ರಾಜ್ಯ ಸರಕಾರದಿಂದ ಕೇಂದ್ರದ ಅನುದಾನ ದುರುಪಯೋಗ: ಕರಂದ್ಲಾಜೆ

Update: 2016-07-17 15:34 GMT

ಉಡುಪಿ, ಜು.17: ಕೇಂದ್ರ ಸರಕಾರವು ರಾಜ್ಯದಲ್ಲಿನ ಬರಗಾಲಕ್ಕೆ ಬಿಡುಗಡೆ ಮಾಡಿರುವ 1,520 ಕೋಟಿ ರೂ. ಹಣ ದುರುಪಯೋಗವಾಗಿದ್ದು, ಕುಡಿಯುವ ನೀರು, ಗ್ರಾಮೀಣಾಭಿವೃದ್ಧಿಗೆ ನೀಡಿರುವ 3,600 ಕೋಟಿ ರೂ. ಅನುದಾನವನ್ನು ಖರ್ಚು ಮಾಡದೆ ಬ್ಯಾಂಕಿನಲ್ಲಿ ಇಟ್ಟು ಬಡ್ಡಿಯನ್ನು ಪಡೆಯ ಲಾಗುತ್ತಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಸಂಸದೆ ಶೋಭಾ ಕರಂದ್ಲಾಜೆ ಆರೋಪಿಸಿದ್ದಾರೆ.

ಉಡುಪಿಯ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇವರಿಗೆ ಅಭಿವೃದ್ಧಿ ಬೇಡವಾಗಿದೆ. ಸರ್ವಾಧಿಕಾರಿ ಧೋರಣೆಗೆ ಅಂಟಿಕೊಂಡಿರುವ ಸಿದ್ಧರಾಮಯ್ಯ, ಪ್ರಧಾನಿ ನರೇಂದ್ರ ಮೋದಿ ಕರೆದ ನೀತಿ ಆಯೋಗದ ಸಭೆಗೆ ಹೋಗದೆ ಗೈರು ಹಾಜರಾಗಿದ್ದಾರೆ. ಅಡಿಕೆಗೆ ಬೆಂಬಲ ಬೆಲೆ ನೀಡುವುದಾಗಿ ಕೇಂದ್ರ ವಾಣಿಜ್ಯ ಸಚಿವರು ಹೇಳಿದ್ದರೂ ರಾಜ್ಯ ಸರಕಾರ ಯಾವುದೇ ಪ್ರಸ್ತಾವನೆಯನ್ನು ಸಲ್ಲಿಸಿಲ್ಲ. ಕೋಡಿಕನ್ಯಾಣ ಬಂದರಿಗೆ 6.5ಕೋ.ರೂ. ಅನುದಾನ ಬಿಡುಗಡೆಯಾಗಿ ಒಂದೂವರೆ ವರ್ಷ ಕಳೆದರೂ ರಾಜ್ಯ ಸರಕಾರ ಇನ್ನು ಟೆಂಡರ್ ಕರೆದಿಲ್ಲ ಎಂದು ದೂರಿದರು.

ರಾಜ್ಯದಲ್ಲಿ ಅಕ್ರಮ ಮರಳು ಮಾಫಿಯಾ ಬೃಹದಾಕಾರವಾಗಿ ಬೆಳೆದಿದ್ದು, ರಾಜ್ಯದ 7 ಸಾವಿರ ಕೋ.ರೂ. ಮರಳುಗಾರಿಕೆಯಿಂದ ಲೂಟಿ ಮಾಡ ಲಾಗಿದೆ. ಇದರಲ್ಲಿ ಕಾಂಗ್ರೆಸ್ ಮುಖಂಡರು, ಶಾಸಕರು ಹಾಗೂ ಅವರ ಮಕ್ಕಳು ಭಾಗಿಯಾಗಿದ್ದಾರೆ ಎಂದು ಅವರು ಆಪಾದಿಸಿದರು.

ರಾಜ್ಯದಲ್ಲಿ ನಡೆಯುತ್ತಿರುವ ಪೊಲೀಸ್ ಅಧಿಕಾರಿಗಳ ಮೇಲಿನ ದಬ್ಬಾಳಿಕೆ ಹಾಗೂ ರಾಜ್ಯ ಸರ್ಕಾರ ನಡೆದುಕೊಳ್ಳುತ್ತಿರುವ ರೀತಿಯನ್ನು ಸಂಸತ್‌ನಲ್ಲಿ ಪ್ರಸ್ತಾಪಿಸಲಾಗುವುದು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ. ರಾಜ್ಯದಲ್ಲಿ ದಕ್ಷ ಅಧಿಕಾರಿಗಳ ಮೇಲೆ ದಬ್ಬಾಳಿಕೆ ನಡೆಯುತ್ತಿದೆ. ಹಾಗಾಗಿ ಐಎಎಸ್, ಐಪಿಎಸ್ ಅಧಿಕಾರಿಗಳು ರಾಜ್ಯದಲ್ಲಿ ಕೆಲಸ ಮಾಡಲು ಹಿಂದೇಟು ಹಾಕುತ್ತಿದ್ದಾರೆ ಎಂದು ಅವರು ಟೀಕಿಸಿದರು.

ವಿರೋಧದ ನಡುವೆಯೇ ಸದನದಲ್ಲಿ 4 ನಿಮಿಷದಲ್ಲಿ 5 ಬಿಲ್ ಪಾಸ್ ಮಾಡಿದ್ದಾರೆ. ಸೋಮವಾರಕ್ಕೆ ಸದನ ಮುಂದೂಡಿರುವುದರಲ್ಲಿಯೂ ಸಂಚು ಅಡಗಿದೆ. ಡಿವೈಎಸ್ಪಿಗಳಾದ ಕಲ್ಲಪ್ಪಹಂಡೀಬಾಗ್ ಮತ್ತು ಗಣಪತಿ ಆತ್ಮಹತ್ಯೆ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕು. ಸಚಿವ ಜಾರ್ಜ್ ಸೇರಿದಂತೆ ಪೊಲೀಸ್ ಇಲಾಖೆಯ ಉನ್ನತ ಅಧಿಕಾರಿಗಳಾದ ಮೋಹಂತಿ ಮತ್ತು ಪ್ರಸಾದ್ ವಿರುದ್ಧವೂ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಶೋಭಾ ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News