ಸುಳ್ಯ ಪೊಲೀಸ್ ಠಾಣೆಯಲ್ಲಿ ಜಿಲ್ಲಾ ಮಟ್ಟದ ಎಸ್ಸಿ-ಎಸ್ಟಿ ಕುಂದುಕೊರತೆ ಸಭೆ

Update: 2016-07-15 09:45 GMT

ಸುಳ್ಯ, ಜು.15: ಜಿಲ್ಲಾ ಮಟ್ಟದ ಎಸ್ಸಿ-ಎಸ್ಟಿ ಕುಂದುಕೊರತೆ ಸಭೆಯು ಎಸ್ಪಿ ಭೂಷಣ್ ಗುಲಾಬ್‌ರಾವ್ ಬೊರಸೆ ಅಧ್ಯಕ್ಷತೆಯಲ್ಲಿ ಸುಳ್ಯ ಪೊಲೀಸ್ ಠಾಣೆಯಲ್ಲಿ ನಡೆಯಿತು.

ಕೆಲವರು ಅನಾಮಧೇಯ ಪತ್ರವನ್ನು ಬರೆದು ಮಾನಹಾನಿ ಮಾಡುವುದಲ್ಲದೇ, ಅಧಿಕಾರಿಗಳಿಗೆ ಬೆದರಿಕೆಯನ್ನು ಒಡ್ಡುತ್ತಿದ್ದಾರೆ. ಅವರಿಂದ ದುಡ್ಡು ವಸೂಲು ಮಾಡುವ ದಂಧೆಯೊಂದು ನಡೆಯುತ್ತಿದೆ. ಈ ಕುರಿತು ಕ್ರಮ ಕೈಗೊಳ್ಳಬೇಕು ಎಂದು ನಂದರಾಜ್ ಸಂಕೇಶ್ ಒತ್ತಾಯಿಸಿದರು.

6 ತಿಂಗಳ ಹಿಂದೆ ಒಬ್ಬರು ನಿಧನರಾಗಿದ್ದು ಇದೀಗ ಅನಾಮಧೇಯ ಅರ್ಜಿಗಳು ಬರುತ್ತಿದೆ. ಈ ಕುರಿತು ತನಿಖೆ ನಡೆಸುವಂತೆ ಆನಂದ ಬೆಳ್ಳಾರೆ ಒತ್ತಾಯಿಸಿದರು. ಬಳಿಕ ಮಾತನಾಡಿದ ಎಸ್ಪಿ, ಅನಾಮಧೇಯ ಪತ್ರದಿಂದ ಎಲ್ಲವೂ ಕೆಟ್ಟದ್ದೇ ಆಗುತ್ತದೆ ಎಂದು ಹೇಳುವುದು ಸರಿಯಲ್ಲ. ಒಳ್ಳೆಯದೂ ಆಗುತ್ತದೆ. ಮಂಡ್ಯದಲ್ಲಿ ಒಂದು ಮರ್ಡರ್ ಆಗಿತ್ತು. ಆರಂಭದಲ್ಲಿ ಸಹಜ ಸಾವು ಎಂದು ಹೇಳಲಾಗಿತ್ತಾದರೂ ಬಳಿಕ ಬಂದ ಪತ್ರವೊಂದನ್ನು ಆಧಾರವಾಗಿಟ್ಟು ತನಿಖೆ ನಡೆಸಿದಾಗ ಅದು ಮರ್ಡರ್ ಎಂಬುದು ಗೊತ್ತಾಗಿದೆ ಎಂದು ಹೇಳಿದರು.

ಅಜ್ಜಾವರದಲ್ಲಿ ಪಂಚಾಯತ್‌ನಿಂದ ಸಭಾಭವನ ಆಗಿದೆ. ಆದರೆ, ಆ ಜಾಗದಲ್ಲಿ ಗಣಿಗಾರಿಕೆಯೂ ಮೊದಲು ನಡೆದಿದೆ. ಪಂಚಾಯತ್ ಜಾಗದಲ್ಲಿ ನಡೆದ ಗಣಿಗಾರಿಕೆಯ ಲಾಭ ಪಂಚಾಯತ್‌ಗೆ ಸೇರಿಲ್ಲ. ಅದು ಎಲ್ಲಿಗೆ ಹೋಗಿ, ಯಾರ ಕೈ ಸೇರಿದೆ ಎನ್ನುವುದರ ಕುರಿತು ತನಿಖೆ ನಡೆಸುವಂತೆ ದಾಸಪ್ಪ ಒತ್ತಾಯಿಸಿದರು. ಎಸ್ಸಿ, ಎಸ್ಟಿಯವರಿಗೆ ಬಿಪಿಎಲ್ ಕಾರ್ಡ್ ನೀಡುವಾಗ ಆದಾಯ ಮಿತಿ ನೋಡಬಾರದು. ಎಲ್ಲರಿಗೂ ಬಿಪಿಎಲ್ ಕಾರ್ಡ್ ನೀಡುವಂತಾಗಬೇಕು ಎಂದು ಅವರು ಹೇಳಿದರು.

