ತಲೆಮರೆಸಿಕೊಂಡಿದ್ದ ಕಳವು ಆರೋಪಿಯ ಸೆರೆ

Update: 2016-07-14 18:27 GMT

ಪಡುಬಿದ್ರೆ, ಜು.14: ಹಲವು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ ಆರೋಪಿಯೊಬ್ಬನನ್ನು ಪಡುಬಿದ್ರೆ ಪೊಲೀಸರು ಸಂಶಯದ ಹಿನ್ನೆಲೆಯಲ್ಲಿ ಬಂಧಿಸಿದ್ದು, ವಿಚಾರಣೆಯ ವೇಳೆ ಆತ ವಿವಿಧ ಕಳವು ಪ್ರಕರಣಗಳಲ್ಲಿ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ. ಮಂಜರಬೆಟ್ಟು ನಿವಾಸಿ ರಾಜೇಶ್ ಬಂಧಿತ ಆರೋಪಿ. ಈತನಿಂದ 20 ಸಾವಿರ ರೂ. ವೌಲ್ಯದ ಬೈಕ್, ಒಂದು ಕಬ್ಬಿಣದ ರಾಡ್, ಮೊಬೈಲ್ ಫೋನ್ ಹಾಗೂ 20 ಸಾವಿರ ರೂ. ವೌಲ್ಯದ ಕರಿಮಣಿ ಸರವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈತನನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಜು.11ರಂದು ಉಚ್ಚಿಲದ ಮುಳ್ಳಗುಡ್ಡೆಯ ಬಾಡಿಗೆ ಮನೆಯ ನಿವಾಸಿ ರಝಾಕ್ ಎಂಬವರ ಮನೆಯಿಂದ 4,040 ರೂ., ಜು.6ರಂದು ಪೊಲ್ಯ ಮದ್ರಸದ ಬಳಿಯ ಮನೆಯೊಂದರಿಂದ 18 ಸಾವಿರ ರೂ., ಒಂದೂವರೆ ಪವನ್ ತೂಕದ ಒಂದು ಕರಿಮಣಿ ಸರ, ಮೂರು ಸಾವಿರ ಬೆಲೆಯ ಚಿನ್ನದ ಉಂಗುರ, ಮೊಬೈಲ್ ಫೋನ್ ಕಳವುಗೈಯಲಾಗಿತ್ತು. ಈ ಎರಡು ಪ್ರಕರಣಗಳ ಬಗ್ಗೆ ಪಡುಬಿದ್ರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಶಂಕಾಸ್ಪದವಾಗಿ ತಿರುಗಾಡುತ್ತಿದ್ದ ರಾಜೇಶ್‌ನನ್ನು ಉಚ್ಚಿಲದ ಮುಳ್ಳಗುಡ್ಡೆಯಲ್ಲಿ ಬಂಧಿಸಿ ವಿಚಾರಣೆಗೊಳಪಡಿಸಿದಾಗ ಈ ಕಳವು ಪ್ರಕರಣಗಳು ಬಯಲಾದವು. ಇದಲ್ಲದೆ ಈತನ ಮೇಲೆ ಮುದರಂಗಡಿಯ ಶಿರ್ವ ಠಾಣಾ ವ್ಯಾಪ್ತಿಯ ಮನೆಯೊಂದರಿಂದ ಟಿವಿ ಮತ್ತು ಕಂಪ್ಯೂಟರ್ ಕಳವುಗೈದ ಪ್ರಕರಣ ದಾಖಲಾಗಿದೆ. 2013ರಲ್ಲಿ ಉಚ್ಚಿಲದ ಮುಳ್ಳಗುಡ್ಡೆಯ ಮನೆಯೊಂದರಲ್ಲಿ 12 ಪವನ್ ಚಿನ್ನ ಕದ್ದ ಪ್ರಕರಣದಲ್ಲಿ ಸೆರೆಯಾಗಿದ್ದನು. ಸಾಂತೂರು ಮಿಷನ್ ಕಾಂಪೌಂಡ್‌ನ ಮನೆಯಿಂದ ಚಿನ್ನಾಭರಣ ಕಳವು ಪ್ರಕರಣದಲ್ಲಿ ಬಂಧಿತನಾಗಿದ್ದ ಈತ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದನು. ಈ ಕಾರ್ಯಾಚರಣೆಯಲ್ಲಿ ಎಸ್ಸೈ ಅಝ್ಮತ್ ಅಲಿ, ಎಎಸ್ಸೈ ರಮೇಶ್, ಹರೀಶ್ ಬಾಬು, ಮಣಿಯಾಣಿ, ಪ್ರದೀಪ್, ದಿಲೀಪ್, ಭಾಸ್ಕರ, ಯೋಗೀಶ್, ರಘುವೀರ್, ಪ್ರವೀಣ್, ರಘು, ರಾಘವೇಂದ್ರ ಕಾರ್ಯಾಚರಣೆಯಲ್ಲಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News