ಪಿಲಿಕುಳ ಮೃಗಾಲಯಕ್ಕೆ ವರ್ಷಾಂತ್ಯದಲ್ಲಿ ಹೊಸಬರ ಸೇರ್ಪಡೆ!

Update: 2016-07-14 10:04 GMT

ಮಂಗಳೂರು,ಜು.14: ಪಿಲಿಕುಳದ ಡಾ. ಶಿವರಾಮ ಕಾರಂತ ನಿಸರ್ಗಧಾಮದ ಮೃಗಾಲಯಕ್ಕೆ ಈ ವರ್ಷಾಂತ್ಯಕ್ಕೆ ಮಧ್ಯ ಆಫ್ರಿಕಾದಿಂದ ಹೊಸಬರು ಸೇರ್ಪಡೆಯಾಗಲಿದ್ದಾರೆ. ರಾಜ್ಯದ ಪ್ರಮುಖ ವನ್ಯಜೀವಿ ಮೃಗಾಲಯವಾಗಿ ಗುರುತಿಸಿಕೊಂಡಿರುವ ಪಿಲಿಕುಳದ ಮೃಗಾಲಯಕ್ಕೆ ಮುಂದಿನ ಆರು ತಿಂಗಳೊಳಗೆ ಮಧ್ಯ ಆಫ್ರಿಕಾದಿಂದ ಜಿರಾಫೆ, ಚಿಂಪಾಂಜಿ ಹಾಗೂ ಝೀಬ್ರಾ ಜೋಡಿಗಳ ಆಗಮನವಾಗಲಿದೆ ಎಂದು ಜಿಲ್ಲಾಧಿಕಾರಿ ಎ.ಬಿ. ಇಬ್ರಾಹೀಂ ಇಂದು ತಿಳಿಸಿದ್ದಾರೆ. ಬಹುತೇಕವಾಗಿ ದೇಶದೊಳಗೆ ಮೃಗಾಲಯಗಳಲ್ಲಿ ಪ್ರಾಣಿಗಳನ್ನು ಒಂದು ಮೃಗಾಲಯಿಂದ ಇನ್ನೊಂದು ಮೃಗಾಲಯಕ್ಕೆ ಪರಸ್ಪರ ವಿನಿಮಯ ಮಾಡಿಕೊಳ್ಳಲಾಗುತ್ತದೆ. ಆದರೆ ಪಿಲಿಕುಳಕ್ಕೆ ಮಧ್ಯ ಆಫ್ರಿಕಾದಿಂದ ಈ ಹೊಸಬರನ್ನು ಖರೀದಿಸಲು ಈಗಾಗಲೇ ಪ್ರಾಯೋಜಕರನ್ನು ಸಂಪರ್ಕಿಸಿ ಅವರಿಂದ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಪಡೆಯಲಾಗಿದೆ. ಜಿರಾಫೆ ಜೋಡಿ 75 ಲಕ್ಷ ರೂ.ಗಳಿಗೆ, ಚಿಂಪಾಂಜಿ ಹಾಗೂ ಝೀಬ್ರಾಗಳ ಜೋಡಿಯನ್ನು ತಲಾ 50 ಲಕ್ಷ ರೂ.ಗಳಿಗೆ ಖರೀದಿಸಲು ಸಿದ್ಧತೆ ನಡೆಯುತ್ತಿದೆ ಎಂದು ಜಿಲ್ಲಾಧಿಕಾರಿ ಹೇಳಿದರು. ಪಿಲಿಕುಳ ನಿಸರ್ಗಧಾಮವು, ಹುಲಿ, ಚಿರತೆ, ಆನೆ ಸೇರಿದಂತೆ 1000ದಷ್ಟು ವನ್ಯಜೀವಿಗಳನ್ನು ಹೊಂದಿದ್ದು, ಇವುಗಳಲ್ಲಿ 120 ಅಪರೂಪದ, ವಿನಾಶದಂಚಿನಲ್ಲಿರುವ ವನ್ಯಜೀವಿಗಳೂ ಇರುವುದು ವಿಶೇಷತೆ. ಪಿಲಿಕುಳ ಮೃಗಾಲಯದ ಆಕರ್ಷಣೆಯನ್ನು ಇನ್ನಷ್ಟು ಹೆಚ್ಚಿಸುವ ನಿಟ್ಟಿನಲ್ಲಿ ಮಧ್ಯ ಆಫ್ರಿಕಾಯಿಂದ ಈ ಪ್ರಾಣಿಗಳನ್ನು ಖರೀದಿಸಲು ನಿರ್ಧರಿಸಲಾಗಿದೆ. ಕಾರ್ಪ್ ಬ್ಯಾಂಕ್, ಎಂಆರ್‌ಪಿಎಲ್ ಮೊದಲಾದ ಸಂಸ್ಥೆಗಳು ಈ ಬಗ್ಗೆ ಆಸಕ್ತಿ ತೋರಿಸಿದ್ದು, ಇನ್ನಷ್ಟು ಪ್ರಾಯೋಜಕರನ್ನು ಕಲೆ ಹಾಕಲಾಗುತ್ತಿದೆ ಎಂದು ಪಿಲಿಕುಳ ನಿಸರ್ಗಧಾಮದ ಕಾರ್ಯನಿರ್ವಾಹಕ ನಿರ್ದೇಶಕ ಜಯಪ್ರಕಾಶ್ ಭಂಡಾರಿ ಮಾಹಿತಿ ನೀಡಿದರು. ಮಧ್ಯ ಆಫ್ರಿಕಾ ಮತ್ತು ಇಲ್ಲಿನ ವಾತಾವರಣ ಬಹುತೇಕವಾಗಿ ಸಾಮಾನ್ಯವಾಗಿರುವುದರಿಂದ ಅಲ್ಲಿಂದ ಖರೀದಿಸಲಾಗುವ ಪ್ರಾಣಿಗಳನ್ನು ಇಲ್ಲಿ ಸಾಕಲು ಯಾವುದೇ ರೀತಿಯ ತೊಂದರೆ ಆಗದು. ಮಾತ್ರವಲ್ಲದೆ ಮೃಗಾಲಯದಲ್ಲಿ ಸಾಕಷ್ಟು ಸ್ಥಳಾವಕಾಶ ಹಾಗೂ ಮೂಲಭೂತ ಸೌಕರ್ಯದ ವ್ಯವಸ್ಥೆ ಇದೆ. ಆ ಪ್ರಾಣಿಗಳನ್ನು ಮಧ್ಯ ಆಫ್ರಿಕಾದಿಂದ ವಿಮಾನದ ಮೂಲಕ ತರಬೇಕಾಗಿರುವುದರಿಂದ ಹಲವಾರು ರೀತಿಯ ಪ್ರಕ್ರಿಯೆಗಳನ್ನು ನಿರ್ವಹಿಸಲು ಸುಮಾರು ಆರು ತಿಂಗಳ ಕಾಲಾವಕಾಶ ಬೇಕಾಗಿದೆ ಎಂದು ಜಯಪ್ರಕಾಶ್ ಭಂಡಾರಿ ತಿಳಿಸಿದರು. 

