ಉಡುಪಿ ಮೈನ್ ಶಾಲೆಗೆ ವಲಸೆ ಕಾರ್ಮಿಕರ ಮಕ್ಕಳೇ ಜೀವಾಳ
ಉಡುಪಿ, ಜು.16: 131 ವರ್ಷಗಳನ್ನು ಕಂಡ ಉಡುಪಿ ನಗರದ ಹೃದಯಭಾಗದಲ್ಲಿರುವ ಮಹಾತ್ಮ ಗಾಂಧಿ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ (ಮೈನ್ ಶಾಲೆ)ಗೆ ವಲಸೆ ಕಾರ್ಮಿಕರ ಮಕ್ಕಳು ಜೀವಾಳವಾಗಿದ್ದು, ಅದನ್ನು ಉಳಿಸಿ ಮುನ್ನಡೆಸಿಕೊಂಡು ಬರುತ್ತಿದ್ದಾರೆ. ವಲಸೆ ಕಾರ್ಮಿಕರ ಮಕ್ಕಳಿಲ್ಲದೆ ಇರುತ್ತಿದ್ದಲ್ಲಿ ಸುಮಾರು 10-15 ವರ್ಷಗಳ ಹಿಂದೆಯೇ ಉಡುಪಿಯ ಮೈನ್ ಶಾಲೆ ಇತರ ಸರಕಾರಿ ಶಾಲೆಗಳಂತೆ ಬಾಗಿಲು ಮುಚ್ಚಿ ಇತಿಹಾಸದ ಪುಟ ಸೇರುತ್ತಿತ್ತು.
ನಗರದ ಕೆ.ಎಂ.ರಸ್ತೆಯ ನಗರಸಭೆ ಕಚೇರಿ ಮುಂದೆ ಇರುವ ಮೈನ್ ಶಾಲೆಯನ್ನು ಹಾಜಿ ಅಬ್ದುಲ್ಲಾ ಟ್ರಸ್ಟ್ ನೀಡಿದ ಜಾಗದಲ್ಲಿ ಆಗಿನ ಬ್ರಿಟಿಷ್ ಸರಕಾರ 1885ರಲ್ಲಿ ಸ್ಥಾಪಿಸಿತ್ತು. ದೇಶ ಕಂಡ ಖ್ಯಾತ ವಿಜ್ಞಾನಿ ಯು.ಆರ್. ರಾವ್, ಪೇಜಾವರ ಶ್ರೀ ಇದೇ ಶಾಲೆಯಲ್ಲಿ ಕಲಿತವರು. ಸಾಕಷ್ಟು ಮಂದಿಗೆ ವಿದ್ಯಾರ್ಜನೆ ನೀಡಿದ ಈ ಐತಿಹಾಸಿಕ ಶಾಲೆಯಲ್ಲಿ ಪ್ರಸ್ತುತ ಒಬ್ಬ ಸ್ಥಳೀಯ ವಿದ್ಯಾರ್ಥಿಯಿಲ್ಲ. ಸ್ಥಳೀಯ ಮಕ್ಕಳಿಂದಲೇ ತುಂಬಿ ಹೋಗಿದ್ದ ಈ ಶಾಲೆಯು 10-15 ವರ್ಷಗಳ ಹಿಂದೆ ಪೋಷಕರ ಆಂಗ್ಲ ಭಾಷೆಯ ವ್ಯಾಮೋಹಕ್ಕೆ ಬಲಿಯಾಗಿ ಮುಚ್ಚುವ ಹಂತಕ್ಕೆ ತಲುಪಿತು. ಕ್ರಮೇಣ ಈ ಶಾಲೆಗೆ ಸ್ಥಳೀಯ ಮಕ್ಕಳು ಬರುವುದು ಕಡಿಮೆಯಾಯಿತು. ಆ ಸಂದರ್ಭ ಈ ಶಾಲೆಗೆ ಜೀವ ಕೊಟ್ಟವರು ವಲಸೆ ಕಾರ್ಮಿಕರು. ಉದ್ಯೋಗ ಅರಸಿಕೊಂಡು ಉತ್ತರ ಕರ್ನಾಟಕದಿಂದ ಉಡುಪಿಗೆ ಬಂದು ಬೀಡಿನಗುಡ್ಡೆಯಲ್ಲಿ ನೆಲೆ ನಿಂತ ಕಾರ್ಮಿಕರು ತಮ್ಮ ಮಕ್ಕಳನ್ನು ಈ ಶಾಲೆಗೆ ಸೇರಿಸುವ ಮೂಲಕ ಶಾಲೆಯನ್ನು ಉಳಿಸಿದರು.
