ಲಿಂಗ ಪರಿವರ್ತಿತರ ಸಮಸ್ಯೆಗಾಗಿ ವೆಬ್‌ಸೈಟ್

Update: 2016-07-12 15:18 GMT

ಮಂಗಳೂರು,ಜು.12: ಲಿಂಗಪರಿವರ್ತಿತರ ಸಮಸ್ಯೆಗಳಿಗೆ ಧ್ವನಿಯಾಗಲು, ಸಹಾಯ ನೀಡಲು, ಲಿಂಗಪರಿವರ್ತಿತರ ಬಗ್ಗೆ ಮಾಹಿತಿ ನೀಡಲು ದೇಶದ ಮೊದಲ 24*7ವೆಬ್‌ಸೈಟ್ ಆರಂಭಿಸಲಾಗಿದೆ ಎಂದು ಲಿಂಗ ಪರಿವರ್ತಿತ ನೇಸರ ರೈ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದರು.

www.transgenderindia.com ಹೆಸರಿನ ವೆಬ್‌ಸೈಟ್ ಜುಲೈ 12ರಿಂದ ಕಾರ್ಯಾರಂಭ ಮಾಡಿದೆ. ಸಲಿಂಗಿಗಳು ಮತ್ತು ಲಿಂಗಪರಿವರ್ತಿತರ ಬಗ್ಗೆ ಸಮಾಜದಲ್ಲಿ ಇರುವ ತಪ್ಪುಕಲ್ಪನೆ ಹೋಗಲಾಡಿಸಲು, ಲಿಂಗಪರಿವರ್ತಿತರಿಗೆ ಇ- ಪ್ರೋತ್ಸಾಹ ನೀಡಲು ವೆಬ್‌ಸೈಟ್ ಪ್ರಾರಂಭಿಸಲಾಗಿದೆ. ಲಿಂಗಪರಿವರ್ತಿತರು ಒಟ್ಟಾಗಿ ವೆಬ್‌ಸೈಟ್ ರೂಪಿಸಿದ್ದೇವೆ. ಲಿಂಗಪರಿವರ್ತಿತರ ವಿಷಯಗಳಿಗೆ ಸಂಬಂಧಿಸಿ ಆನ್‌ಲೈನ್ ಸಂಪನ್ಮೂಲವಾಗಿ ವೆಬ್‌ಸೈಟ್ ಕಾರ್ಯನಿರ್ವಹಿಸಲಿದೆ. ಲಿಂಗಪರಿವರ್ತಿತರ, ಅವರ ಕುಟುಂಬಿಕರ ನೈಜ ಜೀವನ ಅನುಭವ ಪ್ರಕಟಿಸಲಿದೆ. ಈ ಸಂಬಂಧಿತ ವಿಷಯಗಳ ಚರ್ಚೆಗೆ ವೇದಿಕೆ ಆಗಲಿದೆ ಎಂದು ಅವರು ವಿವರ ನೀಡಿದರು.

15ರ ಹರೆಯದಲ್ಲೇ ನಾನು ತಾಯಿಯನ್ನು ಕಳೆದುಕೊಂಡೆ. ಆ ಬಳಿಕ ಸೋದರಮಾವನಿಂದಲೇ ದೌರ್ಜನ್ಯಕ್ಕೆ ಒಳಗಾದೆ. 10 ವರ್ಷಗಳ ಕಾಲ ದೌರ್ಜನ್ಯ ಅನುಭವಿಸಿ ಮಾನಸಿಕವಾಗಿ ಜರ್ಜರಿತಗೊಂಡಿದ್ದೆ. ಇದರ ಪರಿಣಾಮವಾಗಿ ಲಿಗಪರಿವರ್ತನೆಯ ನಿರ್ಧಾರ ಕೈಗೊಂಡೆ. ಈ ಸಂದರ್ಭ ಕುಟುಂಬಿಕರು ನನ್ನನ್ನು ವೈದ್ಯರು, ಮನಶಾಸ್ತ್ರಜ್ಞರು, ಬಾಬಾಗಳ ಬಳಿ ಕರೆದೊಯ್ದರು. ಬಳಿಕ ನಾನು ಲಿಂಗಪರಿವರ್ತನೆಗೆ ಒಳಗಾದೆ ಎಂದು ವಿವರಿಸಿದರು.

 ಲಿಂಗಪರಿವರ್ತಿತರು ತಮ್ಮನ್ನು ಸಾರ್ವಜನಿಕವಾಗಿ ಗುರುತಿಸಿಕೊಳ್ಳಲು ಹಿಂದೇಟು ಹಾಕಿ, ಲಿಂಗಪರಿವರ್ತನೆ ಹೊಂದಿದ ವಿಷಯವನ್ನು ರಹಸ್ಯವಾಗಿಡುತ್ತಿದ್ದಾರೆ. ಲಿಂಗಪರಿವರ್ತನೆ ಹೊಂದಿದ ವ್ಯಕ್ತಿ ತಾನಾಗಿ ವಿಷಯವನ್ನು ತಿಳಿಸದ ಹೊರತು ಸಮಾಜಕ್ಕೂ ಗೊತ್ತಾಗುವುದಿಲ್ಲ. ಆದರೆ, ಲಿಂಗಪರಿವರ್ತನೆ ಹೊಂದಿದ ವ್ಯಕ್ತಿಯನ್ನು ಸಮಾಜ ಹಿಜಿಡಾ ಎಂದು ಕರೆಯುತ್ತಿದೆ. ಲಿಂಗಪರಿವರ್ತಿತರನ್ನು ಹಿಜಿಡಾ ಎಂದು ಕರೆಯುವುದು ತಪ್ಪು ಎಂದವರು ಅಭಿಪ್ರಾಯಿಸಿದರು.

ಲಿಂಗಪರಿವರ್ತಿತ ಬಬಲ್ ಮಾತನಾಡಿ, ತಾನು ಮಂಗಳೂರಿನ ಮೆಡಿಕಲ್ ಕಾಲೇಜಿನಲ್ಲಿ ವೈದ್ಯಕೀಯ ಪದವಿ ಅಧ್ಯಯನ ನಡೆಸುತ್ತಿದ್ದು, ತಾರತಮ್ಯ ಎದುರಿಸುತ್ತಿದ್ದೇನೆ. ಹಾಸ್ಟೆಲ್, ತರಗತಿಯಲ್ಲೂ ಕೀಳಾಗಿ ನೋಡುತ್ತಿದ್ದಾರೆ. ಇದರ ವಿರುದ್ಧ ಸಂಘಟಿತರಾಗಿ ಹೋರಾಟ ನಡೆಸುತ್ತೇವೆ ಎಂದರು.
ವೆಬ್‌ಸೈಟ್ ಮತ್ತು ಇತರ ಮಾಹಿತಿಗಾಗಿ ದೂ. 7338321413 ಸಂಪರ್ಕಿಸಬಹುದು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News