ಮೃಗಾಲಯಕ್ಕೆ ವಾರ್ಷಿಕ 7 ಲಕ್ಷ ವೀಕ್ಷಕರ ಭೇಟಿ
ಪಿಲಿಕುಳ ನಿಸರ್ಗಧಾಮದ ಮೃಗಾಲಯಕ್ಕೆ ವಾರ್ಷಿಕ ಸರಾಸರಿ ಸುಮಾರು 7 ಲಕ್ಷದಷ್ಟು ಪ್ರವಾಸಿಗರು, ವೀಕ್ಷಕರು ಭೇಟಿ ನೀಡುತ್ತಾರೆ. ಅದರಲ್ಲೂ ಮಕ್ಕಳಿಗೆ ಬೇಸಿಗೆ ಹಾಗೂ ನವರಾತ್ರಿ ರಜಾ ಅವಧಿಯಲ್ಲಿ ಮೃಗಾಲಯಕ್ಕೆ ಭೇಟಿ ನೀಡುವವರ ಸಂಖ್ಯೆ ಅಧಿಕ ಎನ್ನುತ್ತಾರೆ ಮೃಗಾಲಯದ ಹಿರಿಯ ವಿಜ್ಞಾನಿ ವಿಕ್ರಂ ಲೋಬೋ. ಕಾಳಿಂಗ ಸರ್ಪ ಮೃಗಾಲಯದ ವಿಶೇಷ ಆಕರ್ಷಣೆ!

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News