ಬಾಲ್ಯದಲ್ಲೇ ಮಕ್ಕಳಲ್ಲಿ ಕ್ರೀಡಾ ಮನೋಭಾವ ಬೆಳೆಸಿ

Update: 2016-07-18 10:23 GMT

ಮಂಗಳೂರು, ಜು.18: ಪೋಷಕರು ತಮ್ಮ ಮಕ್ಕಳನ್ನು ಆರೇಳು ವರ್ಷಗಳ ಪ್ರಾಯದಲ್ಲೇ ಓಡುವುದು, ಜಿಗಿಯುವುದು ಮೊದಲಾದ ಆಟಗಳ ಮೂಲಕ ಕ್ರೀಡಾ ಮನೋಭಾವ ಬೆಳೆಸಿದಲ್ಲಿ ಮುಂದೆ ಮಕ್ಕಳು ಕ್ರೀಡಾಲೋಕದಲ್ಲಿ ಸದೃಢ ಚಾಂಪಿಯನ್‌ಗಳಾಗಿ ಮೆರೆಯಲು ಸಾಧ್ಯವಾಗುತ್ತದೆ ಎಂದು ಟೆನಿಸ್‌ನ ಮಾಜಿ ಚಾಂಪಿಯನ್, ಖ್ಯಾತ ಟೆನಿಸ್ ಕೋಚ್ ಎರ್ನಿಕೋ ಪಿಪರ್ನೊ ಸಲಹೆ ನೀಡಿದ್ದಾರೆ.

ಮಂಗಳೂರಿನ ಸಿಟಿ ಸೆಂಟರ್ ಮಾಲ್‌ನ ನಾಲ್ಕನೆ ಮಹಡಿಯಲ್ಲಿರುವ ಕ್ರೀಡಾ ಸಾಮಗ್ರಿಗಳ ವಿಶೇಷ ಮಳಿಗೆಯಾದ ‘ಹಾಮ್ಸ್ ಮಾರ್ಟ್’ ವತಿಯಿಂದ ಆಯೋಜಿಸಲಾಗಿರುವ ‘ಸದೃಢ ಮತ್ತು ಉಜ್ವಲ’ ಹೆಸರಿನ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.

ಭಾರತೀಯ ಕ್ರೀಡಾ ಪಟುಗಳಲ್ಲಿ ಬಾಲ್ಯದಲ್ಲಿ ದೇಹದ ಸದೃಢತೆಗೆ ಹಾಗೂ ತರಬೇತಿಗೆ ನೀಡುವ ಪ್ರೋತ್ಸಾಹ, ಬೆಂಬಲದ ಕೊರತೆಯಿಂದಾಗಿ ಕ್ರೀಡಾ ಕ್ಷೇತ್ರದಲ್ಲಿ ವೈಯಕ್ತಿಕ ಚಾಂಪಿಯನ್‌ಗಳ ಸಂಖ್ಯೆ ವಿರಳಕ್ಕೆ ಕಾರಣವಾಗುತ್ತಿದೆ. ಟೆನಿಸ್ ಕ್ರೀಡೆಗೆ ಮಕ್ಕಳನ್ನು ಪೋಷಕರು ಕಳುಹಿಸುವಾಗ ಸುಮಾರು 11 ವರ್ಷಗಳು ಕಳೆದಿರುತ್ತದೆ. ಆದರೆ ಅಷ್ಟರವರೆಗೆ ಮಕ್ಕಳಿಗೆ ಓಡುವುದು, ಜಿಗಿಯುವುದು, ಹಾರುವುದು ಮೊದಲಾದ ಕ್ರೀಡೆಯ ಪ್ರಾಥಮಿಕ ಹಂತದ ತರಬೇತಿಯೂ ಇಲ್ಲದಿರುವುದರಿಂದ ಅವರನ್ನು ಇಂತಹ ಚಟುವಟಿಕೆಗಳಿಗೆ ಒಗ್ಗಿಸಿಕೊಳ್ಳಬೇಕಾದರೆ ಮೂರ್ನಾಲ್ಕು ವರ್ಷಗಳನ್ನು ವ್ಯಯಿಸಬೇಕಾಗುತ್ತದೆ. ಮಕ್ಕಳಿಗೆ ಸಿಕ್ಕಿದ್ದನ್ನೆಲ್ಲಾ ತಿನ್ನಿಸುವ ಪೋಷಕರು ಐದಾರು ವರ್ಷಗಳಲ್ಲಿಯೇ ಮಕ್ಕಳಿಗೆ ಆಹಾರ ಸೇವನೆ ಬಗ್ಗೆ ಶಿಸ್ತಿನ ಜತೆಗೇ ಕ್ರೀಡಾ ಚಟುವಟಿಕೆಗಳ ಬಗ್ಗೆ ಪ್ರೋತ್ಸಾಹಿಸಿದರೆ ಮುಂದೆ ಆ ಮಗು ಸದೃಢ ಚಾಂಪಿಯನ್ ಆಗುವುದರಲ್ಲಿ ಸಂದೇಹವೇ ಬೇಡ ಎಂದು ಹೇಳಿದರು.

