ಸಂಸದ ನಳಿನ್ ಕುಮಾರ್‌ರಿಂದ ದ್ವಂದ್ವ ಹೇಳಿಕೆ: ಬಂಟ್ವಾಳ ತಾಪಂ ಉಪಾಧ್ಯಕ್ಷ ಅಬ್ಬಾಸ್ ಅಲಿ

Update: 2016-07-11 14:50 GMT

ಬಂಟ್ವಾಳ, ಜು.11: ಕೆಲವು ಸಮಯದ ಹಿಂದೆಯಷ್ಟೇ ದ.ಕ. ಜಿಲ್ಲೆಯ ಬಂಟ್ವಾಳ ತಾಲೂಕಿನಲ್ಲಿ ಮಾತ್ರ ಅಭಿವೃದ್ಧಿ ಕಾರ್ಯಗಳ ಅನುಷ್ಠಾನಕ್ಕೆ ಮಾತ್ರ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಆಸಕ್ತಿ ವಹಿಸುತ್ತಾರೆ ಎಂದಿದ್ದ ಸಂಸದ ನಳೀನ್ ಕುಮಾರ್ ಕಟೀಲ್ ಎರಡು ದಿನಗಳ ಹಿಂದೆಯಷ್ಟೇ ಬಂಟ್ವಾಳ ತಾಲೂಕಿನಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲವೆಂದು ದ್ವಂದ್ವ ಹೇಳಿಕೆ ನೀಡಿರುವುದು ಹಾಸ್ಯಾಸ್ಪದ ಮತ್ತು ಖಂಡನೀಯವೆಂದು ಬಂಟ್ವಾಳ ತಾಲೂಕು ಪಂಚಾಯತ್ ಉಪಾದ್ಯಕ್ಷ ಅಬ್ಬಾಸ್ ಅಲಿ ತಿರುಗೇಟು ನೀಡಿದ್ದಾರೆ.

ಸೋಮವಾರ ಸಂಜೆ ಬಿ.ಸಿ.ರೋಡಿನ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದ.ಕ. ಜಿಲ್ಲೆಯಲ್ಲೇ ಮಿಸ್ಟರ್ ಕ್ಲೀನ್ ರಾಜಕಾರಣಿಯಾಗಿರುವ ಸಚಿವ ರಮಾನಾಥ ರೈ ಕಳೆದ ಮೂರು ವರ್ಷಗಳಲ್ಲಿ ನೂರಾರು ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕಾರ್ಯಗತಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ತಿಳಿಸಿದರು.

ಬಿ.ಸಿ.ರೋಡಿನಲ್ಲಿ ಮಿನಿವಿಧಾನಸೌಧ, ಸರಕಾರಿ ಬಸ್ ತಂಗುದಾಣ, ಉದ್ಯಾನವನ, ನಿರೀಕ್ಷಣಾ ಮಂದಿರ, ಪುರಸಭೆ ವ್ಯಾಪ್ತಿಯ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಎರಡನೆ ಹಂತದ ಬೃಹತ್ ಕುಡಿಯುವ ನೀರಿನ ಯೋಜನೆ, ಟ್ರಾಫಿಕ್ ಪೊಲೀಸ್ ಠಾಣೆ, ಬಂಟ್ವಾಳದಲ್ಲಿ ಡಿವೈಎಸ್ಪಿ ಹುದ್ದೆಯನ್ನು ಸೃಷ್ಟಿಸಿ ಬಂಟ್ವಾಳ ಉಪ ವಿಬಾಗವನ್ನಾಗಿ ಮೇಲ್ದರ್ಜೆಗೇರಿಸಿರುವುದು, ಬಹುಗ್ರಾಮ ಕುಡಿಯುವ ನೀರಿನ ಯೋಜನೆ, ಒನ್‌ಟೈಮ್ ಇಂಪ್ರೋ ಯೋಜನೆಯ ಮೂಲಕ ಕ್ಷೇತ್ರದ ನಾಲ್ಕು ರಸ್ತೆಗಳ ಸಮಗ್ರ ಅಭಿವೃದ್ಧಿಗೆ 14.60 ಕೋಟಿ ರೂ. ಅನುದಾನವನ್ನು ಮಂಜುರಾತಿ ಪಡೆಯುವಲ್ಲಿ ಯಶಸ್ವಿ ಸೇರಿದಂತೆ ಶಿಕ್ಷಣ, ಸಣ್ಣನೀರಾವರಿ, ಮೆಸ್ಕಾಂ, ಅರಣ್ಯ, ಪಜಾ, ಪಪಂ ಶೇಯೋವೃದ್ಧಿ ಯೋಜನೆಯಲ್ಲಿ ವಿವಿಧ ಕಾಮಗಾರಿಗಳನ್ನು ಅನುಷ್ಠಾನಕ್ಕೆ ತರುವಲ್ಲಿ ಸಚಿವರು ಯಶಸ್ವಿಯಾಗಿದ್ದಾರೆ ಎಂದರು.

