ಚಾರ್ಮಾಡಿ: ಕುಂಡ ಕೊರಗರ ಮನೆಗೆ ಜನಪ್ರತಿನಿಧಿಗಳು, ಅಧಿಕಾರಿಗಳ ಭೇಟಿ

Update: 2016-07-15 14:10 GMT

ಬೆಳ್ತಂಗಡಿ, ಜು.15: ಚಾರ್ಮಾಡಿ ಗ್ರಾಮದ ಗಾಂಧೀನಗರದಲ್ಲಿ ಪ್ಲಾಸ್ಟಿಕ್ ಡೇರೆಯೊಳಗೆ ಬದುಕನ್ನು ನಡೆಸುತ್ತಿರುವ ಕುಂಡ ಕೊರಗ ಅವರ ಮನೆಗೆ ಶುಕ್ರವಾರ ಉಜಿರೆ ಜಿಲ್ಲಾ ಪಂಚಾಯತ್ ಸದಸ್ಯೆ ನಮಿತಾ, ಅಳದಂಗಡಿ ಜಿ.ಪಂ. ಸದಸ್ಯ ಹಾಗೂ ಜಿ.ಪಂ. ಸಾಮಾಜಿಕ ನ್ಯಾಯ ಸಮಿತಿ ಸದಸ್ಯ ಶೇಖರ ಕುಕ್ಕೇಡಿ, ಚಾರ್ಮಾಡಿ ಗ್ರಾ.ಪಂ. ಅಧ್ಯಕ್ಷೆ ಶೈಲಜಾ, ತಾಲೂಕು ಸಮಾಜ ಕಲ್ಯಾಣಾಧಿಕಾರಿ ಮೋಹನ್ ಕುಮಾರ್ ಹಾಗೂ ಇತರ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಐಟಿಡಿಪಿ ಇಲಾಖೆಯ ಸಹಯೋಗದಲ್ಲಿ ಕೂಡಲೇ ಈ ಕುಟುಂಬಕ್ಕೆ ಮನೆ ನಿರ್ಮಿಸಿ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಶುಕ್ರವಾರ ‘ವಾರ್ತಾಭಾರತಿ.ಇನ್’ಯಲ್ಲಿ ಪ್ರಕಟವಾಗಿದ್ದ ವರದಿಯನ್ನು ಗಮನಿಸಿ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಗಾಂಧೀನಗರ ಕೊರಗರ ಕಾಲನಿಗೆ ಭೇಟಿ ನೀಡಿದ್ದರು.

ಯಾವ ಕಾರಣಕ್ಕಾಗಿ ಕುಂಡ ಕೊರಗ ಮತ್ತು ಕುಟುಂಬಕ್ಕೆ ಮನೆ ನೀಡಲಾಗಿಲ್ಲ ಎಂಬ ಪ್ರಶ್ನೆಗೆ ಅಧಿಕಾರಿಗಳ ಬಳಿ ಯಾವುದೇ ಉತ್ತರವಿರಲಿಲ್ಲ. ಅವರಿಗೆ ಮನೆ ಮಂಜೂರು ಮಾಡಿದ್ದೇವೆ. ಆದರೆ ಬ್ಯಾಂಕ್ ಖಾತೆಯಿಲ್ಲ, ಮನೆ ಕಟ್ಟಲು ಮುಂದೆ ಬರುವುದಿಲ್ಲ ಎಂಬ ಸಬೂಬನ್ನು ಗ್ರಾಮ ಪಂಚಾಯತ್ ಅಧಿಕಾರಿಗಳು ನೀಡಲು ಮುಂದಾದರೂ ಇದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಜಿ.ಪಂ. ಸದಸ್ಯ ಶೇಖರ ಕುಕ್ಕೇಡಿ, ಅವರಿಗೆ ಈ ಬಗ್ಗೆ ಮಾಹಿತಿಯಿಲ್ಲ,  ಹಣ ನೀಡಿದರೂ ಮನೆ ಕಟ್ಟುವ ಶಕ್ತಿಯೂ ಅವರಿಗಿಲ್ಲ ಎಂದೇ ಸಮಾಜ ಕಲ್ಯಾಣ ಇಲಾಖೆಯ ಐಟಿಡಿಪಿಯ ಅಧಿಕಾರಿಗಳಿರುವುದು. ಅತ್ಯಂತ ಹಿಂದುಳಿದ ಕೊರಗ ಸಮುದಾಯದ ಅಭಿವೃದ್ದಿಗೆ ಸರಕಾರ ಎಲ್ಲ ಸೌಲಭ್ಯಗಳನ್ನು ಒದಗಿಸಿದ್ದು ಅನುದಾನವೂ ಇದೆ. ಆದರೆ ಅಧಿಕಾರಿಗಳ ಅಸಮರ್ಪಕ ಕಾರ್ಯನಿರ್ವಹಣೆಯಿಂದಾಗಿ ಇನ್ನೂ ಕೊರಗರು ಇಂತಹ ಮನೆಗಳಲ್ಲಿ ಬದುಕಬೇಕಾಗಿ ಬರುತ್ತಿದೆ ಎಂದು ತರಾಟೆಗೆ ತೆಗೆದುಕೊಂಡರು.