ಸುಮಾರು ಎಂಟು ವರ್ಷಗಳ ಹಿಂದೆ ಈ ಶಾಲೆಯಲ್ಲಿ ಇದ್ದ 150ಕ್ಕೂ ಅಧಿಕ ಮಕ್ಕಳಲ್ಲಿ ಏಳನೆ ತರಗತಿಯಲ್ಲಿ ಒಬ್ಬನೆ ಸ್ಥಳೀಯ ವಿದ್ಯಾರ್ಥಿಯಿದ್ದ. ಆ ನಂತರ ಈವರೆಗೆ ಯಾವುದೇ ಸ್ಥಳೀಯ ಮಕ್ಕಳು ಈ ಶಾಲೆಗೆ ದಾಖಲಾಗಿಲ್ಲ. ಪ್ರಸ್ತುತ ಒಂದರಿಂದ 7ನೆ ತರಗತಿಯವರೆಗೆ ಇರುವ ಈ ಶಾಲೆಯಲ್ಲಿ ಈ ಶೈಕ್ಷಣಿಕ ವರ್ಷದಲ್ಲಿ ಒಟ್ಟು 75 ಮಕ್ಕಳು ಕಲಿಯುತ್ತಿದ್ದಾರೆ. ಹಿಂದಿನ ವರ್ಷ 84 ಮಕ್ಕಳಿದ್ದರು. ಅವರೆಲ್ಲರು ವಲಸೆ ಕಾರ್ಮಿಕರ ಮಕ್ಕಳು. ಹೆಚ್ಚಿನವರು ಬಾಗಲಕೋಟೆ ಹಾಗೂ ಕೊಪ್ಪಳ ಜಿಲ್ಲೆಯವರು. ಇವರೆಲ್ಲ ಬೀಡಿನಗುಡ್ಡೆಯಲ್ಲಿ ವಾಸವಾಗಿದ್ದಾರೆ. ಈ ಶಾಲೆಯಲ್ಲಿ ಮುಖ್ಯ ಶಿಕ್ಷಕರು ಸೇರಿ ನಾಲ್ಕು ಮಂದಿ ಶಿಕ್ಷಕರಿದ್ದಾರೆ.
ಮಣ್ಣಿನ ಗೋಡೆಯ ಕಟ್ಟಡ
131 ವರ್ಷಗಳ ಹಿಂದೆ ಯಾವ ರೀತಿಯಲ್ಲಿ ಈ ಶಾಲೆಯ ಕಟ್ಟಡ ನಿರ್ಮಾಣವಾಗಿತ್ತೋ ಇಂದಿಗೂ ಅದೇ ಸ್ಥಿತಿಯಲ್ಲಿದೆ. ಅದೇ ಮಣ್ಣಿನ ಗೋಡೆ, ಅದೇ ಹೆಂಚುಗಳು ಈಗಲೂ ಇವೆ. ಹಾಗಾಗಿ ಈ ಶಾಲೆಗೆ ಕಾಯಕಲ್ಪ ದೊರಕಿಸುವುದು ಅತ್ಯಗತ್ಯವಾಗಿದೆ.
ದಿನನಿತ್ಯ ಸಾವಿರಾರು ವಾಹನಗಳು ಓಡಾಡುವ ನಗರದ ಪ್ರಮುಖ ರಸ್ತೆಯಾಗಿರುವ ಕೆ.ಎಂ.ಮಾರ್ಗಕ್ಕೆ ತಾಗಿಕೊಂಡೇ ಇರುವ ಈ ಶಾಲೆ ಸ್ಥಾಪನೆಯಾದ ಬಳಿಕ ಈವರೆಗೆ ದುರಸ್ತಿ ಕಂಡಿಲ್ಲ. ವಾಹನಗಳ ಓಡಾಟದಿಂದ ಇಡೀ ಶಾಲೆ ಕಂಪಿಸಿದಂತಾಗುತ್ತದೆ. ಮಳೆಗಾಲದಲ್ಲಿ ಭಾರೀ ಮಳೆಗೆ ಹೆಂಚಿನಡಿಯಲ್ಲಿ ನೀರು ಸೋರಿಕೆಯಾಗುತ್ತಿರುತ್ತದೆ. ಸದ್ಯಕ್ಕೆ ಈ ಕಟ್ಟಡದಲ್ಲಿ ಮೂರು ಕೊಠಡಿಗಳಿವೆ. ಎರಡು ಹಾಲ್‌ಗಳಲ್ಲಿ ಕ್ರಮವಾಗಿ 1-3 ಮತ್ತು 4-7ನೆ ತರಗತಿ ನಡೆಯುತ್ತವೆ. ಒಂದು ಕೊಠಡಿಯನ್ನು ಶಾಲಾ ಕಚೇರಿ ಯನ್ನಾಗಿ ಬಳಸಲಾಗುತ್ತಿದೆ. 19 ಸೆಂಟ್ಸ್ ಜಾಗದಲ್ಲಿ ಇರುವ ಈ ಶಾಲೆಗೆ ಆಟದ ಮೈದಾನವಿಲ್ಲ.