ಮೇನಾಲದಲ್ಲಿ ಇತ್ತೀಚೆಗೆ ಹಿಂದೂ ಸಮಾವೇಶ ನಡೆದಿರುವುದು ಸಂತೋಷ. ಆದರೆ ಆಗ ಆ ಮೈದಾನಕ್ಕೆ ಡಾ.ಬಿ.ಆರ್.ಅಂಬೇಡ್ಕರ್‌ರ ಹೆಸರನ್ನು ಇಡಲಾಗಿತ್ತು. ಇದೀಗ ಆ ಜಾಗ ಮೇನಾಲ ಕುಟುಂಬಕ್ಕೆ ಸೇರಿದ್ದು ಎಂದು ಹೇಳುತ್ತಿದ್ದಾರೆ. ಆದ್ದರಿಂದ ಆ ಜಾಗ ಎಸ್ಸಿ -ಎಸ್ಟಿಯವರಿಗೆ ಅನುಕೂಲವಾಗುವಂತೆ ಇರಬೇಕು. ಇತ್ತೀಚೆಗೆ ಎಸಿಯವರು ಕೂಡಾ ಆ ಜಾಗವನ್ನು ಕಾನ ಜಾಗ ಎಂದು ಹೇಳಿದ್ದಾರೆ ಎಂದು ಅವರು ಒತ್ತಾಯಿಸಿದರು.

ಸುಳ್ಯದ ಅಂಬೇಡ್ಕರ್ ಭವನದ ಕೆಲಸ ಅರ್ಧಕ್ಕೆ ನಿಂತಿದೆ. ಸರಕಾರದಿಂದ ಅನುದಾನ ಬಂದು ಆದಷ್ಟು ಶೀಘ್ರದಲ್ಲಿ ಅಂಬೇಡ್ಕರ್ ಭವನ ಆಗುವಂತಾಗಬೇಕು ಎಂದು ಕೆ.ಎಂ.ಬಾಬು ಹೇಳಿದರು. ಎಸ್‌ಸಿ ಎಸ್‌ಟಿ ಸಭೆಯಲ್ಲಿ ಹೆಚ್ಚಿನ ಭಾಗ 94 ಸಿ ವಿಚಾರದಲ್ಲೇ ಚರ್ಚೆಗಳು ನಡೆದವು. ವಿಷಯ ಪ್ರಸ್ತಾಪಿಸಿದ ಕೆ.ಎಂ. ಬಾಬು ಜಾಲ್ಸೂರು ಹಾಗೂ ದಾಸಪ್ಪಬೀರಮಂಗಲ, 94 ಸಿ ಯೋಜನೆಯಲ್ಲಿ ದುಡ್ಡಿದ್ದವರಿಗೆ ಮಾತ್ರ ಕಂದಾಯ ಇಲಾಖೆ ಹಕ್ಕು ಪತ್ರ ನೀಡಿದೆ. ದುಡ್ಡಿಲ್ಲದವರ ಅರ್ಜಿಗಳು ಹಾಗೆಯೇ ಇದೆ. ತಾಲೂಕು ಕಚೇರಿಯಲ್ಲಿ ಲಂಚ ಅಧಿಕಾರಿಗಳಿಗೆ ದುಡ್ಡು ನೀಡದಿದ್ದರೆ ಈ ಕೆಲಸವನ್ನೇ ಮಾಡುವುದಿಲ್ಲ. 5 ಜಾಗಕ್ಕೆ ಸೆಂಟ್ಸ್ ಹಕ್ಕುಪತ್ರ ನೀಡಲು 5ರಿಂದ 50 ಸಾವಿರ ರೂ. ತನಕ ಕೇಳುತ್ತಾರೆ ಎಂದು ಹೇಳಿದರು.