ಇದೇ ವೇಳೆ ಮಾತನಾಡಿದ ಜಿಪಂ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ, ಬಂಟ್ವಾಳ ತಾಲೂಕಿನಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ನಡೆದಿಲ್ಲವೆಂದು ಟೀಕಿಸಿರುವ ಸಂಸದ ನಳಿನ್ ಕುಮಾರ್ ಕಟೀಲ್ ತಮ್ಮ ಮಂಗಳೂರು ಲೋಕಸಭಾ ಕ್ಷೇತ್ರದಲ್ಲಿ ಕಣ್ಣಿಗೆ ಕಾಣುವಂತಹ ಯಾವ ಅಭಿವೃದ್ಧಿ ಕೆಲಸವನ್ನು ಮಾಡಿದ್ದಾರೆ ಎಂಬುದನ್ನು ಬಹಿರಂಗಪಡಿಸುವಂತೆ ಸವಾಲು ಎಸೆದರು.

ಮಂಗಳೂರು - ಸುರತ್ಕಲ್ ಚತುಷ್ಪಥ ರಸ್ತೆಯುದ್ದಕ್ಕೂ ಅಲ್ಲಲ್ಲಿ ನೀರು ನಿಂತಿರುವುದು, ಹೊಂಡ ಗುಂಡಿಗಳು ಬಿದ್ದಿರುವುದು ಹಾಗೂ ಬಿ.ಸಿ.ರೋಡಿನ ಸರ್ವೀಸ್ ರಸ್ತೆ ಹದಗೆಟ್ಟಿದ್ದರೂ ಇದನ್ನು ಸುಸ್ಥಿತಿಗೆ ತರಲು ಕನಿಷ್ಠ ಪ್ರಯತ್ನವನ್ನೂ ಅವರು ಮಾಡಿಲ್ಲ ಎಂದು ಟೀಕಿಸಿದರು.

ವಾಣಿಜ್ಯ ಸಂಕಿರಣ ಏಲಂ

ಪುರಸಭೆ ವ್ಯಾಪ್ತಿಯ ಬಡ್ಡಕಟ್ಟೆಯ ವಾಣಿಜ್ಯ ಸಂಕಿರ್ಣದ ಏಲಂ ಪ್ರಕ್ರಿಯೆ ಮುಗಿದಿದ್ದು ಪುರಸಭೆಗೆ ಇದರಿಂದ ಕೋಟ್ಯಾಂತರ ರೂ. ಆದಾಯ ಬರಲಿದೆ. 20 ರೂ. ವೆಚ್ಚದಲ್ಲಿ ಪುರಸಭಾ ಕಟ್ಟಡದ ಮೇಲಂತಸ್ತು ನಿರ್ಮಿಸುವುದು ಸೇರಿದಂತೆ ಬಿ.ಸಿ.ರೋಡಿನ ರಕ್ತೇಶ್ವರಿ ದೇವಸ್ಥಾನದ ಪಕ್ಕದಲ್ಲಿರುವ ಕಟ್ಟಡದಲ್ಲೂ ಮೇಲಂತಸ್ತನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ಬಿ.ಸಿ.ರೋಡ್ ವೃತ್ತ ಬಳಿ ಖಾಸಗಿ ಬಸ್ ನಿಲ್ದಾಣ ನಿರ್ಮಾಣ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ನಡೆಸಲು ಉದ್ದೇಶಿಸಲಾಗಿದೆ ಎಂದು ಪುರಸಭಾಧ್ಯಕ್ಷ ರಾಮಕೃಷ್ಣ ಆಳ್ವ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಾಯಿಲಪ್ಪ ಸಾಲ್ಯಾನ್, ಜಿಪಂ ಸದಸ್ಯ ಪದ್ಮಶೇಖರ್ ಜೈನ್, ಬುಡಾ ಅಧ್ಯಕ್ಷ ಪಿಯೂಸ್ ರೋಡ್ರಿಗಸ್, ಪುರಸಬಾ ಉಪಾಧ್ಯಕ್ಷ ಮುಹಮ್ಮದ್ ನಂದರಬೆಟ್ಟು, ಮುಖಂಡ ಪ್ರಶಾಂತ್ ಕುಲಾಲ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News