ಶಾಲೆಯು ಮುಖ್ಯರಸ್ತೆಯ ಅಂಚಿನಲ್ಲೇ ಇರುವು ದರಿಂದ ಬೆಳಗ್ಗೆ ಮಕ್ಕಳಿಗೆ ಮಾರ್ಚ್‌ಫಾಸ್ಟ್ ಮಾಡುವುದಕ್ಕೂ ಇಲ್ಲಿ ಸ್ಥಳಾವಕಾಶವಿಲ್ಲ. ಶಾಲಾ ಕಟ್ಟಡ ಪುನರ್‌ನಿರ್ಮಾಣಕ್ಕಾಗಿ ಹಳೆವಿದ್ಯಾರ್ಥಿ ಸಂಘ ಹಾಗೂ ಶಾಲಾ ಮುಖ್ಯಶಿಕ್ಷಕರು ಈಗಾಗಲೇ ಯೋಜನೆ ಸಿದ್ಧಪಡಿಸಿದ್ದಾರೆ. ಇದಕ್ಕೆ 25-30 ಲಕ್ಷ ರೂ. ಬೇಕಾಗಿದೆ. ಅದಕ್ಕೆ ಸಂಘ ಸರಕಾರದ ಮೊರೆಹೋಗಿದೆ. ಆದರೆ ಹಲವು ತಾಂತ್ರಿಕ ಕಾರಣಗಳಿಂದ ಅನುದಾನ ಮಂಜೂರಾಗುವುದು ವಿಳಂಬವಾಗುತ್ತಿದೆ. ಈ ಶಾಲೆ ಹಾಗೂ ವಳಕಾಡು ಶಾಲೆಯು ಒಂದೇ ವಾರ್ಡ್‌ನಲ್ಲಿರುವುದರಿಂದ ಇಲ್ಲಿನ ಮಕ್ಕಳ ಸಾರಿಗೆ ಸೌಲಭ್ಯಕ್ಕೆ ನೀಡುವ ಅನುದಾನ ಸ್ಥಗಿತಗೊಂಡಿದೆ. ಇದರಿಂದ ಈ ಶಾಲೆಯ ಮಕ್ಕಳು ಬೀಡಿನಗುಡ್ಡೆಯಿಂದ ಶಾಲೆಗೆ ಪ್ರತಿನಿತ್ಯ ನಡೆದುಕೊಂಡು ಬರುವಂತಾಗಿದೆ. ಅದೇ ರೀತಿ ಈ ಶಾಲೆಯನ್ನು ವಳಕಾಡು ಶಾಲೆಯೊಂದಿಗೆ ವಿಲೀನಗೊಳಿಸುವ ಯತ್ನ ಕೂಡ ನಡೆಯುತ್ತಿದೆ. ಸಾಕಷ್ಟು ಸಂಖ್ಯೆಯ ಮಕ್ಕಳಿಂದ ತುಂಬಿಹೋಗಿರುವ ವಳಕಾಡು ಶಾಲೆಯಲ್ಲಿ ಈ ಮಕ್ಕಳಿಗೆ ಅವಕಾಶ ಸಿಗುವುದು ಕಷ್ಟ. ಆದ್ದರಿಂದ ವಲಸೆ ಕಾರ್ಮಿಕರ ಮಕ್ಕಳು ಶಿಕ್ಷಣದಿಂದ ವಂಚಿತರಾಗುವ ಸಾಧ್ಯತೆ ಇದೆ ಎಂಬುದು ಶಾಲಾ ಮುಖ್ಯ ಶಿಕ್ಷಕ ಶಂಭು ಸುವರ್ಣ ಅವರ ಅಭಿಪ್ರಾಯ. ಶತಮಾನ ಕಂಡ ಉಡುಪಿ ಮೈನ್ ಶಾಲೆಯು ಸರಕಾರಿ ಶಾಲೆಗಳ ಸಮಸ್ಯೆ, ದುಸ್ಥಿತಿಗೆ ಕನ್ನಡಿಯಾಗಿದ್ದು, ಈ ಬಗ್ಗೆ ಸಂಬಂಧಪಟ್ಟವರು ಕ್ರಮಕೈಗೊಂಡು ಶಾಲೆಯನ್ನು ಉಳಿಸಬೇಕು ಎನ್ನುವುದು ನಾಗರಿಕರ ಅಭಿಮತ.
