ನಾಳೆ ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜಿನ ಸ್ವರ್ಣ ಮಹೋತ್ಸವ ಉದ್ಘಾಟನೆ

Update: 2016-07-14 18:23 GMT

ಉಡುಪಿ, ಜು.14: ಕಲ್ಯಾಣಪುರ ಮಿಲಾಗ್ರಿಸ್ ಪದವಿ ಹಾಗೂ ಪದವಿ ಪೂರ್ವ ಕಾಲೇಜಿನ ಸ್ವರ್ಣ ಮಹೋತ್ಸವ ವರ್ಷದ ಉದ್ಘಾಟನಾ ಸಮಾರಂಭವನ್ನು ಜು.16ರಂದು ಬೆಳಗ್ಗೆ 10:30ಕ್ಕೆ ಕಾಲೇಜಿನ ಮಿಲಾಗ್ರಿಸ್ ತ್ರಿಶತಮಾನೋತ್ಸವ ಸಭಾಂಗಣದಲ್ಲಿ ಆಯೋಜಿಸಲಾಗಿದೆ.
ಧರ್ಮಗುರು ಫಾ.ಡಿ.ಜೆ.ಡಿಸೋಜ 1967ರಲ್ಲಿ ಕಲೆ ಹಾಗೂ ವಾಣಿಜ್ಯ ವಿಭಾಗಗಳೊಂದಿಗೆ ಆರಂಭಿಸಿರುವ ಈ ಕಾಲೇಜಿನಲ್ಲಿ 1981ರಲ್ಲಿ ಅ.ವಂ. ಗ್ರೆಗೋರಿ ಡಿಕ್ರೂಜ್ ವಿಜ್ಞಾನ ವಿಭಾಗವನ್ನು ಪ್ರಾರಂಭಿಸಿದರು. 2010ರಲ್ಲಿ ಪದವಿ ವಿಭಾಗಗಳಾದ ಬಿಬಿಎಂ, ಬಿಸಿಎ ಹಾಗೂ ಸ್ನಾತಕೋತ್ತರ ವಿಭಾಗ ಎಂಎಸ್‌ಡಬ್ಲುವನ್ನು ಆರಂಭಿಸಲಾಯಿತು. ಪ್ರಸ್ತುತ ಕಾಲೇಜಿನಲ್ಲಿ ಎಂಕಾಂ ವಿಭಾಗ ಕೂಡ ಇದೆ ಎಂದು ಕಾಲೇಜಿನ ಸಂಚಾಲಕ ಸ್ಟಾನಿ ಬಿ.ಲೋಬೊ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ಕಾಲೇಜಿನಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳ ಆರ್ಥಿಕ ಸಹಾಯಕ್ಕಾಗಿ ಸುವರ್ಣ ಮಹೋತ್ಸವ ನಿಧಿಯನ್ನು ಸ್ಥಾಪಿಸಲಾಗಿದ್ದು, ಈಗಾಗಲೇ 3 ಲಕ್ಷ ರೂ. ಕ್ರೋಡೀಕರಿಸಲಾಗಿದೆ. ಒಂದು ಕೋಟಿ ನಿಧಿ ಸಂಗ್ರಹಿಸುವ ಗುರಿ ಹೊಂದಲಾಗಿದೆ. ಸುವರ್ಣ ಮಹೋತ್ಸವದ ಅಂಗವಾಗಿ ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ, ಹೆತ್ತವರಿಗೆ, ಹಳೆ ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಸ್ವರ್ಣ ಮಹೋತ್ಸವ ವರ್ಷವನ್ನು ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಉದ್ಘಾಟಿಸಲಿರುವರು. ಅಧ್ಯಕ್ಷತೆಯನ್ನು ಉಡುಪಿ ಧರ್ಮ ಕ್ಷೇತ್ರದ ಧರ್ಮಾಧ್ಯಕ್ಷ ಅ.ವಂ.ಡಾ.ಜೆರಾಲ್ಡ್ ಐಸಾಕ್ ಲೋಬೊ ವಹಿಸಲಿರುವರು ಎಂದವರು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ.ಜೆರಾಲ್ಡ್ ಪಿಂಟೊ, ಕ್ಯಾಂಪಸ್ ನಿರ್ದೇಶಕ ಡಾ.ಪ್ರಕಾಶ್ ಅನಿಲ್ ಕ್ಯಾಸ್ತಲಿನೊ, ಪ್ರೊ.ಸಿರಿಲ್ ಮಥಾಯಸ್, ಪ್ರೊ.ಜೋಸೆಫ್ ಫೆರ್ನಾಂಡಿಸ್, ಹೆರಾಲ್ಡ್ ಮೊನಿಸ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News