ಕಾಸರಗೋಡು: ರಾಜಕೀಯ ಹಿಂಸಾಚಾರ, ಪ್ರತ್ಯೇಕ ಘಟನೆಯಲ್ಲಿ ಇಬ್ಬರ ಹತ್ಯೆ

Update: 2016-07-12 05:17 GMT

ಕಾಸರಗೋಡು, ಜು.12: ಕಣ್ಣೂರು ಪಯ್ಯನ್ನೂರಿನಲ್ಲಿ ಮತ್ತೆ ರಾಜಕೀಯ ಹಿಂಸಾಚಾರ ಮರುಕಳಿಸಿದ್ದು, ಪ್ರತ್ಯೇಕ  ಘಟನೆಯಲ್ಲಿ  ಓರ್ವ ಸಿಪಿಎಂ ಮತ್ತು ಇನ್ನೋರ್ವ ಬಿಎಂಎಸ್ ಕಾರ್ಯಕರ್ತನ  ಕೊಲೆ ಮಾಡಲಾಗಿದೆ.

ಕೊಲೆ ಗೀಡಾದವರನ್ನು  ಸಿಪಿಎಂ ಕಾರ್ಯಕರ್ತ ರಾಮಂತಳಿಯ  ಸಿ.ವಿ  ಧನರಾಜ್  (38) ಮತ್ತು  ಬಿಜೆಪಿಯ  ಕಾರ್ಮಿಕ ಸಂಘಟನೆ  ಬಿಎಂಎಸ್ ನ  ಆನೂರಿನ  ಸಿ.ಕೆ ರಾಮಚಂದ್ರನ್ (52) ಎಂದು ಗುರುತಿಸಲಾಗಿದೆ.

ಕೃತ್ಯವನ್ನು ಖಂಡಿಸಿ ಸಿಪಿಎಂ ಪಯ್ಯನ್ನೂರು ವಿಧಾನಸಭಾ ಕ್ಷೇತ್ರದಲ್ಲಿ ಬಂದ್ ಗೆ ಕರೆ ನೀಡಿದೆ .
ಕೃತ್ಯದ ಬಳಿಕ ಪರಿಸರದಲ್ಲಿ ಸಿಪಿಎಂ - ಬಿಜೆಪಿ ನಡುವೆ ಹಿಂಸಾಚಾರ  ಭುಗಿಲೆದ್ದಿದ್ದು , 25ಕ್ಕೂ ಅಧಿಕ ಮನೆಗಳಿಗೆ ನುಗ್ಗಿ ದಾಂಧಲೆ ನಡೆಸಿ  ಹಾನಿಗೊಳಿಸಲಾಗಿದೆ. 20ಕ್ಕೂ ಅಧಿಕ ವಾಹನಗಳನ್ನು  ಹಾನಿಗೊಳಿಸಿದೆ. ಕೆಲ ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ .

ಸೋಮವಾರ ರಾತ್ರಿ 11:30ರ ಸುಮಾರಿಗೆ  ಧನರಾಜ್ ನ ಮನೆಗೆ ನುಗ್ಗಿದ ತಂಡವೊಂದು  ಮನೆ ಮಂದಿಯ ಕಣ್ಮುಂದೆಯೇ ಕೊಚ್ಚಿ ಕೊಲೆಗೈದಿದೆ. ಮೂರು ಬೈಕ್ ಗಳಲ್ಲಿ ಬಂದ ಆರು ಮಂದಿ ಈ ಕೃತ್ಯ ನಡೆಸಿದ್ದು ಧನರಾಜ್  ಘಟನಾ ಸ್ಥಳದಲ್ಲೇ ಮೃತಪಟ್ಟರು .

ಈ ಘಟನೆ  ನಡೆದು ಕೆಲ ಗಂಟೆಗಳಲ್ಲೇ  ಸಮೀಪದ  ರಾಮಚಂದ್ರನ್ ರವರ ಮನೆಗೆ ನುಗ್ಗಿದ  ತಂಡವು ಬರ್ಬರವಾಗಿ ಕೊಲೆ ಮಾಡಿದೆ. ಮಧ್ಯರಾತ್ರಿ  ತಂಡವು ಮನೆಗೆ ಬಾಂಬೆಸೆದು ಬಳಿಕ ಮನೆಯೊಳಗೆ ನುಗ್ಗಿ  ಮನೆಯವರು ನೋಡುತ್ತಲೇ ತಂಡವು ಮಾರಕಾಸ್ತ್ರಗಳಿಂದ  ಕೊಚ್ಚಿ ಕೊಲೆ ಮಾಡಿದೆ. ಗಂಭೀರ ಗಾಯಗೊಂಡ  ರಾಮಚಂದ್ರರನ್ನು  ಆಸ್ಪತ್ರೆಗೆ ತಲುಪಿಸಿದರೂ ಅವರು ಬದುಕುಳಿಯಲಿಲ್ಲ.

ಕೆಲ ಸಮಯದ ಬಳಿಕ ಕಣ್ಣೂರಿನಲ್ಲಿ ರಾಜಕೀಯ ವೈಷಮ್ಯದ ಕೊಲೆಗೆ  ಕಾರಣವಾಗುತ್ತಿದೆ. ಎರಡು ಕೊಲೆ ಹಿನ್ನಲೆಯಲ್ಲಿ ಪಯ್ಯನೂರಿನಲ್ಲಿ  ಪೊಲೀಸರು  ವಿಶೇಷ ನಿಗಾ ಇರಿಸಿದ್ದಾರೆ.  ಹಂತಕರ ಪತ್ತೆಗೆ  ತನಿಖೆ ಆರಂಭಿಸಿದ್ದಾರೆ . ಹಿಂಸಾಚಾರ ಮರುಕಳಿಸದಂತೆ ಕಟ್ಟೆಚ್ಚರ ವಹಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News