ಹಲವು ವರ್ಷಗಳಿಂದ ಉಡುಪಿಯಲ್ಲಿ ವಾಸವಾಗಿರುವ ನಮ್ಮ ಮಕ್ಕಳು ಇದೇ ಶಾಲೆಯಲ್ಲಿ ಕಲಿಯುತ್ತಿದ್ದಾರೆ. ಎಲ್ಲ ರೀತಿಯ ಸೌಲಭ್ಯಗಳೊಂದಿಗೆ ಶಿಕ್ಷಕರು ಉತ್ತಮ ಬೋಧನೆ ನೀಡುತ್ತಿದ್ದಾರೆ. ನನ್ನ ದೊಡ್ಡ ಮಗಳು ದ್ಯಾಮವ್ವ ಒಂದನೆ ತರಗತಿಯಿಂದ ಈ ಶಾಲೆಯಲ್ಲೇ ಕಲಿಯುತ್ತಿದ್ದಾಳೆ. ಈಗ ಆಕೆ 7ನೆ ತರಗತಿ ವಿದ್ಯಾರ್ಥಿನಿ. ಈ ಶಾಲೆಯು ಇನ್ನೂ ಹಳೆಯ ಕಟ್ಟಡದಲ್ಲೇ ಇದೆ. ಮಕ್ಕಳ ಹಿತದೃಷ್ಟಿಯಿಂದ ಅದನ್ನು ದುರಸ್ತಿ ಮಾಡುವುದು ಅವಶ್ಯ.
-ಸುವರ್ಣ ಬಾಗಲಕೋಟೆ, ಪೋಷಕರು
ಹಲವು ಮೇಧಾವಿಗಳು ಕಲಿತ ಈ ಶಾಲೆಯನ್ನು ಈಗ ಉಳಿಸಿರುವುದು ವಲಸೆ ಕಾರ್ಮಿಕರ ಮಕ್ಕಳು. ಈಗ ಶಾಲೆಯ ಕಟ್ಟಡ ಅಭಿವೃದ್ಧಿಗೆ ಸರಕಾರದ ಮೊರೆ ಹೋಗಿದ್ದೇವೆ. ಸರಕಾರ ಕೂಡಲೇ ಅನುದಾನ ಮಂಜೂರು ಮಾಡಿ ನೂರಾರು ವರ್ಷಗಳ ಇತಿಹಾಸ ಹೊಂದಿರುವ ಈ ಶಾಲೆಯನ್ನು ಉಳಿಸಬೇಕಾಗಿದೆ.
-ತಲ್ಲೂರು ಶಿವರಾಮ ಶೆಟ್ಟಿ, ಅಧ್ಯಕ್ಷರು, ಹಳೆ ವಿದ್ಯಾರ್ಥಿ ಸಂಘ
ನೂರಾರು ವರ್ಷಗಳ ಮಣ್ಣಿನ ಕಟ್ಟಡ ಈಗ ನಾದುರಸ್ತಿ ಯಲ್ಲಿದೆ. ಈ ಬಗ್ಗೆ 2011 ರಲ್ಲಿ ಶಾಲೆಯ ನೂತನ ಕಟ್ಟಡ ನಿರ್ಮಾಣಕ್ಕಾಗಿ ಸಂಬಂಧಪಟ್ಟ ಅಧಿಕಾರಿಗಳಿಗೆ ಪತ್ರ ಬರೆದಿದ್ದೆ. ಆದರೆ ಈವರೆಗೆ ಈ ಕಟ್ಟಡಕ್ಕೆ ಅನುದಾನ ದೊರೆತಿಲ್ಲ. ಶಾಲೆಯ ನಿರ್ವಹಣೆಗೆ ದೊರೆಯುವ ಹಣದಲ್ಲಿ ಪೈಂಟ್ ಹಚ್ಚಲಾಗುತ್ತಿದೆಯೇ ಹೊರತು ಯಾವುದೇ ದುರಸ್ತಿ ಕಾರ್ಯ ಈವರೆಗೆ ನಡೆದಿಲ್ಲ.-ಶಂಭು ಸುವರ್ಣ, ಮುಖ್ಯಶಿಕ್ಷಕ