ದಶಕದಿಂದ ಸೂರಿಲ್ಲದೆ ಸೊರಗಿದ ಕೊರಗ ಕುಟುಂಬ
ಬೆಳ್ತಂಗಡಿ, ಜು.14: ಚಾರ್ಮಾಡಿ ಗ್ರಾಮದ ಗಾಂಧಿ ನಗರ ಕೊರಗರ ಕಾಲನಿಯಲ್ಲಿ ಕೊರಗ ಕುಟುಂಬ ವೊಂದು ಒಂದು ದಶಕದಿಂದ ಮನೆಯಿಲ್ಲದೆ ಪ್ಲಾಸ್ಟಿಕ್ ಟರ್ಪಾಲ್‌ನ ಅಡಿಯಲ್ಲಿ ಜೀವನ ಸಾಗಿಸುತ್ತಿದ್ದು, ತಮಗೂ ಒಂದು ಮನೆ ಬೇಕು ಎಂಬ ಇವರ ಬೇಡಿಕೆ ಇನ್ನೂ ಈಡೇರಿಲ್ಲ. ಸರಕಾರದ ಎಲ್ಲ ಅಧಿಕಾರಿಗಳೂ ಈ ಕೊರಗರ ಕಾಲನಿಗೆ ಬಂದು ಹೋಗಿದ್ದರೂ ಇವರ ಕರುಣಾಜನಕ ಬದುಕು ಮಾತ್ರ ಯಾರ ಕಣ್ಣಿಗೂ ಬಿದ್ದಿಲ್ಲ.
ಕುಂಡ ಕೊರಗ, ಸಹೋದರ ಬಾಬು ಹಾಗೂ ಸಹೋದರಿ ಚಂದ್ರಾವತಿ ಈ ಮನೆಯಲ್ಲಿ ವಾಸವಾಗಿದ್ದಾರೆ. ಕೊರಗರ ಕಾಲನಿಯಲ್ಲಿ ಏಳು ಮನೆಗಳಿದ್ದು, ಒಂದರ ಗೋಡೆಗೆ ತಾಗಿರುವಂತೆ ಮನೆಗಳನ್ನು ನಿರ್ಮಿಸಲಾಗಿದೆ. ಆದರೆ ಕುಂಡ ಕೊರಗ ಅವರಿಗೆ ಮಾತ್ರ ಇನ್ನೂ ಮನೆ ದೊರೆತಿಲ್ಲ. ಮಳೆ ಬಂದರೆ ಇವರು ಕಟ್ಟಿರುವ ಪ್ಲಾಸ್ಟಿಕ್ ಡೇರೆಯೊಳಗೆ ನೀರು ಸಂಪೂರ್ಣವಾಗಿ ನುಗ್ಗುತ್ತದೆ. ಸಂಪೂರ್ಣ ಸ್ವಚ್ಛ ಗ್ರಾಮವಾಗಿದ್ದರೂ ಇವರಿಗೆ ಶೌಚಾಲಯವೇ ಇಲ್ಲ. ಮನೆಯೇ ಇಲ್ಲದ ಮೇಲೆ ಎಲ್ಲಿಯ ಶೌಚಾಲಯ? ಎನ್ನುತ್ತಾರೆ ಇವರು.
ಕೊರಗರ ಕಾಲನಿಯ ನಡುವೆ ಇರುವ ಜೋಪಡಿಯಲ್ಲಿ ಒಂದು ದಶಕದಿಂದೀಚೆಗೆ ಇವರ ಬದುಕು ಸಾಗಿದೆ. ಮನೆ, ಜಮೀನು ಇಲ್ಲದ ಇವರ ಗುಡಿಸಲಿಗೆ ಯಾವುದೇ ದಾಖಲೆಗಳಿಲ್ಲ, ಪಡಿತರ ಚೀಟಿಯೂ ಇಲ್ಲ. ಆದರೆ ಮತದಾನ ಮಾಡುವ ಹಕ್ಕು ಮಾತ್ರ ಇವರಿಗಿದೆ. ಮತದಾರರ ಗುರುತಿನ ಚೀಟಿಯ ಏಕಮಾತ್ರ ದಾಖಲೆ ನೀಡಿ ರುವ ಗ್ರಾಪಂ ಹಾಗೂ ಸರಕಾರ ಈ ಕುಟುಂಬಕ್ಕೆ ಮತ್ತೇನನ್ನೂ ನೀಡಿಲ್ಲ.
