ಟರ್ಕಿಯಲ್ಲಿ ಸೇನಾ ದಂಗೆ: ಪುತ್ತೂರಿನ ಈಜು ಪಟು ವೈಷ್ಣವ್ ಸುರಕ್ಷಿತ

Update: 2016-07-17 09:34 GMT

ಪುತ್ತೂರು, ಜು.17: ಟರ್ಕಿಯಲ್ಲಿ ನಡೆದ ಸೈನಿಕ ಕ್ರಾಂತಿಯ ಸಂದರ್ಭದಲ್ಲಿ ಪುತ್ತೂರಿನಿಂದ ಈಜು ಸ್ಪರ್ಧೆಗೆ ಭಾರತವನ್ನು ಪ್ರತಿನಿಧಿಸಿದ ವೈಷ್ಣವ್ ಹೆಗ್ಡೆ ಸುರಕ್ಷಿತವಾಗಿರುವುದಾಗಿ ತಿಳಿದು ಬಂದಿದೆ. 

ಟರ್ಕಿ ದೇಶದ ಟ್ರಾಬ್ಝೋನ್ ಎಂಬಲ್ಲಿ ನಡೆಯುತ್ತಿರುವ 19ರ ವಯೋಮಿತಿಯ ವಿಶ್ವ ಸ್ಕೂಲ್ ಗೇಮ್ಸ್ ಈಜು ಸ್ಪರ್ಧೆಯಲ್ಲಿ ಪುತ್ತೂರಿನ ಸಂತ ಫಿಲೋಮಿನಾ ಕಾಲೇಜ್ ನ ವಿದ್ಯಾರ್ಥಿ ವೈಷ್ಣವ್ ಹೆಗ್ಡೆ ಭಾರತ ದೇಶವನ್ನು ಪ್ರತಿನಿಧಿಸುತ್ತಿದ್ದು, ಅವರು ಅಲ್ಲಿ ಸುರಕ್ಷಿತವಾಗಿದ್ದಾರೆ ಎಂದು ವೈಷ್ಣವ್ ಅವರ ತಾಯಿ ಪ್ರತಿಮಾ ಹೆಗ್ಡೆ ತಿಳಿಸಿದ್ದಾರೆ. 

ಟರ್ಕಿಗೆ ತೆರಳಿರುವ ತಮ್ಮ ಪುತ್ರ ವೈಷ್ಣವ್ ಹೆಗ್ಡೆ ತಮ್ಮ ಜೊತೆ ದೂರವಾಣಿ ಸಂಪರ್ಕದಲ್ಲಿದ್ದು, ಅವರು ಅಲ್ಲಿ ಸುರಕ್ಷಿತರಾಗಿದ್ದಾರೆ.

ಟ್ರಾಭ್ಝೋನ್ ನಲ್ಲಿರುವ ವೈಷ್ಣವ್ ಹೆಗ್ಡೆ ಜು.18ರಂದು ಭಾರತಕ್ಕೆ ಹಿಂದಿರುಗಲಿದ್ದಾರೆ ಎಂದು ಪ್ರತಿಮಾ ಹೆಗ್ಡೆ ತಿಳಿಸಿದ್ದಾರೆ. 

ಟರ್ಕಿಯಲ್ಲಿ ನಡೆಯಲಿರುವ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಲು ಭಾರತದಿಂದ 148 ವಿದ್ಯಾರ್ಥಿಗಳು  ಟರ್ಕಿಗೆ ತೆರಳಿದ್ದಾರೆ. ಎಲ್ಲರೂ ಸುರಕ್ಷಿತರಾಗಿದ್ದಾರೆ. ಸ್ಪರ್ಧೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ಭಾರತಕ್ಕೆ ಹಿಂದಿರುಗುವ ಹಾದಿಯಲ್ಲಿ ಟರ್ಕಿಯ ಅಂಕಾರಾ ಮತ್ತು ಇಸ್ತಾಂಬುಲ್ ಎದುರಾಗುತ್ತದೆ. ಅಂಕಾರಾದಲ್ಲಿ ದಂಗೆ ಸ್ಪೋಟಗೊಂಡಿದ್ದರೂ ಈಗಾಗಲೇ ಅಲ್ಲಿನ ಸರಕಾರ ದಂಗೆಯನ್ನು ಅಡಗಿಸುವಲ್ಲಿ ಯಶಸ್ವಿಯಾಗಿದೆ. ಆದ್ದರಿಂದ ಹಿಂದಿರುಗಲು ಯಾವುದೇ ಸಮಸ್ಯೆಯಾಗದು ಎಂಬ ಆಶಾ ಭಾವನೆ ನಮ್ಮದಾಗಿದೆ ಎಂದು ವಿದ್ಯಾರ್ಥಿಗಳ ಕೋಚ್ ಸೀತಾರಾಮ್ ಸಾಹೋ ಅವರು ತಮಗೆ ತಿಳಿಸಿರುವುದಾಗಿ ಪ್ರತಿಮಾ ಹೆಗ್ಡೆ ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News