ಜಿಲ್ಲಾ ಐಟಿಡಿಪಿ ಅಧಿಕಾರಿಯೊಂದಿಗೆ ಮಾತನಾಡಿದ ಜಿ.ಪಂ. ಸದಸ್ಯರು, ಕುಂಡ ಕೊರಗ ಅವರಿಗೆ ಕೂಡಲೇ ಮನೆ ನಿರ್ಮಿಸಿ ಕೊಡಲು ವ್ಯವಸ್ಥೆ ಮಾಡುವಂತೆ ಸೂಚಿಸಿದರು. ಅವರು ಮನೆ ಕಟ್ಟುವಷ್ಟು ಶಕ್ತರಲ್ಲದಿದ್ದರೆ ಕೂಡಲೆ ಯಾವುದಾದರೂ ಏಜೆನ್ಸಿಗಳ ಮೂಲಕ ಮನೆ ನಿರ್ಮಾಣದ ಕಾರ್ಯವನ್ನು ಮಾಡುವಂತೆ ಸೂಚಿಸಿದರು. ಮನೆ ನಿರ್ಮಾಣದ ಜವಾಬ್ದಾರಿಯನ್ನು ಗ್ರಾಮ ಪಂಚಾಯತೇ ವಹಿಸಿಕೊಂಡು ಮನೆ ನಿರ್ಮಿಸಿಕೊಡುವ ಭರವಸೆಯನ್ನು ಅಧಿಕಾರಿಗಳು ನೀಡಿದರು. ತಕ್ಷಣದಿಂದಲೇ ಮನೆಕೆಲಸಕ್ಕೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಸಮಾಜ ಕಲ್ಯಾಣ ಇಲಾಖಾಧಿಕಾರಿಗಳು ತಿಳಿಸಿದರು.

ಕೊರಗರ ಕಾಲನಿಯ ಇತರ ಮನೆಗಳಿಗೂ ಭೇಟಿ ನೀಡಿದ ಸದಸ್ಯರು ಅವರ ಸಮಸ್ಯೆಗಳನ್ನು ಆಲಿಸಿದರು.

ಈ ಸಂದರ್ಭ ಚಾರ್ಮಾಡಿ ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಪ್ರಕಾಶ್ ಶೆಟ್ಟಿ, ನೆರಿಯ ಗ್ರಾ.ಪಂ ಸದಸ್ಯ ಅಶ್ರಫ್, ದಲಿತ ಮುಖಂಡ ಶೇಖರ ಲಾಯಿಲ ಮತ್ತಿತರರು ಉಪಸ್ಥಿತರಿದ್ದರು.

ಇದಿಗ ನರಕಸದೃಶ್ಯ ಬದುಕು ನಡೆಸುತ್ತಿರುವ ಕೊರಗ ಕುಟುಂಬಕ್ಕೆ ಮನೆ ನಿರ್ಮಿಸುವ ಭರವಸೆ ದೊರೆತಿದೆ. ಆದರೆ ಈ ಅಧಿಕಾರಿಗಳು ಅದನ್ನು ಸಾಕಾರಗೊಳಿಸುವರೇ ಎಂದು ಕಾದು ನೋಡಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News