಿರೋಧ ಮಾಡಲಾಗಿತ್ತು. ಪಕ್ಷದ ಈ ಎಲ್ಲ ವೈಫಲ್ಯಗಳಿಗೆ ಬ್ಲಾಕ್ ಅಧ್ಯಕ್ಷ ಫಝಲ್ ರಹೀಂ ಅವರೇ ಕಾರಣ ಎಂದು ದೂರಿದರು.

ಸುದ್ದಿಗೋಷ್ಠಿಯಲ್ಲಿ ಪುತ್ತೂರು ನಗರಸಭೆಯ ಸದಸ್ಯರಾದ ಶಕ್ತಿ ಸಿನ್ಹಾ, ಮುಕೇಶ್ ಕೆಮ್ಮಿಂಜೆ, ಬ್ಲಾಕ್ ಕಾಂಗ್ರೆಸ್ ನಿಕಟಪೂರ್ವ ಅಧ್ಯಕ್ಷ ರವಿಪ್ರಸಾದ್ ಶೆಟ್ಟಿ ಮತ್ತು ಕೊರಗಪ್ಪ ಗೌಡ ಬನ್ನೂರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News