ಟೆನ್ನಿಸ್ ಲೋಕದ ಚಾಂಪಿಯನ್‌ಗಳಾದ ಲಿಯಾಂಡರ್ ಪೇಸ್, ಮಹೇಶ್ ಭೂಪತಿ, ಸಾನಿಯಾ ಮಿರ್ಝಾ ಮೊದಲಾದವರಿಗೆ ಟೆನಿಸ್ ತರಬೇತುದಾರರೂ ಆಗಿರುವ ಎರ್ನಿಕೋ ತಮ್ಮ ಅನುಭವಗಳನ್ನು ಸುದ್ದಿಗಾರರ ಜತೆ ಹಂಚಿಕೊಂಡರು. ಲಿಯಾಂಡರ್ ಪೇಸ್‌ರ ತಂದೆಯ ಆಗ್ರಹದ ಮೇರೆಗೆ ಅವರಿಗೆ ಆರಂಭದಲ್ಲಿ ಉಚಿತವಾಗಿ ತರಬೇತು ನೀಡಲಾರಂಭಿಸಿದೆ. ಇದರ ಪರಿಣಾಮವಾಗಿಯೇ ಲಿಯಾಂಡರ್ 1991ರಲ್ಲಿ ಯುಎಸ್ ಓಪನ್ ಚಾಂಪಿಯನ್‌ಶಿಪ್ ತಮ್ಮದಾಗಿಸಿಕೊಂಡರು. ಕ್ರೀಡಾ ತರಬೇತುದಾರರು ಕೂಡಾ ತಮಗೇನು ಅಗತ್ಯ ಎಂಬುದಕ್ಕಿಂತ ಮುಖ್ಯವಾಗಿ ತಾನು ತರಬೇತುಗೊಳಿಸುತ್ತಿರುವ ಕ್ರೀಡಾಪಟುವಿನ ಸಾಮರ್ಥ್ಯ, ಆತನ ಬೇಕು ಬೇಡಗಳ ಬಗ್ಗೆ ಹೆಚ್ಚಿನ ಒತ್ತು ನೀಡಿದಾಗ ಕ್ರೀಡಾ ಪ್ರತಿಭೆ ಹೊರ ಹೊಮ್ಮಲು ಸಾಧ್ಯವಾಗುತ್ತದೆ. ಲಿಯಾಂಡರ್ ಹಲವಾರು ಏಳು ಬೀಳುಗಳ ನಡುವೆಯೂ ಪ್ರಸ್ತುತ 42ರ ಹರೆಯದಲ್ಲೂ ಟೆನಿಸ್ ಲೋಕದ ತಾರೆಯಾಗಿ ಕಂಗೊಳಿಸುತ್ತಿರಲು ಕಾರಣ, ಆತನೊಬ್ಬ ಮಹಾನ್ ಹೋರಾಟಗಾರ ಎಂದು ಬಣ್ಣಿಸಿದರು.

ಕೊಲ್ಕತ್ತಾದಲ್ಲಿ ತನ್ನ ಎರ್ನಿಕೋ ಪಿಪರ್ನೊ ಟೆನ್ನಿಸ್ ಟ್ರಸ್ಟ್ ಮೂಲಕ ತಾನೂ ನಾಲ್ಕೈದು ಮಂದಿ ಯುವ ಟೆನ್ನಿಸ್ ಕ್ರೀಡಾಪಟುಗಳಿಗೆ ಬೆಂಬಲ ನೀಡುತ್ತಿರುವುದಾಗಿ ಹೇಳಿದ ಪಿಪರ್ನೊ, 1971ರ ಅವಧಿಯಲ್ಲಿ ಕ್ರೀಡೆಯನ್ನು ವೃತ್ತಿಯಾಗಿಸಿದವರ ಸಂಖ್ಯೆ ಬೆರಳೆಣಿಕೆಯಷ್ಟಿದ್ದರೆ, ಪ್ರಸ್ತುತ ಬ್ಯಾಡ್ಮಿಂಟನ್, ಕಬಡ್ಡಿ ಮೊದಲಾದ ಕ್ರೀಡೆಗಳ ಮೂಲಕ ಕ್ರೀಡೆಯನ್ನೇ ವೃತ್ತಿಯಾಗಿಸಿಕೊಂಡು ಜೀವನ ಸಾಗಿಸುತ್ತಿರುವ ಸಂಖ್ಯೆ ಸಾವಿರಾರು ಆಗಿದೆ. ಅದೆಷ್ಟೋ ಸಂಖ್ಯೆಯ ಕ್ರೀಡಾಪಟುಗಳು ಕ್ರೀಡೆಯ ಮೂಲಕ ಉಜ್ವಲ ಭವಿಷ್ಯವನ್ನು ಕಂಡುಕೊಂಡಿದ್ದಾರೆ. ಇಂದು ಕ್ರೀಡೆಗೆ ಹೆಚ್ಚಿನ ಸೌಲಭ್ಯಗಳಿರುವುದರಿಂದ ಪೋಷಕರು ತಮ್ಮ ಮಕ್ಕಳನ್ನು ಕೇವಲ ನಾಲ್ಕು ಗೋಡೆಗಳ ಮಧ್ಯೆ ಕಂಪ್ಯೂಟರ್ ಗೇಮ್‌ಗಳಿಗೆ ಸೀಮಿತಗೊಳಿಸುವ ಬದಲು ಮೈದಾನದಲ್ಲಿ ದೇಹಕ್ಕೆ ವ್ಯಾಯಾಮ ನೀಡುವ ಕ್ರೀಡೆಗಳಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಬೇಕು ಎಂದು ಅವರು ಅಭಿಪ್ರಾಯಿಸಿದರು.