ಅವರ ಮಾತಿಗೆ ಸಭೆಯಲ್ಲಿದ್ದ ನಾಯಕರು ಧ್ವನಿಗೂಡಿಸಿ ಮಾತನಾಡಿದರು. ಗುತ್ತಿಗಾರು ಗ್ರಾ.ಪಂ. ಅಧ್ಯಕ್ಷ ಅಚ್ಯುತ ಗುತ್ತಿಗಾರು 94 ಸಿಯಲ್ಲಿ ಎಸ್ಸಿ ಜಾತಿ ಸರ್ಟಿಫಿಕೇಟ್ ಇಟ್ಟರೂ ಹೆಚ್ಚುವರಿ ಹಣ ಪಡೆದ ಉದಾಹರಣೆಗಳಿವೆ. ನಿಜವಾಗಿ ಎಷ್ಟು ಕಟ್ಟಬೇಕು ಎನ್ನುವ ಮಾಹಿತಿ ಬೇಕು ಎಂದು ಒತ್ತಾಯಿಸಿದರು.

ಆಗ ಸಭೆಯಲ್ಲಿದ್ದ ಉಪಪತಹಶಿಲ್ದಾರ್ ರಾಮಣ್ಣ ನಾಯ್ಕರು 94 ಸಿಗೆ ಎಲ್ಲರಿಗೂ ಎಷ್ಟು ಹಣ ಕಟ್ಟಲು ಬರುತ್ತದೋ ಅದರ ಅರ್ಧದಷ್ಟು ಮಾತ್ರ ಎಸ್ಸಿ ಎಸ್ಟಿಯವರು ಕಟ್ಟಬೇಕು. ನಾವು ಎಲ್ಲಾ ಗ್ರಾ.ಪಂ. ವ್ಯಾಪ್ತಿಯಲ್ಲಿ 94 ಸಿ ಹಕ್ಕುಪತ್ರದ ಅದಾಲತ್ ನಡೆಸುತ್ತಿದ್ದೇವೆ ಎಂದು ಹೇಳಿದರು. ನೀವು ಪಂಚಾಯತ್‌ಗೆ ಬರುವುದೇ ಗೊತ್ತಾಗುವುದಿಲ್ಲ. ನಿಮ್ಮ ವಾಹನ ಪಂಚಾಯತ್ ಎದುರು ನಿಂತುದನ್ನು ನೋಡಿದಾಗಲೇ ಗೊತ್ತಾಗುವುದು. ಬರುವ ಮೊದಲು ಮಾಹಿತಿ ನೀಡಿದರೆ ನಮಗೂ ಗೊತ್ತಾಗುತ್ತದೆ ಎಂದು ಅಚ್ಯುತ ಗುತ್ತಿಗಾರು ಹೇಳಿದರು.

ಆನಂದ ಬೆಳ್ಳಾರೆ, ಸೀತಾನಂದ ಬೇರ್ಪಡ್ಕ, ಅಚ್ಯುತ ಮಲ್ಕಜೆ ಮೊದಲಾದವರು ಇದೇ ವಿಚಾರದಲ್ಲಿ ಮಾತನಾಡಿದರು. 94 ಸಿ ಒಳ್ಳೆಯ ಯೋಜನೆ ಅಲ್ಲ. ದಲಿತರು ಬೇರೆ ವರ್ಗದವರ ಜಾಗದಲ್ಲಿ ಕುಳಿತಿದ್ದರೇ ಆ ಜಾಗವನ್ನು 94ಸಿ ಅಡಿಯಲ್ಲಿ ಅವರಿಗೆ ಮಂಜೂರು ಮಾಡುವಂತಾಗಬೇಕು ಎಂದು ಸರಸ್ವತಿ ಬೊಳಿಯಮಜಲು ಒತ್ತಾಯಿಸಿದರು.

