ಕೆ.ಜೆ.ಜಾರ್ಜ್ ರಾಜೀನಾಮೆಗೆ ಆಗ್ರಹಿಸಿ ಧರಣಿ

Update: 2016-07-13 18:29 GMT

ಉಡುಪಿ, ಜು.13: ಡಿವೈಎಸ್ಪಿ ಎಂ.ಕೆ.ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಸಚಿವ ಕೆ.ಜೆ.ಜಾರ್ಜ್ ರಾಜೀನಾಮೆ ನೀಡಬೇಕೆಂದು ಆಗ್ರ ಹಿಸಿ ಬಿಜೆಪಿ ಯುವಮೋರ್ಚಾ ವತಿಯಿಂದ ಬುಧವಾರ ಸಂಜೆ ಉಡುಪಿ ಬಸ್ ನಿಲ್ದಾಣದ ಬಳಿ ಇರುವ ಕ್ಲಾಕ್‌ಟವರ್ ಎದುರು ಧರಣಿ ನಡೆಯಿತು.

ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಮಾತನಾಡಿ, ರಾಜ್ಯ ಸರಕಾರ ಪ್ರಾಮಾಣಿಕ ಹಾಗೂ ದಕ್ಷ ಅಧಿಕಾರಿಗಳನ್ನು ರಕ್ಷಿಸುವ ಬದಲು ಅವರು ಆತ್ಮಹತ್ಯೆ ಮಾಡಿಕೊಳ್ಳುವಂತಹ ಸನ್ನಿವೇಶವನ್ನು ನಿರ್ಮಾಣ ಮಾಡುತ್ತಿದೆ. ಇದೊಂದು ಹಗರಣಗಳ, ಭ್ರಷ್ಟರ ಸರಕಾರವಾಗಿದೆ. ಅಧಿಕಾರಿಗಳನ್ನು ರಕ್ಷಿಸದ ಈ ಸರಕಾರ ತಪ್ಪಿತಸ್ಥ ಸಚಿವರನ್ನು ರಕ್ಷಿಸಲು ಮುಂದಾಗಿದ್ದು, ಸಚಿವ ಜಾರ್ಜ್ ರಾಜೀನಾಮೆ ನೀಡುವವರೆಗೂ ನಮ್ಮ ಹೋರಾಟ ಮುಂದುವರಿಯಲಿದೆ ಎಂದರು.

ಧರಣಿಯನ್ನುದ್ದೇಶಿಸಿ ಮಾಜಿ ಜಿಲ್ಲಾಧ್ಯಕ್ಷ ಉದಯಕುಮಾರ್ ಶೆಟ್ಟಿ, ಶೀಲಾ ಕೆ.ಶೆಟ್ಟಿ, ಯುವಮೋರ್ಚಾದ ನವೀನ್ ನಾಯಕ್, ರಾಘವೇಂದ್ರ ಉಪಾಧ್ಯ ಮುಂತಾದವರು ಮಾತನಾಡಿದರು. ಬಿಜೆಪಿ ನಾಯಕರಾದ ಯಶ್ಪಾಲ್ ಸುವರ್ಣ, ಕುಯಿಲಾಡಿ ಸುರೇಶ್ ನಾಯಕ್, ಸುಪ್ರಸಾದ್ ಶೆಟ್ಟಿ, ಎ.ಶಿವಕುಮಾರ್, ಲಾಲಾಜಿ ಮೆಂಡನ್, ದಿವಾಕರ ಬಾಬು, ಶ್ರೀಶ ನಾಯಕ್, ರಾಜೇಶ್ ಕಾವೇರಿ, ಪ್ರಭಾಕರ ಪೂಜಾರಿ ಮುಂತಾದವರು ಪಾಲ್ಗೊಂಡಿದ್ದರು.
ಬಳಿಕ ಧರಣಿ ನಿರತರು ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News