ಬೆಟ್ಟಂಪಾಡಿ ನಂದಗೋಕುಲ ಶಿಶು ಮಂದಿರ ಶಿಲಾನ್ಯಾಸ

Update: 2016-07-14 16:08 GMT

ಪುತ್ತೂರು, ಜು.14: ಸಂಸ್ಕಾರಯುತ ಶಿಕ್ಷಣ ಇಂದಿನ ಅಗತ್ಯವಾಗಿದ್ದು, ಪುತ್ತೂರು ವಿದ್ಯಾವರ್ಧಕ ಸಂಘದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ವಿದ್ಯಾಸಂಸ್ಥೆಗಳು ಸಂಸ್ಕಾರಯುತ ಶಿಕ್ಷಣ ನೀಡುತ್ತಿವೆ ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘದ ನಿಕಟಪೂರ್ವ ಅಧ್ಯಕ್ಷ ಎಸ್.ಆರ್. ರಂಗಮೂರ್ತಿ ಹೇಳಿದರು.

ಅವರು ಗುರುವಾರ ಬೆಟ್ಟಂಪಾಡಿ ಪ್ರಿಯದರ್ಶಿನಿ ವಿದ್ಯಾ ಸಂಸ್ಥೆಯ ನೂತನ ನಂದಗೋಕುಲ ಶಿಶು ಮಂದಿರದ ಶಿಲಾನ್ಯಾಸ , ನೂತನ ಕೊಠಡಿ ಮತ್ತು ಕಂಪ್ಯೂಟರ್ ತರಗತಿ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ನಂದಗೋಕುಲ ಶಿಶು ಮಂದಿರದ ಶಿಲಾನ್ಯಾಸ ನೆರವೇರಿಸಿದ ಪುತ್ತೂರು ಎಪಿಎಂಸಿ ನಿರ್ದೇಶಕಿ ತ್ರಿವೇಣಿ ಕರುಣಾಕರ್ ಪೆರ್ವೋಡಿ ಮಾತನಾಡಿ, ಮಕ್ಕಳ ಉಜ್ವಲ ಭವಿಷ್ಯಕ್ಕೆ ಕಲಿಯುತ್ತಿರುವ ಶಾಲೆ ಕಾರಣ. ಅದು ಈ ಪ್ರಿಯದರ್ಶಿನಿ ಶಾಲೆಯಿಂದ ದೊರಕುತ್ತಿದೆ. ಯಾವುದೇ ಸಂಘ ಸಂಸ್ಥೆಗೆ ನಾವೆಲ್ಲಾ ಬೆನ್ನೆಲುಬಾಗಿ ನಿಂತಾಗ ಅಭಿವೃದ್ದಿಯಾಗುತ್ತದೆ ಎಂದು ಹೇಳಿ ತಮ್ಮ ಪತಿಯ ನೆನಪಿಗೋಸ್ಕರ ನಂದಗೋಕುಲದ ನಿರ್ಮಾಣಕ್ಕೆ ರೂ 1.5 ಲಕ್ಷ ರೂ. ದೇಣಿಗೆಯನ್ನು ಘೋಷಿಸಿದರು.

ಎಸ್‌ಸಿಡಿಸಿಸಿ ಬ್ಯಾಂಕಿನ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು ಶಿಶು ಮಂದಿರದ ನಿರ್ಮಾಣಕ್ಕೆ ವೈಯಕ್ತಿಕ ನೆಲೆಯಲ್ಲಿ 50,000 ರೂ. ದೇಣಿಗೆಯನ್ನು ಘೋಷಿಸಿದರು.

ನೂತನ ಕೊಠಡಿಗಳನ್ನು ಶಾಲಾ ಆಡಳಿತ ಮಂಡಳಿಯ ಸದಸ್ಯ ಚಂದು ಕೂಡ್ಲು ಶ್ರೀನಿವಾಸ್ ಭಟ್ ಉದ್ಘಾಟಿಸಿದರು. ಕಂಪ್ಯೂಟರ್ ತರಗತಿಯನ್ನು ಕರುಣಾಕರ ಶೆಟ್ಟಿ ಕೊಮ್ಮಂಡ ದೀಪ ಬೆಳಗಿಸಿ ಉದ್ಘಾಟಿಸಿದರು.

ಶಾಲಾ ಸಂಚಾಲಕ ಶಶಿಕುಮಾರ್ ಬೈಲಾಡಿಯವರ ವಿವಾಹದ 25ನೆ ವರ್ಷದ ಸವಿ ನೆನಪಿಗಾಗಿ ಅವರ ಕೊಡುಗೆಯಾಗಿ ತುಳಸಿ ಕಟ್ಟೆಗೆ ಶಿಲಾನ್ಯಾಸ ನೆರವೇರಿಸಲಾಯಿತು.

ಉಪ್ಪಿನಂಗಡಿ ಹವ್ಯಕ ಮಂಡಳಿ ಕಾರ್ಯದರ್ಶಿ ಅಶೋಕ್ ಕೆದ್ಲ, ಶಿಶು ಮಂದಿರ ಕಟ್ಟಡ ಸಮಿತಿಯ ಅಧ್ಯಕ್ಷೆ ಪ್ರಸನ್ನ ಉಪಸ್ಥಿತರಿದ್ದರು.

ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ರಂಗನಾಥ ರೈ ಗುತ್ತು ಸ್ವಾಗತಿಸಿದರು. ಶಾಲಾ ಸಹ ಶಿಕ್ಷಕಿ ರಮ್ಯಾ ಸಂದೇಶ ವಾಚನ ಮಾಡಿದರು. ರಾಧಾಕೃಷ್ಣ ರೈ ಪಟ್ಟೆ ವಂದಿಸಿ ಶಾಲಾ ಮುಖ್ಯ ಗುರು ರಾಜೇಶ್ ನೆಲ್ಲತ್ತಡ್ಕ ಹಾಗೂ ಅರವಿಂದ ಡಿ. ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News