ಎಂಡೋಸಲ್ಫಾನ್ ಸಂತ್ರಸ್ತರಿಗೆ ಪುನರ್ವಸತಿ ಗ್ರಾಮ

Update: 2016-07-15 18:45 GMT

ಕಾಸರಗೋಡು, ಜು.15: ಎಂಡೋ ಸಲ್ಫಾನ್ ಸಂತ್ರಸ್ತರಿಗೆ ಆರಂಭಿಸಲು ಉದ್ದೇಶಿಸಿರುವ ಪುನರ್ವಸತಿ ಗ್ರಾಮಕ್ಕೆ ಕೇರಳ ರಾಜ್ಯ ಸರಕಾರ ಅನುಮೋದನೆ ನೀಡಿದೆ.
  ಆರೋಗ್ಯ ಸಚಿವೆ ಪಿ.ಕೆ. ಶೈಲಜಾ ಅಧ್ಯಕ್ಷತೆಯಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ.
 ಪುನರ್ವಸತಿ ಗ್ರಾಮವು ಮುಳಿಯಾರಿನ 25 ಎಕರೆ ಸ್ಥಳದಲ್ಲಿ ತಲೆಯೆತ್ತಲಿದೆ. ಎರಡು ಹಂತಗಳಲ್ಲಿ ಈ ಯೋಜನೆ ಪೂರ್ಣಗೊಳಿಸಲು ಸರಕಾರ ನಿರ್ಧರಿಸಿದ್ದು, ಪ್ರಥಮ ಹಂತದ ಕಾಮಗಾರಿ ಶೀಘ್ರ ಆರಂಭವಾಗಲಿದೆ. ಮಾಸ್ಟರ್ ಪ್ಲಾನ್ ತಯಾರಿಸಿದರೂ ಅನುದಾನ ಲಭಿಸದೆ ಇದ್ದುದರಿಂದ ಈ ಯೋಜನೆ ಗೊಂದಲಕ್ಕೆ ಸಿಲುಕಿತ್ತು. ಇದೀಗ ಈ ಯೋಜನೆ ಪೂರ್ಣಗೊಳಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ಕಾರ್ಯಯೋಜನೆ ರೂಪಿಸಿದೆ. ಯೋಜನೆಗೆ ನಿಗದಿಯಾ ಗಿರುವ ಸ್ಥಳವನ್ನು ಈಗಾಗಲೇ ಸಮಾಜ ಕಲ್ಯಾಣ ಇಲಾಖೆಗೆ ಹಸ್ತಾಂತರಿಸಲಾಗಿದೆ. 25.08 ಕೋ.ರೂ. ಅನುದಾನ ಅಂದಾಜಿಸಲಾಗಿದೆ. ಪ್ರಸ್ತುತ ಪ್ರಭಾಕರನ್ ಆಯೋಗವು ಐದು ಕೋಟಿ ರೂ.ವನ್ನು ಈ ಯೋಜನೆಗಾಗಿ ಮೀಸಲಿಟ್ಟಿದೆ. ಮೊದಲ ಹಂತದಲ್ಲಿ ಈ ಅನುದಾನವನ್ನು ಬಳಸಲಾಗುವುದು. ಎರಡನೆ ಹಂತಕ್ಕೆ ಅನುದಾನ ಬಿಡುಗಡೆ ಮಾಡಲು ರಾಜ್ಯ ಸರಕಾರ ತೀರ್ಮಾನಿಸಿದೆ.
 ಕಳೆದ ಯುಡಿಎಫ್ ಸರಕಾರದ ಅವಧಿಯಲ್ಲಿ ಈ ಯೋಜನೆಗೆ ರೂಪುರೇಷೆ ನೀಡಲಾಗಿತ್ತು. ಆದರೆ ಅನುದಾನದ ಕೊರತೆ ಹಾಗೂ ಇತರ ಕಾರಣಗಳಿಂದಾಗಿ ಯೋಜನೆ ಆರಂಭ ಹಂತದಲ್ಲೇ ಸ್ಥಗಿತಗೊಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News