ಸವಣೂರಿನಲ್ಲಿ ನಿರಂತರ ಕಳ್ಳತನ: ಪ್ರತಿಭಟನೆಯ ಎಚ್ಚರಿಕೆ

Update: 2016-07-15 13:28 GMT

ಪುತ್ತೂರು, ಜು.15: ತಾಲೂಕಿನ ಸವಣೂರು ಪ್ರದೇಶದಲ್ಲಿ ಮನೆ ಹಾಗೂ ಗೋಶಾಲೆಗಳಿಂದ ಗೋವು ಕಳ್ಳತನ, ಅಡಿಕೆ ಕಳ್ಳತನ, ಗಾಂಜಾ ಮಾರಾಟ ನಿರಂತರವಾಗಿ ನಡೆಯುತ್ತಿದೆ. ಇದೇ ರೀತಿ ಮುಂದುವರಿದರೆ ಸವಣೂರಿನಲ್ಲಿ ಪ್ರತಿಭಟನೆ ನಡೆಸುವುದು ಅನಿವಾರ್ಯವಾಗಲಿದೆ ಎಂದು ಸವಣೂರು ಹಿಂದೂ ಯುವಸೇನೆ ಅಧ್ಯಕ್ಷ ಪ್ರಜ್ವಲ್ ರೈ ತಿಳಿಸಿದ್ದಾರೆ.

ಅವರು ಶುಕ್ರವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಸವಣೂರು ಭಾಗದಲ್ಲಿ ಕಾಸರಗೋಡು ಭಾಗದಿಂದ ಗಾಂಜಾ ತಂದು ಮಾರಾಟ ಮಾಡುವ ಪ್ರಕ್ರಿಯೆ ನಡೆಯುತ್ತಿದೆ. ಶಾಲೆಗಳ ಬದಿಗಳಲ್ಲಿ, ಗೂಡಂಗಡಿಗಳಲ್ಲಿ ಇದನ್ನು ಮಾರಾಟ ಮಾಡಲಾಗುತ್ತಿದೆ. ಇದರಿಂದ ಮಕ್ಕಳು ಹಾಗೂ ಯುವಜನತೆ ಹಾದಿ ತಪ್ಪುವ ಆಪಾಯವಿದೆ. ಇಲ್ಲಿನ ಹಲವಾರು ಮನೆಗಳಿಂದ ಹಾಗೂ ಗೋಶಾಲೆಯಿಂದಲೂ ಗೋವುಗಳನ್ನು ಕಳ್ಳತನ ಮಾಡಲಾಗಿದೆ. ಅಂಗಡಿಗಳಲ್ಲಿ ಕಳ್ಳತನ ನಡೆದಿದೆ. ಇಲ್ಲಿನ ಸೊಸೈಟಿಯಿಂದಲೂ ಅಡಿಕೆ ಕಳ್ಳತನ ನಡೆದಿದೆ. ಆದರೂ ಪೊಲೀಸರು ಯಾವುದೇ ಪ್ರಕರಣ ಪತ್ತೆ ಮಾಡಿಲ್ಲ ಎಂದು ಹೇಳಿದರು. 

ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದ ಸುಳ್ಯ ಮಂಡಲ ಬಿಜೆಪಿ ಕಾರ್ಯದರ್ಶಿ ದಿನೇಶ್ ಮೆದು ಮಾತನಾಡಿ, ಜಿಲ್ಲೆಯಲ್ಲಿ ಮರಳು ನೀತಿಯನ್ನು ಸಂಪೂರ್ಣ ಬದಲಿಸಬೇಕು. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿನ ಮರಳು ಇತರ ಜಿಲ್ಲೆಗಳಿಗೆ ಹೋಗುವುದನ್ನು ನಿರ್ಬಂಧಿಸಬೇಕು. ಇದಕ್ಕೆ ಸರಕಾರ ಮಧ್ಯಪ್ರವೇಶ ಮಾಡಬೇಕು ಎಂದರು.

ಮರಳು ಹಿಡಿಯಲು ತೋರಿಸುವ ಉತ್ಸಾಹದ ಕಾಲು ಭಾಗದಷ್ಟು ತೋರಿಸಿದ್ದರೂ ಸವಣೂರಿನಲ್ಲಿ ನಡೆಯುತ್ತಿರುವ ಕಳ್ಳತನವನ್ನು ಪತ್ತೆ ಮಾಡಬಹುದಾಗಿತ್ತು ಎಂದರು. ಸುದ್ದಿಗೋಷ್ಠಿಯಲ್ಲಿ ಗ್ರಾಮ ಪಂಚಾಯತ್ ಸದಸ್ಯ ಸುರೇಶ್ ಅಂಗಡಿಮೂಲೆ, ಯುವಸೇನೆಯ ಉಪಾಧ್ಯಕ್ಷ ಪ್ರಶಾಂತ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News