ಕುಲಶೇಖರ ಕೊಂಗೂರು ಮಠ ರಸ್ತೆಯಲ್ಲಿ ಭೂಕುಸಿತ!

Update: 2016-07-16 12:13 GMT

ಮಂಗಳೂರು,ಜು.16: ಕುಲಶೇಖರದ ಕೊಂಗೂರು ಮಠ ರಸ್ತೆಯಲ್ಲಿ ದಕ್ಷಿಣ ರೈಲ್ವೇಯಿಂದ ರೈಲ್ವೇ ಹಳಿಯನ್ನು ದ್ವಿಪಥಗೊಳಿಸುವ ಕಾರ್ಯ ನಡೆಯುತ್ತಿದ್ದ ಜಾಗದಲ್ಲಿ ಭೂಕುಸಿತಗೊಂಡು ತಡೆಗೋಡೆ ಕುಸಿದು ಅಪಾಯದ ಸ್ಥಿತಿ ನಿರ್ಮಾಣವಾಗಿದೆ.

ಇಂದು ಮಧ್ಯಾಹ್ನದ ವೇಳೆಗೆ ಈ ಭೂಕುಸಿತ ಸಂಭವಿಸಿದ್ದು, ಈ ಸಂದರ್ಭ ಅಲ್ಲಿ ಕಾಮಗಾರಿ ನಡೆಸುತ್ತಿದ್ದ ಕಾರ್ಮಿಕರು ಊಟಕ್ಕೆ ಹೋಗಿದ್ದರೆಂದು ಹೇಳಲಾಗಿದೆ. ಘಟನೆಯಿಂದ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲವಾದರೂ, ಆ ರಸ್ತೆಯ ಇನ್ನೊಂದು ಪಕ್ಕದಲ್ಲಿರುವ ಮನೆಗಳು ಹಾಗೂ ಆ ರಸ್ತೆಯಲ್ಲಿ ವಾಹನ ಸಂಚಾರ ಮಾತ್ರವಲ್ಲದೆ ಜನರ ಓಡಾಟವೂ ಅಪಾಯವನ್ನು ಸೂಚಿಸುತ್ತಿದೆ.

ಕಾಮಗಾರಿಗಾಗಿ ಕೆಳಗಡೆ ನಿಲ್ಲಿಸಲಾಗಿದ್ದ ಜೆಸಿಬಿಯನ್ನು ಇಂದು ಮೇಲೆ ತರುವ ವೇಳೆ ಈ ಘಟನೆ ಸಂಭವಿಸಿದೆ. ಆದ್ದರಿಂದ ಜೆಸಿಬಿಯನ್ನು ಅಲ್ಲೇ ಬಿಟ್ಟು ಅದರ ಚಾಲಕ ಹಾರಿ ಮುಂದಾಗಬಹುದಾಗಿದ್ದ ಅಪಾಯದಿಂದ ಪಾರಾಗಿದ್ದಾರೆ. ಪ್ರಸ್ತುತ ಜೆಸಿಬಿ ಭೂಕುಸಿತಗೊಂಡಿರುವಲ್ಲಿ ಸಿಲುಕಿಕೊಂಡಿದೆ.

ಪ್ರಗತಿ ಇಂಜನಿಯರ್ಸ್ ಹಾಗೂ ಎಸ್.ಕೆ. ಎಂಟರ್‌ಪ್ರೈಸಸ್ ಸಂಸ್ಥೆಗಳಿಂದ ಹಳಿ ದ್ವಿಪಥಗೊಳಿಸುವ ಕಾಮಗಾರಿ ನಡೆಯುತ್ತಿದ್ದರೂ, ಮಳೆಗಾಲದ ಹಿನ್ನೆಲೆಯಲ್ಲಿ ಕಳೆದ ಕೆಲವು ದಿನಗಳಿಂದ ಕಾಮಗಾರಿ ನಿಲ್ಲಿಸಲಾಗಿತ್ತು. ಪ್ರಸ್ತುತ ಅಲ್ಲಿ ಗುತ್ತಿಗೆ ಕಾರ್ಮಿಕರು ತಡೆಗೋಡೆ ಕಾಮಗಾರಿಯನ್ನು ನಿರ್ವಹಿಸುತ್ತಿದ್ದಾರೆ. ಆದರೆ ಘಟನೆಯಿಂದ ಯಾವುದೇ ಹಾನಿ ಆಗಿಲ್ಲ. ರೈಲ್ವೇ ಸಂಚಾರಕ್ಕೂ ಹಾನಿ ಆಗಿಲ್ಲ’’ ಎಂದು ಎಸ್‌ಕೆ ಇಂಜಿನಿಯರ್ ಸಂಸ್ಥೆಯ ಪ್ರತಿನಿಧಿಯೊಬ್ಬರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News