ಕೂಲಿ ಕೆಲಸದಿಂದ ಬರುವ ವರಮಾನ ಸಾಕಾಗದ ಕಾರಣ ಬುಟ್ಟಿ ಕಟ್ಟುವ ಕೆಲಸವನ್ನೂ ಮಾಡುತ್ತಾರೆ ಈ ಕುಟುಂಬಸ್ಥರು. ಇನ್ನೂ ಅವಿವಾಹಿತರಾಗಿಯೇ ಬದುಕನ್ನು ನಡೆಸುತ್ತಿರುವ ಇವರ ಬದುಕು ಅತ್ಯಂತ ಶೋಚನೀಯವಾಗಿದೆ. ಪಡಿತರ ಚೀಟಿಯೂ ಇಲ್ಲದಿರುವುದರಿಂದ ಸರಕಾರದಿಂದ ಮೂಲನಿವಾಸಿಗಳಿಗೆ ಸಿಗುವ ಆಹಾರವೇ ಇವರಿಗೆ ಆಸರೆಯಾಗಿದೆ. ಇದು ಸರಿಯಾಗಿ ಬಂದಿಲ್ಲ ಎಂದಾದರೆ ಇವರ ಬದುಕು ಮತ್ತಷ್ಟು ದುಸ್ತರವಾಗುತ್ತದೆ. ಈ ಎಲ್ಲಾ ಕೊರತೆಗಳ ನಡುವೆಯೂ ಸ್ವಾಭಿಮಾನದ ಬದುಕು ನಡೆಸುತ್ತಿರುವ ಕುಂಡ ಕೊರಗರ ಮನೆಯವರ ಸಮಸ್ಯೆಗಳು ಇನ್ನಾದರೂ ಅಧಿಕಾರಿಗಳ, ರಾಜಕಾರಣಿಗಳ ಕಣ್ಣಿಗೆ ಬೀಳಬಹುದೇ ಎಂದು ಕಾದು ನೋಡಬೇಕಿದೆ.
ಕೊರಗರ ಅಭಿವೃದ್ಧಿಗಾಗಿ ಸರಕಾರಗಳು ಹತ್ತಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದ್ದರೂ ಇಂತಹ ಕುಟುಂಬಗಳು ಇನ್ನೂ ಮೂಲಸೌಕರ್ಯಗಳಿಂದ ವಂಚಿತವಾಗಿವೆ ಎಂಬುದು ದುರಂತ. ಈಗಿನ ಸರಕಾರದ ಕಾನೂನಿನಂತೆ ಕೊರಗ ಸಮುದಾಯದವರಿಗೆ ಮನೆ ಮಾಡಿಕೊಡಲು ಎಲ್ಲ ರೀತಿಯ ಅವಕಾಶಗಳೂ ಇದೆ. ಅವರ ಹೆಸರಿನಲ್ಲಿ ಜಮೀನು ಇಲ್ಲದಿದ್ದರೂ ಸರಕಾರಿ ಜಮೀನು ಇದ್ದರೆ ಅದರಲ್ಲಿಯೇ ಮನೆ ಮಾಡಿ ಕೊಡಬಹುದಾಗಿದೆ. ಆದರೆ ಕುಂಡ ಕೊರಗ ಅವರು ಒಂದು ದಶಕಕ್ಕೂ ಅಧಿಕ ಸಮಯದಿಂದ ಜೋಪಡಿಯಲ್ಲಿ ವಾಸಿಸುತ್ತಿದ್ದಾರೆ. ಸರಕಾರ ಕೂಡಲೇ ಈ ಬಗ್ಗೆ ಕ್ರಮ ಕೈಗೊಳ್ಳಬೇಕಾಗಿದೆ.
-ಶೇಖರ ಲಾಯಿಲ, ದಲಿತ ಮುಖಂಡರು, ಬೆಳ್ತಂಗಡಿ.
ಕೊರಗರ ಅಭಿವೃದ್ಧಿಗೆ ಅನುದಾನದ ಕೊರತೆಯಿಲ್ಲ. ತಾಲೂಕಿನಲ್ಲಿ ಹಲವೆಡೆ ಕೊರಗರಿಗೆ ಮನೆ ನಿರ್ಮಾಣದ ಕಾರ್ಯ ನಡೆಯುತ್ತಿದೆ. ಚಾರ್ಮಾಡಿಯ ಕುಂಡ ಕೊರಗ ಅವರ ವಿಚಾರವನ್ನು ಪರಿಶೀಲಿಸಿ ಅಲ್ಲಿಗೆ ಭೇಟಿ ನೀಡಿ ಮನೆ ಒದಗಿಸಲು ಕ್ರಮ ಕೈಗೊಳ್ಳುತ್ತೇನೆ.-ತಾಲೂಕು ಸಮಾಜ ಕಲ್ಯಾಣ ಅಧಿಕಾರಿ