ಸುಬ್ರಹ್ಮಣ್ಯ ಠಾಣೆಗೆ ಸಬ್ ಇನ್‌ಸ್ಪೆಕ್ಟರ್‌ರನ್ನು ನೇಮಿಸುವಂತೆ ಆನಂದ ಬೆಳ್ಳಾರೆ, ಶಂಕರ ಪೆರಾಜೆ ಒತ್ತಾಯಿಸಿದರು. ಜಿಲ್ಲೆಯ ಇನ್ನು ಕೆಲವು ಕಡೆ ಎಸೈಗಳು ನೇಮಕವಾಗಬೇಕಿದೆ. ಇನ್ನು ಜಿಲ್ಲೆಗೆ ಎಸೈ ಬಂದಾಗ ಅವರನ್ನು ಸುಬ್ರಹ್ಮಣ್ಯಕ್ಕೆ ಬರುವಂತೆ ಮಾಡುವುದಾಗಿ ಎಸ್ಪಿಯವರು ಹೇಳಿದರು. ಕಡಬ ಕುಟ್ರಪ್ಪಾಡಿ ಎಂಬಲ್ಲಿ ಕಮಲ ಎಂಬ ಮಹಿಳೆಯೊಬ್ಬರ ಮೇಲೆ ಹೋಟೆಲ್ ಮಾಲಕರೊಬ್ಬರು ದೌರ್ಜನ್ಯ ಎಸಗಿರುವ ಕುರಿತು ದೂರು ನೀಡಿದರು ಕಡಬ ಎಸೈ ದೂರು ದಾಖಲಿಸದ ಕುರಿತು ಆನಂದ ಬೆಳ್ಳಾರೆ ಗಮನ ಸೆಳೆದರು. ಸಂಪಾಜೆಯಿಂದ ಗಡಿಕಲ್ಲು ತನಕ ರಸ್ತೆಯ ಬದಿಯಲ್ಲಿ ಬಿಎಸ್ಸೆನ್ನೆಲ್‌ನವರು ಗುಂಡಿ ತೋಡಿದ್ದು ಅದನ್ನು ಮುಚ್ಚಿಲ್ಲ. ಶಾಲಾ ಮಕ್ಕಳು ನಡೆದುಕೊಂಡು ಹೋಗುವ ದಾರಿ. ಇತ್ತೀಚೆಗೆ ದನಗಳೆರಡು ಈ ಗುಂಡಿಗೆ ಬಿದ್ದು ಸತ್ತಿವೆ. ಕ್ರಮ ಕೈಗೊಳ್ಳಿ ಎಂದು ವಿಜಯಕುಮಾರ್ ಒತ್ತಾಯಿಸಿದರು.

ಬಂಟ್ವಾಳ ಡಿವೈಎಸ್ಪಿ ಭಾಸ್ಕರ ರೈ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಸಂತೋಷ್, ಪುತ್ತೂರು ಸರ್ಕಲ್ ಇನ್‌ಸ್ಪೆಕ್ಟರ್ ಮಹೇಶ್ ಪ್ರಸಾದ್, ಸುಳ್ಯ ವೃತ್ತ ನಿರೀಕ್ಷಕ ವಿ.ಕೃಷ್ಣಯ್ಯ, ಸುಳ್ಯ ಎಸೈ ಚಂದ್ರಶೇಖರ್, ಸುಳ್ಯ ಸಮಾಜ ಕಲ್ಯಾಣಾಧಿಕಾರಿ ರಾಮಕೃಷ್ಣ ಭಟ್ ಮೊದಲಾದವರಿದ್ದರು.

ಸುಳ್ಯದಲ್ಲಿ ಟ್ರಾಫಿಕ್ ಪೊಲೀಸ್ ಠಾಣೆ

ಸುಳ್ಯದಲ್ಲಿ ಟ್ರಾಫಿಕ್ ಪೊಲೀಸ್ ಠಾಣೆ ಕುರಿತು ಸರಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೂಷಣ್ ಗುಲಾಬ್‌ರಾವ್ ಬೊರಸೆ ಹೇಳಿದ್ದಾರೆ.

ಸುಳ್ಯದಲ್ಲಿ ಮಾಧ್ಯಮದವವರ ಪ್ರಶ್ನೆಗೆ ಉತ್ತರಿಸಿದ ಅವರು, ಮಂಗಳೂರಿನಲ್ಲಿ ನೂತನ ಮಹಿಳಾ ಠಾಣೆ, ಬೆಳ್ಳಾರೆಯಲ್ಲಿ ಪೂರ್ಣ ಪ್ರಮಾಣದ ಪೊಲೀಸ್ ಠಾಣೆ ಶೀಘ್ರ ಆರಂಭವಾಗಲಿದೆ. ಸುಬ್ರಹ್ಮಣ್ಯಕ್ಕೆ ಎಸೈ ನೇಮಕಕ್ಕೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News