ಉಡುಪಿ: ಜಲ-ಪರಿಸರ ಜಾಗೃತಿ ಸಮಾವೇಶ

Update: 2016-07-17 18:24 GMT

ಉಡುಪಿ, ಜು.17: ಯಾವುದೇ ಪ್ರತಿಫಲ ಇಲ್ಲದೆ ಪ್ರತಿಯೊಂದು ಜೀವಿಗಳಿಗೆ ಸಹಕಾರಿಯಾಗುವ ಮರಗಳು ಇಂದು ಅತಿಹೆಚ್ಚು ಹಿಂಸೆಗೆ ಒಳಗಾಗಿ ನಾಶವಾಗುತ್ತಿದೆ. ಇದರ ರಕ್ಷಣೆಗೆ ಎಲ್ಲರೂ ಪಣ ತೊಡಬೇಕಾಗಿದೆ ಎಂದುಪರ್ಯಾಯ ಪೇಜಾವರ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದ್ದಾರೆ.

ಉಡುಪಿ ಶ್ರೀ ಕೃಷ್ಣ ಮಠ ಪರ್ಯಾಯ ಪೇಜಾವರ ಮಠದ ಆಶ್ರಯದಲ್ಲಿ ಉಡುಪಿ ರೋಟರಿ ಕ್ಲಬ್‌ಗಳ ಸಹಕಾರದೊಂದಿಗೆ ರವಿವಾರ ರಾಜಾಂಗಣದಲ್ಲಿ ಆಯೋಜಿಸಲಾದ ಜಲ ಹಾಗೂ ಪರಿಸರ ಜಾಗೃತಿ ಸಮಾವೇಶದಲ್ಲಿ ಅವರು ಆಶೀರ್ವಚನ ನೀಡಿದರು.
ಎರಡು ವರ್ಷಗಳ ಪರ್ಯಾಯ ಅವಧಿಯಲ್ಲಿ ಒಂದು ಕೋಟಿ ಸಸಿಗಳನ್ನು ವಿತರಿಸುವ ಗುರಿ ಹೊಂದಲಾಗಿದ್ದು, ಅದರಲ್ಲಿ ಈಗಾಗಲೇ 73 ಸಾವಿರ ಗಿಡಗಳನ್ನು ವಿತರಿಸಲಾಗಿದೆ ಎಂದು ಪೇಜಾವರ ಶ್ರೀ ತಿಳಿಸಿದರು.

ಪೇಜಾವರ ಕಿರಿಯ ಯತಿ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ವೃಕ್ಷರಕ್ಷ ವಿಶ್ವರಕ್ಷ ಕುರಿತು ಉಪನ್ಯಾಸ ನೀಡಿ, ತಾಪಮಾನ ಏರಿಕೆಯ ಬಿಸಿ ಇಂದು ನಮ್ಮ ಗ್ರಾಮಗಳಿಗೂ ತಟ್ಟಿದೆ. ಇದರಿಂದ ಕುಡಿಯುವ ನೀರಿಗೂ ತತ್ವಾರ ಉಂಟಾಗುತ್ತಿದೆ. ವಾಹನಗಳ ಮೂಲಕ ಪರಿಸರವನ್ನು ಮಲಿನ ಮಾಡಲಾಗುತ್ತಿದೆ ಎಂದರು. ನಮ್ಮ ಬದುಕಿಗೆ ಅವಶ್ಯವಾಗಿರುವ ಪರಿಸರದ ಬಗ್ಗೆ ಕಾಳಜಿ ತೋರಿಸದೆ ನಮ್ಮ ಬದುಕನ್ನು ನಾವೇ ಹಾಳು ಮಾಡುತ್ತಿದ್ದೇವೆ. ಇದನ್ನು ಸರಿಪಡಿಸಲು ಮರಗಳ ರಕ್ಷಣೆಯೇ ಪರಿಹಾರ ಮಾರ್ಗ. ಈಗಲೇ ನಾವು ಎಚ್ಚೆತ್ತುಕೊಳ್ಳದಿದ್ದರೆ ಮುಂದೆ ಅಪಾಯವನ್ನು ಎದುರಿಸಬೇಕಾದಿತು ಎಂದು ಸ್ವಾಮೀಜಿ ಎಚ್ಚರಿಕೆ ನೀಡಿದರು.

ಸಂಪನ್ಮೂಲ ವ್ಯಕ್ತಿಗಳಾಗಿ ಜಲಸಂರಕ್ಷಣ ತಜ್ಞ ಹಾಗೂ ಅಂಕಣಕಾರ ರಾಧಾಕೃಷ್ಣ ಭಡ್ತಿ, ಪರಿಸರ ತಜ್ಞ ಮಂಜುನಾಥ ಗೋಳಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ರೋಟರಿ ಸಹಾಯಕ ಗವರ್ನರ್ ಸುಬ್ರಹ್ಮಣ್ಯ ಬಾಸ್ರಿ, ಜಿಲ್ಲಾ ಸಭಾಪತಿ ಎಡ್ವಿನ್ ಜೋಸೆಫ್ ಆಳ್ವ ಉಪಸ್ಥಿತರಿದ್ದರು.

ಡಾ.ಸುರೇಶ್ ಶೆಣೈ ಸ್ವಾಗತಿಸಿದರು. ರಾಮಚಂದ್ರ ಉಪಾಧ್ಯಾಯ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಜೇಶ್ ಭಟ್ ಪಣಿಯಾಡಿ ವಂದಿಸಿದರು. ವಾಸುದೇವ ಪೆರಂಪಳ್ಳಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News