ವ್ಯವಸ್ಥೆಯ ಕುಂದುಕೊರತೆ ಸರಿಪಡಿಸಲು ಮುಂದಾಗಿ: ಎಸ್.ಎಂ.ಕೃಷ್ಣ

Update: 2016-07-11 18:21 GMT


ಉಡುಪಿ, ಜು.11: ಅಧಿಕಾರಿಗಳು ತಮ್ಮ ಚೌಕಟ್ಟಿನಲ್ಲಿ ಮುಕ್ತವಾಗಿ ಜನರ ಸೇವೆ ಮಾಡುವ ಸನ್ನಿವೇಶವನ್ನು ಆಡಳಿತದ ಜವಾಬ್ದಾರಿ ಹೊತ್ತವರು ಸೃಷ್ಟಿ ಮಾಡಬೇಕು. ಅವರಲ್ಲಿ ಕುಂದುಕೊರತೆಗಳಿದ್ದರೆ ಯೋಗ್ಯ ಚೌಕಟ್ಟಿನಲ್ಲಿ ಅವುಗಳನ್ನು ನಿವಾರಿಸುವ ವ್ಯವಸ್ಥೆ ಕೂಡಾ ಯಶಸ್ವಿ ಆಡಳಿತ ನಡೆಸುವವರಿಗೆ ಸಾಧ್ಯವಾಗಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಮಾಜಿ ಸಚಿವ ಎಸ್.ಎಂ.ಕೃಷ್ಣ ಹೇಳಿದ್ದಾರೆ.

ಉಡುಪಿಯಲ್ಲಿ ಖಾಸಗಿ ಕಾರ್ಯ ಕ್ರಮವೊಂದರಲ್ಲಿ ಪಾಲ್ಗೊಂಡ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತ ನಾಡುತ್ತಿದ್ದರು.

ಇತ್ತೀಚಿನ ಬೆಳವಣಿಗೆಗಳ ಹಿನ್ನೆಲೆ ಯಲ್ಲಿ ಗೃಹ ಸಚಿವ ಕೆ.ಜೆ.ಜಾರ್ಜ್ ರಾಜೀನಾಮೆ ನೀಡಬೇಕೆಂದು ಮಾಜಿ ಮುಖ್ಯಮಂತ್ರಿಯಾಗಿ ಭಾವಿಸುತ್ತೀರಾ ಎಂದು ಪ್ರಶ್ನಿಸಿದಾಗ, ನಾನು ವೈಯಕ್ತಿಕ ಚರ್ಚೆಗೆ ಹೋಗುವುದಿಲ್ಲ. ಆಡಳಿತದಲ್ಲಿರುವವರಿಗೆ ಎಲ್ಲಾ ಮಾಹಿತಿಗಳು ಇರುತ್ತದೆ. ಮಾಹಿತಿಗಳ ಆಧಾರದಲ್ಲಿ ನಮ್ಮ ‘ಆತ್ಮಸಾಕ್ಷಿ’ಗನುಗುಣವಾಗಿ ಕಾರ್ಯ ನಿರ್ವಹಿಸಬೇಕು ಎಂದು ಉತ್ತರಿ ಸಿದರು.

