ಉಳ್ಳಾಲ:ಫಿಶ್‌ಮಿಲ್‌ ಗಳಿಗೆ ಚೆನ್ನೈ ಹಸಿರು ಪೀಠದಿಂದ 25 ಲಕ್ಷ ರೂ. ದಂಡ

Update: 2016-07-13 15:56 GMT

ಮಂಗಳೂರು, ಜು.13: ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ಚೆನ್ನೈ ಪೀಠವು ಫಿಶ್‌ಮಿಲ್ ಹಾಗೂ ಆಯಿಲ್ ಮ್ಯಾನ್ಯುಫ್ಯಾಕ್ಚರರ್ ಅಸೋಯೇಶನ್ ಸಂಸ್ಥೆಗೆ 25 ರೂ.ಲಕ್ಷ ದಂಡವನ್ನು ವಿಧಿಸಿ ಆದೇಶ ನೀಡಿದೆ.

ಉಳ್ಳಾಲ ನಗರದ ನಿವಾಸಿಯಾದ ಮುಹಮ್ಮದ್ ಕಬೀರ್ ಎಂಬವರು ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ಚೆನ್ನೈ ಪೀಠದಲ್ಲಿ ಮೀನಿನಿಂದ ತಯಾರಿಸಲ್ಪಡುವ ಉತ್ಪನ್ನಗಳ ಉದ್ದಿಮೆಗಳಿಂದ ಜಲಮಾಲಿನ್ಯ, ವಾಯು ಮಾಲಿನ್ಯ ದುರ್ವಾಸನೆ ಹಾಗೂ ಕರಾವಳಿ ನಿಯಂತ್ರಣ ನಿಯಮ ಉಲ್ಲಂಘನೆ ಆಗುತ್ತಿರುವುದಾಗಿ ಹಾಗೂ ಇದರಿಂದ ಪರಿಸರ ಹಾನಿ ಉಂಟಾಗುತ್ತಿರುವುದನ್ನು ನಿಲ್ಲಿಸಲು ಕೋರಿ ಅರ್ಜಿ ಸಲ್ಲಿಸಿದ್ದರು. ಇಂಡಿಯನ್ ಫಿಶ್ ಮಿಲ್ ಹಾಗೂ ಇತರ 14 ಉದ್ದಿಮೆಗಳ ವಿರುದ್ಧ ಅರ್ಜಿ ಸಲ್ಲಿಸಿದ್ದರು.

ಹಸಿರು ನ್ಯಾಯಾಧಿಕರಣ ಪೀಠವು ಈ ಪ್ರಕರಣವನ್ನು ವಿಲೇವಾರಿ ಮಾಡಿ, ಈ ಪ್ರಕರಣದ 24ನೆ ಪ್ರತಿವಾದಿಗಳಾದ ಫಿಶ್‌ಮಿಲ್ ಹಾಗೂ ಆಯಿಲ್ ಮ್ಯಾನ್ಯುಫ್ಯಾಕ್ಚರರ್ ಅಸೋಯೇಶನ್ ಸಂಸ್ಥೆಗೆ 25 ಲಕ್ಷ ರೂ. ದಂಡ ವಿಧಿಸಿದೆ. ಇನ್ನುಳಿದಂತೆ 9  ಉದ್ದಿಮೆಗಳಿಗೆ ತಲಾ 5 ಲಕ್ಷ ರೂ. ಮತ್ತು  5 ಉದ್ದಿಮೆಗಳಿಗೆ 8 ಲಕ್ಷ ರೂ. ದಂಡ ವಿಧಿಸಿ ಆದೇಶ ನೀಡಿದೆ.

ಏಷ್ಯನ್ ಫಿಶ್‌ಮಿಲ್ ಮತ್ತು ಆಯಿಲ್ ಕಂಪೆನಿಯನ್ನು ಈ ಕೂಡಲೆ ಮುಚ್ಚುವಂತೆ ಆದೇಶ ನೀಡಿದೆಯಲ್ಲದೆ, ಮಂಡಳಿಯು ಈ ಎಲ್ಲಾ ಉದ್ದಿಮೆಗಳು ಸೇರಿ ಸ್ಥಾಪಿಸಿರುವ ಸಮೂಹ ಕೊಳಚೆ ನೀರಿನ ಶುದ್ಧೀಕರಣವನ್ನು ಪರಿಶೀಲನೆ ನಡೆಸಿ ಮಂಡಳಿ ನಿರ್ದೇಶನದ ಅನುಗುಣವಾಗಿ ಸ್ಥಾಪಿಸಲ್ಪಟ್ಟಿದೆಯೆ ಎಂದು ಪರಿಶೀಲಿಸುವಂತೆಯೂ ಆದೇಶದಲ್ಲಿ ತಿಳಿಸಿದೆ.

ಮೇಲೆ ತಿಳಿಸಿದ ಉದ್ದಿಮೆಗಳು ಭರಿಸುವ ದಂಡವನ್ನು ಪೊಲ್ಯುಟರ್ ಪೇ ಪ್ರಿನ್ಸಿಪಲ್ ಅಡಿಯಲ್ಲಿ ಪಾವತಿಸಲು ಸೂಚಿಸಲಾಗಿದೆ. ಈ ಎಲ್ಲಾ ದಂಡದ ಮೊತ್ತವನ್ನು ಪರಿಸರ ಸಂರಕ್ಷಣಾ ಪರಿಹಾರ ನಿಧಿಗೆ ಈ ಆದೇಶದ ದಿನಾಂಕದಿಂದ ಒಂದು ತಿಂಗಳೊಳಗಾಗಿ ಪಾವತಿಸುವಂತೆಯೂ ಅದೇಶಿಸಿದೆ ಮತ್ತು ಮಂಡಳಿಯು ಈ ಉದ್ದಿಮೆಗಳ ವಿರುದ್ಧ ತೆಗೆದುಕೊಂಡ ಕ್ರಮವನ್ನು ಎತ್ತಿಹಿಡಿದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News