ಈ ಸಂದರ್ಭ ಉಪಸ್ಥಿತರಿದ್ದ ಮಾಜಿ ರಣಜಿ ಕ್ರಿಕೆಟ್ ಆಟಗಾರ ಅರ್ಜಿತ್ ಘೋಷ್ ಮಾತನಾಡಿ, ಕ್ರೀಡೆಯು ದೈಹಿಕ ಹಾಗೂ ಮಾನಸಿಕ ದೃಢತೆಯ ಜತೆಗೆ ಜೀವನ ಕೌಶಲ್ಯವನ್ನು ಕಲಿಸುತ್ತದೆ ಎಂದರು. ಕ್ರೀಡಾ ಮನೋಭಾವದ, ಕ್ರೀಡೆಯನ್ನು ತನ್ನದಾಗಿಸಿಕೊಂಡವರು ಜೀವನದಲ್ಲಿ ಎದುರಾಗುವ ಯಾವುದೇ ರೀತಿಯ ಸಂಕಷ್ಟಗಳನ್ನು ಎದುರಿಸಲು ಸಮರ್ಥರಾಗಿರುತ್ತಾರೆ ಎಂದು ಅವರು ಹೇಳಿದರು.

ಒಲಿಂಪಿಕ್ಸ್‌ನ ಟೆನ್ನಿಸ್ ಮಿಕ್ಸ್‌ಡ್ ಡಬಲ್ಸ್‌ನಲ್ಲಿ ಭರವಸೆ: ಎರ್ನಿಕೋ ಪಿಪರ್ನೊ

ಪ್ರಸಕ್ತ ಸಾಲಿನ ಒಲಿಂಪಿಕ್ಸ್‌ನಲ್ಲಿ ಟೆನ್ನಿಸ್‌ನಲ್ಲಿ ಮಿಕ್ಸ್‌ಡ್ ಡಬಲ್ಸ್‌ನಲ್ಲಿ ರೋಹನ್ ಮತ್ತು ಸಾನಿಯಾ ಮಿರ್ಝಾ ಮೇಲೆ ಸಾಕಷ್ಟು ಭರವಸೆ ಇದೆ. ಸಿಂಗಲ್ಸ್‌ನಲ್ಲಿ ಲಿಯಾಂಡರ್ ಪೇಸ್ ಆಡುತ್ತಿದ್ದರೂ, ಅವರಿಗೆ 42 ವರ್ಷವಾಗಿರುವ ಕಾರಣ ಅತಿಯಾದ ಭರವಸೆಯನ್ನು ಇಟ್ಟುಕೊಳ್ಳಲು ಸಾಧ್ಯವಾಗದು. ಹಾಗಿದ್ದರೂ ಅದೃಷ್ಟ ಹೇಗಿದೆ ಎಂಬುದನ್ನು ಕಾದು ನೋಡಬೇಕಿದೆ ಎಂದು ಒಲಿಂಪಿಕ್ಸ್‌ನಲ್ಲಿ ಭಾರತೀಯ ಟೆನ್ನಿಸ್ ಕ್ರೀಡಾಗಳುಗಳ ಕುರಿತಂತೆ ಖ್ಯಾತ ಟೆನಿಸ್ ಕೋಚ್ ಎರ್ನಿಕೋ ಪಿಪರ್ನೊ ಅಭಿಪ್ರಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News