ಉತ್ತರ ಪ್ರದೇಶದಲ್ಲಿ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪ್ರಚಾರಕ್ಕೆ ಪ್ರಿಯಾಂಕಾ ಗಾಂಧಿ ಅವರನ್ನು ಕರೆತರುವ ಪ್ರಯತ್ನದ ಕುರಿತು ಅವರ ಅಭಿಪ್ರಾಯ ಕೇಳಿದಾಗ, ರಾಜಕೀಯಕ್ಕೆ ಬರಬೇಕೊ, ಬೇಡವೊ ಎಂಬುದನ್ನು ಅವರವರೇ ವೈಯಕ್ತಿಕವಾಗಿ ನಿರ್ಧರಿಸಬೇಕು. ಇತ್ತೀಚೆಗೆ ನಾನು ಅವರ್ಯಾರನ್ನೂ ಭೇಟಿಯಾಗಿ ಮಾತನಾಡದ ಕಾರಣ, ಈ ಬಗ್ಗೆ ಬಹಿರಂಗ ಹೇಳಿಕೆ ನೀಡುವುದು ಸರಿಯಲ್ಲ ಎಂದು ಎಸ್.ಎಂ.ಕೃಷ್ಣ ನುಡಿದರು.
ಈ ಸಂದರ್ಭ ಎಸ್.ಎಂ.ಕೃಷ್ಣರ ಪತ್ನಿ ಪ್ರೇಮಾ, ಕಾಂಗ್ರೆಸ್ ನಾಯಕರಾದ ಎಂ.ಎ.ಗಫೂರ್, ಮಂಜುನಾಥ ಭಂಡಾರಿ, ಹರೀಶ್ ಕಿಣಿ, ಮಾಜಿ ಶಾಸಕ ಕೆ.ರಘುಪತಿ ಭಟ್, ಸಮನ್ವಯದ ಜಿಎಂ ಕಿರಣ್‌ಕುಮಾರ್, ನಿರ್ದೇಶಕ ಸುರೇಶ್ ನಾಯಕ್, ಸುಹೇಲ್ ಕಣ್ಣನ್ ಪಿಳ್ಲೈ ಮುಂತಾದವರು ಉಪಸ್ಥಿತರಿದ್ದರು.

ಸರಕಾರಕ್ಕೆ ಬಿಕ್ಕಟ್ಟು ಸಾಮಾನ್ಯ

ಸಿದ್ದರಾಮಯ್ಯ ಸರಕಾರ ಒಂದು ಬಿಕ್ಕಟ್ಟಿ ನಿಂದ ಇನ್ನೊಂದು ಬಿಕ್ಕಟ್ಟಿಗೆ ಸಿಲುಕುತ್ತಿದ್ದು, ಇದರ ಬಗ್ಗೆ ತಮ್ಮ ಅಭಿಪ್ರಾಯವೇನು ಎಂಬ ಪ್ರಶ್ನೆಗೆ, ಎಲ್ಲಾ ಸರಕಾರಗಳು ಒಂದಲ್ಲ ಒಂದು ಬಿಕ್ಕಟ್ಟನ್ನು ಎದುರಿಸುತ್ತಲೇ ಇರುತ್ತದೆ. ನಾನು ಮುಖ್ಯಮಂತ್ರಿಯಾಗಿದ್ದಾಗ ಬಂದ ಬಿಕ್ಕಟ್ಟುಗಳ ಸರಮಾಲೆಯನ್ನು ಗಮನಿಸಿದಾಗ ಈಗ ಬಂದ ಬಿಕ್ಕಟ್ಟು ಬಹಳ ಗೌಣ ಎಂದರು.

ಬಿಕ್ಕಟ್ಟುಗಳನ್ನು ಯಾವ ರೀತಿ ನಿವಾರಿಸಲು ಪ್ರಯತ್ನಿಸುತ್ತೀರಿ ಎಂಬುದು ಮುಖ್ಯ. ನಿಮ್ಮ ಪ್ರಾಮಾಣಿಕತೆಯನ್ನು ಬಹಳ ಪಾರದರ್ಶಕವಾಗಿ ತೋರಿಸಲು ಇದೊಂದು ಅವಕಾಶ. ಇದನ್ನೊಂದು ಅವಕಾಶವಾಗಿ ಬಳಸಿ ಕೊಳ್ಳಬೇಕು. ಇಂಥ ಸಂದರ್ಭದಲ್ಲಿ ಪ್ರತಿಯೊಬ್ಬರು ತಮ್ಮ ಆತ್ಮಸಾಕ್ಷಿಗನುಗುಣವಾಗಿ ಕಾರ್ಯನಿರ್ವ ಹಿಸಬೇಕು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News